ADVERTISEMENT

1,200 ಟನ್ ರಫ್ತು ಗುರಿ

ಕ್ಯಾಂಪ್ಕೊ ಚಾಕೊಲೆಟ್ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಮಂಗಳೂರು: ಪುತ್ತೂರಿನಲ್ಲಿರುವ `ಕ್ಯಾಂಪ್ಕೊ' ಚಾಕೊಲೆಟ್ ಕಾರ್ಖಾನೆಯಲ್ಲಿ ಇತ್ತೀಚೆಗೆ 21 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಉತ್ಪಾದನಾ ಯಂತ್ರಗಳನ್ನು ಸ್ಥಾಪಿಸಲಾಗಿದ್ದು, ಕಾರ್ಖಾನೆಯ ವಾರ್ಷಿಕ ಚಾಕೊಲೆಟ್ ರಫ್ತು ಪ್ರಮಾಣವನ್ನು ಈಗಿನ 780 ಟನ್‌ನಿಂದ 1,200 ಟನ್‌ಗೆ ಹೆಚ್ಚಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಹೇಳಿದ್ದಾರೆ.

ಇದುವರೆಗೆ ಇತರೆ ಕಂಪೆನಿಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ಚಾಕೊಲೆಟ್ ತಯಾರಿಸಿಕೊಡುವ ಕೆಲಸ `ಕ್ಯಾಂಪ್ಕೊ'ದಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ `ಕ್ಯಾಂಪ್ಕೊ' ಚಾಕೊಲೆಟ್ ಉತ್ಪಾದನೆಗೆ ಹೆಚ್ಚಿನ ಗಮನ ಹರಿಸಲಾಗುವುದು, ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ಚಾಕೊಲೆಟ್ ಪಾನೀಯ ಆಫ್ರಿಕ ಖಂಡದ ಬೆನಿನ್, ಕ್ಯಾಮೆರಾನ್, ಜಾಂಬಿಯಾ, ಗಿನಿಯಾ, ಲಿಬೆನಾ ಮತ್ತು ಟೋಗೊ ದೇಶಗಳಿಗೆ ಪ್ರತಿ ತಿಂಗಳು ರವಾನೆಯಾಗುತ್ತಿದೆ ಎಂದು ಅವರು ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ ಆರು ಜಿಲ್ಲೆಗಳಲ್ಲಿ ಅಡಿಕೆಗೆ ಬಾಧಿಸಿರುವ ಕೊಳೆರೋಗದಿಂದ 1,800 ಕೋಟಿ ರೂಪಾಯಿಗೂ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿರುವ ಅಂದಾಜು ಇದ್ದು, ತಕ್ಷಣ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಶುಕ್ರವಾರ ಮುಖ್ಯಮಂತ್ರಿ ಅವರನ್ನು ನಿಯೋಗವೊಂದರ ಮೂಲಕ ಭೇಟಿ ಮಾಡಿ ಒತ್ತಾಯಿಸಲಾಗಿದೆ. ಚೀನಾ ಪ್ರವಾಸ ಮುಗಿಸಿ ಬಂದ ಬಳಿಕ ಅಡಿಕೆಗೆ ಪರಿಹಾರ ಪ್ಯಾಕೇಜ್ ಬಗ್ಗೆ ನಿರ್ಧಾರ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.