ADVERTISEMENT

17 ಸಾವಿರ ಗಡಿ ದಾಟಿದ ಸೂಚ್ಯಂಕ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 19:30 IST
Last Updated 20 ಸೆಪ್ಟೆಂಬರ್ 2011, 19:30 IST

ಮುಂಬೈ (ಪಿಟಿಐ):  ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 345 ಅಂಶಗಳಷ್ಟು ಏರಿಕೆ ಕಂಡು  17 ಸಾವಿರದ ಗಡಿ ದಾಟಿದೆ.

ಡಾಲರ್ ಎದುರು ರೂಪಾಯಿ ಮೌಲ್ಯ ಎರಡು ವರ್ಷಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಸಾಫ್ಟ್‌ವೇರ್ ರಫ್ತು ವಹಿವಾಟು ಕಂಪೆನಿಗಳಿಗೆ ಹೆಚ್ಚಿನ ಲಾಭ ತರಲಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಐ.ಟಿ ವಲಯದ ಷೇರುಗಳು ಲಾಭ ಮಾಡಿಕೊಂಡವು. ದಿನದಂತ್ಯಕ್ಕೆ 17,099 ಅಂಶಗಳಿಗೆ ವಹಿವಾಟು ಕೊನೆಗೊಂಡಾಗ ಇನ್ಫೋಸಿಸ್, ವಿಪ್ರೊ, ಟಿಸಿಎಸ್ ಕಂಪೆನಿಗಳು ಹೆಚ್ಚಿನ ಲಾಭ ಗಳಿಸಿದವು.

ಇನ್ಫೋಸಿಸ್ ಮತ್ತು ಆರ್‌ಐಎಲ್ ಷೇರುಗಳ ಚೇತರಿಕೆಯು ಸೂಚ್ಯಂಕ 110 ಅಂಶಗಳಷ್ಟು ಜಿಗಿಯುವಂತೆ ಮಾಡಿತು. ಈ ಎರಡು ಕಂಪೆನಿಗಳ ಷೇರುಗಳು ಕ್ರಮವಾಗಿ ಶೇ 3.73 ಮತ್ತು ಶೇ 3.22ರಷ್ಟು ಏರಿಕೆ ಕಂಡವು.

ದೇಶದ ಐ.ಟಿ ರಫ್ತು ಸೇವೆಗಳ ಪ್ರಮುಖ ಮಾರುಕಟ್ಟೆ ಅಮೆರಿಕ ಮತ್ತು ಯೂರೋಪ್ ಆಗಿದ್ದು, ಇಲ್ಲಿಂದ ಶೇ 85ರಷ್ಟು ವರಮಾನ ಹರಿದು ಬರುತ್ತದೆ. ರೂಪಾಯಿ ಅಪಮೌಲ್ಯದಿಂದ ಕಂಪೆನಿಗಳ ವರಮಾನವೂ ಗಣನೀಯವಾಗಿ ಹೆಚ್ಚತೊಡಗಿದೆ. ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ ದಿನದ ವಹಿವಾಟಿನಲ್ಲಿ 108 ಅಂಶಗಳಷ್ಟು ಚೇತರಿಕೆ ಕಂಡು 5,140 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.