ADVERTISEMENT

‘ಭೀಮಾಶಕ್ತಿ’ ಈರುಳ್ಳಿ ಪರಿಚಯಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: ರಾಜ್ಯದಲ್ಲಿ ಬೆಳೆಯುವ ಈರುಳ್ಳಿಗೆ ರಫ್ತು ಗುಣಮಟ್ಟ ಇಲ್ಲ ಎಂಬ ಆರೋಪಕ್ಕೆ ಅಂತ್ಯ ಹಾಡಲು ‘ಭೀಮಾ ಶಕ್ತಿ’ ಹೆಸರಿನ ಈರುಳ್ಳಿ ತಳಿಯನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಬೆಳೆಗಾರರಿಗೆ ಪರಿಚಯಿಸಲು ಮುಂದಾಗಿದೆ.

ಧಾರವಾಡದ ಕೃಷಿ ಮೇಳದ ತೋಟಗಾರಿಕೆ ಬೆಳೆ ಪ್ರದರ್ಶನದಲ್ಲಿ ‘ಭೀಮಾಶಕ್ತಿ’ ತಳಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಾರರನ್ನು ಸೆಳೆಯಿತು. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಅಂಗ ಸಂಸ್ಥೆಯಾದ ಪುಣೆಯ ಕೇಂದ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ನಿರ್ದೇಶನಾಲಯ ಈ ತಳಿಯನ್ನು ಅಭಿವೃದ್ಧಿಪಡಿಸಿದೆ.

ಮಹಾರಾಷ್ಟ್ರದ ಭೀಮಾ ನದಿ ತೀರದ ಪ್ರದೇಶದಲ್ಲಿ ಇದನ್ನು ಅಭಿವೃದ್ಧಪಡಿಸಿರುವುದದರಿಂದ ಅದೇ ಹೆಸರಿನಿಂದ ಕರೆಯಲಾಗುತ್ತಿದೆ. ರಾಜ್ಯದ ಹವಾಗುಣ ಹಾಗೂ ಮಣ್ಣಿಗೆ ಈ ತಳಿ ಒಗ್ಗುವುದೇ ಎಂಬುದನ್ನು ಪರೀಕ್ಷಿಸಲು  ಎರಡು ವರ್ಷಗಳಿಂದ ಧಾರವಾಡದ ಕೃಷಿ ವಿವಿ ಆವರಣದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.

‘ಪ್ರಾಯೋಗಿಕ ಪರೀಕ್ಷೆಯಲ್ಲಿ ಹೆಕ್ಟೇರ್‌ಗೆ 40 ರಿಂದ 42 ಟನ್ ಬಂಪರ್‌ ಇಳುವರಿ ಬಂದಿದೆ. ರೈತರು ತಾಕಿನಲ್ಲಿ ಸರಾಸರಿ ಹೆಕ್ಟೇರ್‌ಗೆ 36 ರಿಂದ 38 ಟನ್ ಇಳುವರಿ ಬರಲಿದೆ’ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗದ ಮುಖ್ಯಸ್ಥ ಡಾ. ಪಿ.ಆರ್.ಧರ್ಮಟ್ಟಿ.
ಕೆಂಪು ಮಣ್ಣಿನಲ್ಲಿ ಫಸಲು ಈ ತಳಿ ನಾಟಿಗೆ ಮುಂಗಾರು ಹಂಗಾಮಿನ ಕೊನೆಯ ದಿನಗಳು (ಸೆಪ್ಟೆಂಬರ್–ಅಕ್ಟೋಬರ್) ಉತ್ತಮ ಕಾಲ. ರಾಜ್ಯದಲ್ಲಿ ವಿಜಾಪುರ, ಧಾರವಾಡ, ಚಿತ್ರದುರ್ಗ ಭಾಗದ ಕಪ್ಪು ಮತ್ತು ಕೆಂಪು ಮಣ್ಣಿನಲ್ಲಿ ಇದು ಉತ್ತಮ ಫಸಲು ನೀಡಲಿದೆ.

