ADVERTISEMENT

17 ಸಾವಿರದ ಗಡಿ ಇಳಿದ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:30 IST
Last Updated 4 ಮೇ 2012, 19:30 IST
17 ಸಾವಿರದ ಗಡಿ ಇಳಿದ ಸೂಚ್ಯಂಕ
17 ಸಾವಿರದ ಗಡಿ ಇಳಿದ ಸೂಚ್ಯಂಕ   

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 4 ತಿಂಗಳ ನಂತರ ಮೊದಲ ಬಾರಿಗೆ 17 ಸಾವಿರದ ಗಡಿಯಿಂದ ಕೆಳಕ್ಕಿಳಿದಿದೆ!

ಮಾರಿಷಸ್ ಮೂಲದ ಹೂಡಿಕೆ ಮೇಲೆ  ತೆರಿಗೆ ವಿಧಿಸಲಾಗುತ್ತದೆಂಬ ಭೀತಿಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರ(ಎಫ್‌ಐಐ) ಚಟುವಟಿಕೆ ದಿಢೀರ್ ಹೆಚ್ಚಿದ್ದೇ ಸೂಚ್ಯಂಕ ಪ್ರತಾಪಕ್ಕೆ ಕುಸಿಯಲು ಮುಖ್ಯ ಕಾರಣ. ಜತೆಗೆ ವಿದೇಶಿ ವಿನಿಮಯ ಪೇಟೆಯಲ್ಲಿ ರೂ ಮೌಲ್ಯ ಕುಸಿತವೂ ಪೇಟೆಯಲ್ಲಿ ತಲ್ಲಣ ಮೂಡಿಸಿತು.

ಈ ಎಲ್ಲ ಬೆಳವಣಿಗೆಗಳಿಂದಾಗಿ ಶುಕ್ರವಾರದ ವಹಿವಾಟು ಅಂತ್ಯಕ್ಕೆ 320 ಅಂಶಗಳನ್ನು ಕಳೆದುಕೊಂಡು 16,831 ಅಂಶಗಳಿಗೆ `ಬಿಎಸ್‌ಇ ಸೆನ್ಸೆಕ್ಸ್~ ವಹಿವಾಟು ಕೊನೆಗೊಳಿಸಿತು.`ಹೂಡಿಕೆದಾರರ ದೃಷ್ಟಿಯಿಂದ 17 ಸಾವಿರ ಗಡಿ ಬಹಳ ಮಹತ್ವದ್ದಾಗಿದೆ.  ಸೂಚ್ಯಂಕ 17 ಸಾವಿರದ ಗಡಿ ಇಳಿದಿರುವುದರಿಂದ ಹೂಡಿಕೆದಾರರ ಆತ್ಮವಿಶ್ವಾಸ ಕುಗ್ಗಿಹೋಗಲಿದೆ~ ಎಂದು ಮಾರುಕಟ್ಟೆ ತಜ್ಞರು  ವಿಶ್ಲೇಷಿಸಿದ್ದಾರೆ.

ಕಳೆದ ಮೂರು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ ಒಟ್ಟಾರೆ  488 ಅಂಶಗಳನ್ನು ಕಳೆದುಕೊಂಡಿದ್ದು, ಜನವರಿ 30ರಂದು ದಾಖಲಾಗಿದ್ದ ಮಟ್ಟಕ್ಕೆ ಇಳಿಕೆ ಕಂಡಿದೆ.

ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 101 ಅಂಶಗಳನ್ನು ( ಶೇ 1.96) ಕಳೆದುಕೊಂಡು 5,086 ಅಂಶಗಳಿಗೆ ಕುಸಿಯಿತು. ಬ್ಯಾಂಕಿಂಗ್ ಮತ್ತು ಭಾರಿ ಯಂತ್ರೋಪಕರಣ ವಲಯದ ಷೇರುಗಳು ಗರಿಷ್ಠ ಮಟ್ಟದ ನಷ್ಟ ಅನುಭವಿಸಿದವು. ರಿಲಯನ್ಸ್ ಇಂಡಸ್ಟ್ರೀಸ್ ಮೇಲಿನ ದಂಡ ಪ್ರಮಾಣವನ್ನು ತೈಲ ಸಚಿವಾಲಯ ಹೆಚ್ಚಿಸಲಿದೆ ಎನ್ನುವ ಕಾರಣಕ್ಕೆ ರಿಲಯನ್ಸ್ ಷೇರುಗಳ ದರ ಶೇ 1.68ರಷ್ಟು ಕುಸಿತ ಕಂಡು 726.45ಕ್ಕೆ ಇಳಿಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.