ADVERTISEMENT

12ವಲಯಗಳಲ್ಲಿ ಎಫ್‌ಡಿಐ ಮಿತಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 19:45 IST
Last Updated 17 ಜುಲೈ 2013, 19:45 IST
12ವಲಯಗಳಲ್ಲಿ ಎಫ್‌ಡಿಐ ಮಿತಿ ಹೆಚ್ಚಳ
12ವಲಯಗಳಲ್ಲಿ ಎಫ್‌ಡಿಐ ಮಿತಿ ಹೆಚ್ಚಳ   

ನವದೆಹಲಿ(ಪಿಟಿಐ): ಹೂಡಿಕೆ, ಉದ್ಯೋಗಾವಕಾಶ ಮತ್ತು ಆರ್ಥಿಕ ಪ್ರಗತಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಗಳವಾರ ಎರ ನೇ ಸುತ್ತಿನ `ವಿದೇಶಿ ನೇರ ಬಂಡವಾಳ ಹೂಡಿಕೆ'(ಎಫ್‌ಡಿಐ) ಸುಧಾರಣೆ ಕ್ರಮಗಳನ್ನು ಪ್ರಕಟಿಸಿದೆ. ದೂರಸಂಪರ್ಕ, ವಿಮೆ, ವಿದ್ಯುತ್ ವಲಯ ಸೇರಿದಂತೆ 12 ಕ್ಷೇತ್ರಗಳಲ್ಲಿ `ಎಫ್‌ಡಿಐ' ಮಿತಿಯನ್ನು ಹೆಚ್ಚಿಸಲಾಗಿದೆ.

ದೂರಸಂಪರ್ಕ  ವಲಯದಲ್ಲಿ ಶೇ 74 ರಷ್ಟಿದ್ದ `ಎಫ್‌ಡಿಐ' ಮಿತಿಯನ್ನು ಶೇ 100ಕ್ಕೆ ಹೆಚ್ಚಿಸಲಾಗಿದೆ. `ಸ್ವಯಂಚಾಲಿತ ಮಾರ್ಗದ ಮೂಲಕ ಶೇ 49ರಷ್ಟು ಮತ್ತು ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ(ಎಫ್‌ಐಪಿಬಿ) ಅನುಮತಿ ಪಡೆದು ಹೆಚ್ಚುವರಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಾಗಿದೆ. ಟೀ ಪ್ಲಾಂಟೇಷನ್ ಮತ್ತು ಸಂಪತ್ತು ನಿರ್ವಹಣೆ ಸಂಸ್ಥೆಗಳಿಗೂ ಇದೇ ಮಿತಿ ಮತ್ತು ಮಾದರಿ ಅನ್ವಯಿಸುತ್ತದೆ.

ಕೊರಿಯರ್ ಸೇವಾ ವಲಯದಲ್ಲಿ  ಸ್ವಯಂಚಾಲಿತ ಮಾರ್ಗದ ಮೂಲಕ ಶೇ 100ರಷ್ಟು `ಎಫ್‌ಡಿಐ'ಗೆ ಅವಕಾಶ ನೀಡಲಾಗಿದೆ. ಸಾಲ ಮಾಹಿತಿ ಸಂಸ್ಥೆಗಳಿಗೆ ಶೇ 74ರಷ್ಟು `ಎಫ್‌ಡಿಐ'ಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ದೇಶದ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಶೇ 26ರಷ್ಟಿದ್ದ `ಎಫ್‌ಡಿಐ' ಮಿತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.  ಈ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆ ಮಿತಿ ಹೆಚ್ಚಿಸಬೇಕೇ ಬೇಡವೇ ಎನ್ನುವುದನ್ನು ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ತೀರ್ಮಾನಿಸಲಿದೆ.