ಸಾಮಾನ್ಯವಾಗಿ ನಾಟಿ ಮಾಡಿದ ನಾಲ್ಕು ತಿಂಗಳಲ್ಲಿ ಕೊಯ್ಲಿಗೆ ಬರಲಿದೆ. ನಂತರ ಒಣಗಿಸಿ ನಾಲ್ಕು ತಿಂಗಳ ಕಾಲ ಕೆಡದಂತೆ ಇಡಬಹುದಾಗಿದೆ. ಮಾರ್ಚ್ ತಿಂಗಳಿನಿಂದ ಮೇ ವರೆಗೆ ದೇಶಾದ್ಯಂತ ಈರುಳ್ಳಿ  ಆವಕ  ಕಡಿಮೆಯಾಗುವುದರಿಂದ ಈ ಅವಧಿಯಲ್ಲಿ ಉತ್ತಮ ಬೆಲೆ ದೊರೆಯುವುದು. ಜೊತೆಗೆ ಈ ಅವಧಿಯಲ್ಲಿಯೇ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರು ರಫ್ತು ಅವಕಾಶ ಪಡೆಯುವುದರಿಂದ ನಮ್ಮ ರೈತರಿಗೂ ಅದರ ಸೌಲಭ್ಯ ದೊರೆಯಲಿದೆ ಎಂದು ಅವರು ಹೇಳುತ್ತಾರೆ.

200ಗ್ರಾಂ ತೂಕ
‘ಕಂದು ಬಣ್ಣದ ಭೀಮಾಶಕ್ತಿ ಈರುಳ್ಳಿಯ ಗಡ್ಡೆ ಕನಿಷ್ಠ 100 ಗ್ರಾಂನಿಂದ 200ಗ್ರಾಂವರೆಗೆ ತೂಗಲಿದೆ. ಫಂಗಸ್ (ಪರ್ಪಲ್ ಬ್ಲಾಚ್‌) ಬಾರದಂತೆ ಸೂಕ್ತ ಔಷಧಿ ಉಪಚಾರ ಮಾಡಿದಲ್ಲಿ ಹಾಗೂ ಅಗತ್ಯಕ್ಕೆ ತಕ್ಕಂತೆ ಕಳೆನಾಶಕ ಹಾಕಿದಲ್ಲಿ ಉತ್ತಮ ಬೆಳೆ ಸಾಧ್ಯ. ಹನಿ ನೀರಾವರಿ ಸೌಲಭ್ಯ ಇದ್ದಲ್ಲಿ ಬಂಪರ್ ಬೆಳೆ ತೆಗೆಯಬಹುದು. ಆದರೆ ಹೆಚ್ಚು ನೀರು ಬೇಡುವುದರಿಂದ ಮಳೆ ಆಶ್ರಯಿಸಿ ಇಳುವರಿ ಪಡೆಯಲು ಸಾಧ್ಯವಿಲ್ಲ’ ಎನ್ನುತ್ತಾರೆ.

ಈರುಳ್ಳಿ ಬೆಳೆಗಾರರಿಗೆ ಮುಂದಿನ ವರ್ಷದಿಂದ ಭೀಮಾಶಕ್ತಿ ತಳಿಯ ಬೀಜ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿಯೇ ದೊರೆಯಲಿದೆ. ಈ ಬಾರಿ ನಾಟಿ ಮಾಡಲು ಇಚ್ಛಿಸುವವರು ಡಾ. ವಿಶ್ವನಾಥ್, ಹಿರಿಯ ವಿಜ್ಞಾನಿ, ಕೇಂದ್ರೀಯ ಈರುಳ್ಳಿ ಮತ್ತು ಬೆಳ್ಳುಳ್ಳಿ ನಿರ್ದೇಶನಾಲಯ, ರಾಜಗುರು ನಗರ, ಪುಣೆ. ಫೋನ್ 02135–222026 ಈ ವಿಳಾಸಕ್ಕೆ ಡಿ.ಡಿ ಕಳುಹಿಸಬಹುದು. ಆಸಕ್ತ ರೈತರು ಹೆಚ್ಚಿನ ಮಾಹಿತಿಗೆ ಡಾ. ಪಿ.ಆರ್‌.ಧರ್ಮಟ್ಟಿ ಮೊಬೈಲ್: 9449070811 ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.