ADVERTISEMENT

107 ವಾಣಿಜ್ಯ ವಿಮಾನ ಮಾರಾಟ: ಬೋಯಿಂಗ್

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 17:35 IST
Last Updated 8 ಫೆಬ್ರುವರಿ 2011, 17:35 IST


ಬೆಂಗಳೂರು: ವಿಮಾನ ತಯಾರಿಕೆಯ ಅತಿದೊಡ್ಡ ಸಂಸ್ಥೆಯಾಗಿರುವ ಬೋಯಿಂಗ್, ಭಾರತಕ್ಕೆ 107 ವಾಣಿಜ್ಯ ವಿಮಾನಗಳನ್ನು ಮಾರಾಟ ಮಾಡಲಿದ್ದು ಇವುಗಳ ಪೈಕಿ 37 ಪ್ರಯಾಣಿಕರ ವಿಮಾನಗಳು ಸೇರಿವೆ ಎಂದು ಮಂಗಳವಾರ ಇಲ್ಲಿ ಪ್ರಕಟಿಸಿತು. ಈ ವಿಮಾನಗಳನ್ನು ಭಾರತಕ್ಕೆ ಪೂರೈಸುವ ಬಗ್ಗೆ ಸದ್ಯಕ್ಕೆ ಯಾವುದೇ ಕಾಲ ಮಿತಿ ವಿಧಿಸಲಾಗಿಲ್ಲ ಎಂದು ಬೋಯಿಂಗ್ ಇಂಡಿಯಾ ಅಧ್ಯಕ್ಷ ದಿನೇಶ್ ಕೇಸ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಭಾರತದಲ್ಲಿನ ತನ್ನ ಬಿಡಿಭಾಗ ಪೂರೈಕೆದಾರರು ಮತ್ತು ಪಾಲುದಾರರ ಜತೆ ವಾಣಿಜ್ಯ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸಲು ನಿರ್ಧರಿಸಿರುವುದಾಗಿಯೂ ಅವರು ನುಡಿದರು.ದೇಶಿ ವೈಮಾಂತರಿಕ್ಷ ಉದ್ದಿಮೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿ, ಭಾರತದ ಈ ವಲಯದ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದೂ ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು.

ಭಾರತದ ನಾಗರಿಕ ವಿಮಾನಯಾನ ಮತ್ತು ರಕ್ಷಣಾ ಉತ್ಪನ್ನಗಳಿಗೆ ಬೋಯಿಂಗ್ ಏಕೈಕ ಪೂರೈಕೆ ಪಾಲುದಾರ ಸಂಸ್ಥೆಯಾಗಿಯೂ ಕಾರ್ಯನಿರ್ವಹಿಸಲಿದೆ. ತಂತ್ರಜ್ಞಾನ ಅಭಿವೃದ್ಧಿ ಮತ್ತುಉದ್ಯೋಗ ಸೃಷ್ಟಿಗೆ 2.3 ಶತಕೋಟಿ ಡಾಲರ್‌ಗಳನ್ನು                (ರೂ10,580 ಕೋಟಿ) ಹೂಡಿಕೆ ಮಾಡಲು ಬದ್ಧವಾಗಿದೆ. ಅಂತರ್‌ರಾಷ್ಟ್ರೀಯ ವೈಮಾಂತರಿಕ್ಷ ಸರಣಿ ಪೂರೈಕೆ ವಹಿವಾಟಿನಲ್ಲಿ ಭಾರತದ ಕೈಗಾರಿಕೆಗಳಿಗೆ ಹೆಚ್ಚು ಅವಕಾಶಗಳನ್ನು ಒದಗಿಸಿಕೊಡಲೂ ಬೋಯಿಂಗ್ ನೆರವಾಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.