ವಿಮಾನ ನಿಲ್ದಾಣ, ಮಾಧ್ಯಮ, ಬಹು ಬ್ರಾಂಡ್ ಚಿಲ್ಲರೆ ವಹಿವಾಟು, ಜೌಷಧ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ `ಎಫ್‌ಡಿಐ' ಮಿತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿನ ಉನ್ನತ ಅಧಿಕಾರ ಹೊಂದಿರುವ ಸಚಿವರ ಸಮಿತಿ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ವಾಣಿಜ್ಯ ವ್ಯವಹಾರಗಳ ಕಾರ್ಯದರ್ಶಿ ಅರವಿಂದ್ ಮಯರಾಂ ಅಧ್ಯಕ್ಷತೆಯ ತಜ್ಞರ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ `ಎಫ್‌ಡಿಐ' ಮಿತಿ ಹೆಚ್ಚಿಸಲಾಗಿದೆ. ಈ ಸಮಿತಿ ಒಟ್ಟು 20 ಕ್ಷೇತ್ರಗಳಲ್ಲಿ `ಎಫ್‌ಡಿಐ' ಮಿತಿಯನ್ನು ಹೆಚ್ಚಿಸಬಹುದು ಎಂದು ಶಿಫಾರಸು ಮಾಡಿತ್ತು. ಆದರೆ, ಸಚಿವರ ಸಮಿತಿ ಸದ್ಯ 12 ವಲಯಗಳಲ್ಲಿ ಮಾತ್ರ ಮಿತಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ.

ಬಹುಬ್ರಾಂಡ್ ಚಿಲ್ಲರೆ ವಹಿವಾಟು ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ `ಎಫ್‌ಡಿಐ'ಗೆ ಅವಕಾಶ ನೀಡಿದ 10 ತಿಂಗಳ ಬಳಿಕ ಸರ್ಕಾರ ಈ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದೆ.

ದೆಹಲಿ ಸೇರಿದಂತೆ ಇತರೆ ರಾಜ್ಯಗಳಲ್ಲಿ ಈ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಮತ್ತು 2014ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಟೀಕೆಗಳೂ ರಾಜಕೀಯ ಪಕ್ಷಗಳಿಂದ ಕೇಳಿಬಂದಿವೆ.

ವಿಮಾ ವಲಯ
ವಿಮಾ ವಲಯದಲ್ಲಿ ಶೇ 26ರಷ್ಟಿದ್ದ `ಎಫ್‌ಡಿಐ' ಮಿತಿಯನ್ನು ಶೇ 49ಕ್ಕೆ ಹೆಚ್ಚಿಸಲಾಗಿದೆ. ಸ್ವಯಂಚಾಲಿತ ಮಾರ್ಗದ ಈ ಹೂಡಿಕೆಯಲ್ಲಿ ಕಂಪೆನಿಗಳು ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ. ಇದೇ ಮಾದರಿಯಲ್ಲಿ, `ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ'(ಎಫ್‌ಐಪಿಬಿ) ಮೂಲಕ ಒಂದೇ ಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ಶೇ 49ರಷ್ಟು `ಎಫ್‌ಡಿಐ' ತೊಡಗಿಸಲು ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ. ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲೂ ಶೀಘ್ರದಲ್ಲೇ ಮಿತಿ ಹೆಚ್ಚಿಸಲಾಗುವುದು ಎಂದು ಕೈಗಾರಿಕಾ ಸಚಿವ ಆನಂದ ಶರ್ಮಾ ಸಭೆ ಬಳಿಕ ಸುದ್ದಿಗಾರರಿಗೆ  ತಿಳಿಸಿದರು.

ಸದ್ಯ ಜಾರಿಯಲ್ಲಿರುವ `ಎಫ್‌ಐಪಿಬಿ' ಮಾರ್ಗದ ಬದಲಿಗೆ ಸ್ವಯಂಚಾಲಿತ ಮಾದರಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು, ಸರಕು ವಿನಿಮಯ ಕೇಂದ್ರಗಳು, ವಿದ್ಯುತ್ ವಲಯ, ಷೇರುಪೇಟೆಯಲ್ಲಿ `ಎಫ್‌ಡಿಐ' ಮಿತಿಯನ್ನು ಶೇ 49ರಷ್ಟು ಹೆಚ್ಚಿಸಲಾಗಿದೆ.

`ಎಫ್‌ಡಿಐ' ಹೂಡಿಕೆಯಲ್ಲಿ ಕಂಪೆನಿಗಳ ಮಾಲೀಕತ್ವ ಮತ್ತು ನಿಯಂತ್ರಣ ಯಾರದ್ದು ಎಂಬ ಪ್ರಶ್ನೆಗೆ, ಈ ಕುರಿತು ಹಣಕಾಸು ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಾಗುವುದು ಎಂದು ಶರ್ಮಾ ಹೇಳಿದರು.

