ADVERTISEMENT

162 ಅಂಶಗಳಿಗೆ ಕುಸಿದ ಸಂವೇದಿ ಸೂಚ್ಯಂಕ

ಏಜೆನ್ಸೀಸ್
Published 28 ಫೆಬ್ರುವರಿ 2018, 20:38 IST
Last Updated 28 ಫೆಬ್ರುವರಿ 2018, 20:38 IST

ಮುಂಬೈ: ಸತತ ಎರಡನೇ ದಿನವೂ ಮುಂಬೈ ಷೇರುಪೇಟೆ ಸೂಚ್ಯಂಕ ಕುಸಿತ ಕಂಡಿದೆ. ಬುಧವಾರ 162 ಅಂಶ ಕಳೆದುಕೊಂಡು 34,184 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ನ ಹೊಸ ಮುಖ್ಯಸ್ಥ ಜೆರೋಮ್ ಪಾವೆಲ್‌ ಅವರು ಬಡ್ಡಿದರ ಹೆಚ್ಚಿಸುವ ಬಗ್ಗೆ ಇಂಗಿತ ವ್ಯಕ್ತಪಡಿಸಿರುವುದು ಹಣದುಬ್ಬರ ಹೆಚ್ಚಳದ ಆತಂಕ ಮೂಡಿಸಿದೆ. ಇದು ದೇಶಿ ಹೂಡಿಕೆದಾರರ ಮೇಲೆ ಪ್ರಭಾವ ಬೀರಿತು. ತಯಾರಿಕಾ ವಲಯದ ವಹಿವಾಟು ನಾಲ್ಕು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿರುವುದು ಕೂಡ ಪೇಟೆಯ ಉತ್ಸಾಹವನ್ನು ಕುಂದಿಸಿದೆ. ಅಧಿಕ ಮಾರಾಟ ಒತ್ತಡದಿಂದ ವಿದೇಶಿ ಬಂಡವಾಳದ ಹೊರಹರಿವು ಕೂಡ ಸೂಚ್ಯಂಕದ ಓಟಕ್ಕೆ ಕಡಿವಾಣ ಹಾಕಿತು. ಇದರಿಂದ ಡಾಲರ್‌ ವಿರುದ್ಧ ರೂಪಾಯಿ ವಿನಿಮಯ ಮೌಲ್ಯ ಕೂಡ 44 ಪೈಸೆ ಇಳಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಕೂಡ 61 ಅಂಶ ಕಳೆದುಕೊಂಡು 10,492 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಒಂದು ಹಂತದಲ್ಲಿ 10,461 ಅಂಶಗಳ ಕನಿಷ್ಠ ಮಟ್ಟಕ್ಕೂ ತಲುಪಿತ್ತು.

ADVERTISEMENT

ರೂಪಾಯಿ ಬೆಲೆ ಇಳಿಕೆಯಾಗಿರುವುದರಿಂದ ಐಟಿ ಕ್ಷೇತ್ರದ ಷೇರುಗಳ ಮೌಲ್ಯ ಹೆಚ್ಚಳವಾಗಿದೆ. ಏಷ್ಯನ್‌ಪೇಂಟ್‌, ಎಸ್‌ಬಿಐ, ಪವರ್‌ ಗ್ರಿಡ್‌, ಆರ್‌ಐಲ್‌, ಹೀರೊ ಮೊಟೊಕ್ಯಾಪ್ ಮತ್ತು ಡಾ. ರೆಡ್ಡಿಸ್‌ ಸಂಸ್ಥೆಗಳ ಷೇರುಗಳು ಶೇ 0.52ರಷ್ಟು ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.