ಪಾಲುದಾರ/ಎರಡನೇ ಕಂಪೆನಿಗಳ `ಮಾಲೀಕತ್ವ ಮತ್ತು ನಿಯಂತ್ರಣ'ಕ್ಕೆ ಸಂಬಂಧಿಸಿದಂತೆ `ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ'(ಸೆಬಿ) ಈಗಾಗಲೇ ಪ್ರಕಟಣೆ ಹೊರಡಿಸಿದೆ. ಮಾಲೀಕತ್ವ ಸಮಸ್ಯೆಯಿಂದ ಜೆಟ್ ಏರ್‌ವೇಸ್ ಕಂಪೆನಿಯ ಶೇ 24ರಷ್ಟು ಷೇರು ಮಾರಾಟಕ್ಕೆ `ಎಫ್‌ಐಪಿಬಿ' ತಡೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

`ಈ ಸುಧಾರಣೆ ಕ್ರಮಗಳಿಂದ ದೇಶಕ್ಕೆ ಹೆಚ್ಚಿನ ವಿದೇಶಿ ಹೂಡಿಕೆ ಹರಿದು ಬರಲಿದೆ. ವರ್ಷದಿಂದ ವರ್ಷಕ್ಕೆ `ಎಫ್‌ಡಿಐ' ಶೇ 25ರಷ್ಟು ಹೆಚ್ಚಲಿದೆ `ಎಂದು ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಉದ್ಯಮ ವಲಯ ಸ್ವಾಗತ
12 ವಲಯಗಳಲ್ಲಿ `ಎಫ್‌ಡಿಐ' ಮಿತಿ ಹೆಚ್ಚಿಸಿರುವ ಕ್ರಮವನ್ನು ಉದ್ಯಮ ವಲಯ ಸ್ವಾಗತಿಸಿದೆ. ಇದರಿಂದ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಗೆ ಉತ್ತೇಜನ ದೊರೆಯಲಿದೆ ಎಂದು `ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ'ದ(ಫಿಕ್ಕಿ) ಅಧ್ಯಕ್ಷೆ ನೈನಾ ಲಾಲ್ ಕಿದ್ವಾಯಿ ಅಭಿಪ್ರಾಯಪಟ್ಟಿದ್ದಾರೆ.

`ದೂರಸಂಪರ್ಕ ವಲಯದಲ್ಲಿ ಶೇ 100ರಷ್ಟು `ಎಫ್‌ಡಿಐ'ಗೆ ಅವಕಾಶ ನೀಡಿರುವುದು ಉತ್ತಮ ಕ್ರಮ. ಇದರ  ಜತೆಗೆ ರಕ್ಷಣಾ ವಲಯದಲ್ಲೂ ಶೇ 49ರಷ್ಟು `ಎಫ್‌ಡಿಐ'ಗೆ ಅವಕಾಶ ನೀಡಬೇಕು ಎಂದು  `ಅಸೋಚಾಂ' ಹೇಳಿದೆ.

ಎಡಪಕ್ಷಗಳ ವಿರೋಧ
ನವದೆಹಲಿ(ಪಿಟಿಐ):`
ಎಫ್‌ಡಿಐ' ಮಿತಿ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ `ದೇಶದ ಆರ್ಥಿಕತೆಯನ್ನು ವಿದೇಶಿ ಕಂಪೆನಿಗಳಿಗೆ ಒತ್ತೆ ಇಟ್ಟಿದೆ' ಎಂದು ಎಡಪಕ್ಷಗಳು ಟೀಕಾ ಪ್ರಹಾರ ನಡೆಸಿವೆ.

`ಹೆಚ್ಚಿನ ವಿದೇಶಿ ವಿನಿಮಯ ಆಕರ್ಷಿಸುವ ಮೂಲಕ ದೇಶದ ಚಾಲ್ತಿ ಖಾತೆ ಕೊರತೆ(ಸಿಎಡಿ) ತಗ್ಗಿಸಲು ಸರ್ಕಾರ ಇಂತಹ ದಿವಾಳಿ ನೀತಿ ಅನುಸರಿಸುತ್ತಿದೆ. ಕೆಲವು ವಲಯಗಳಲ್ಲಿ ಸ್ವಯಂ ಚಾಲಿತ ಮಾರ್ಗದ ಮೂಲಕ `ಎಫ್‌ಡಿಐ'ಗೆ ಅವಕಾಶ ನೀಡಲಾಗಿದೆ. ಇದು ದೇಶದ ಅರ್ಥ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ನಿರ್ಧಾರವಾಗಿದೆ ಎಂದು `ಸಿಪಿಎಂ' ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.