ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್ ರದ್ದು ಮಾಡಿದ 122 ಪರವಾನಗಿಗಳ 2ಜಿ ತರಂಗಾಂತರ ಹರಾಜಿಗೆ ಸಂಬಂಧಿಸಿದಂತೆ ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಪ್ರಸ್ತಾವ ಮಾಡಿದ್ದ ಕನಿಷ್ಠ ಮೊತ್ತಕ್ಕಿಂತಲೂ ಕಡಿಮೆ ದರವನ್ನು ಉನ್ನತ ಅಧಿಕಾರದ ಸಚಿವರ ಸಮಿತಿ (ಇಜಿಒಎಂ) ಕೇಂದ್ರ ಸಂಪುಟಕ್ಕೆ ಶಿಫಾರಸು ಮಾಡಿದೆ.
ಪುನರ್‌ರಚಿತ ಇಜಿಒಎಂ, ಗೃಹ ಸಚಿವ ಪಿ. ಚಿದಂಬರಂ ನೇತೃತ್ವದಲ್ಲಿ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ಶಿಫಾರಸು ಮಾಡಿದೆ. ಪ್ರತಿ ಮೆಗಾಹರ್ಟ್ಸ್ ಯೂನಿಟ್‌ಗೆ `ಟ್ರಾಯ್~ ಪ್ರಸ್ತಾವಿಸಿದ್ದ ಕನಿಷ್ಠ ಮೂಲ ದರ, ತರಂಗಾಂತರ ಬಳಕೆಯ ಶುಲ್ಕ ಮತ್ತು ದರ ಪಾವತಿಯ ನಿಯಮಗಳಂತಹ ಪ್ರಮುಖ ವಿಷಯಗಳ ಬಗ್ಗೆ ಸಭೆ ಚರ್ಚೆ ನಡೆಸಿತು.
`ಎರಡೂವರೆ ತಾಸು ನಡೆದ ಸಭೆಯಲ್ಲಿ ಮುಖ್ಯವಾಗಿ ಮೂರು ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಪ್ರತಿ ವಿಷಯಗಳ ಕುರಿತು ನಿರ್ದಿಷ್ಟ ಶಿಫಾರಸುಗಳನ್ನು ಮಾಡಲು ನಿರ್ಧರಿಸಲಾಯಿತು. ಈ ಶಿಫಾರಸಿನ ಬಗ್ಗೆ ಪ್ರಧಾನಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಂತಿಮ ನಿರ್ಧಾರ ಕೈಗೊಳ್ಳಲಿದೆ~ ಎಂದು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಇಜಿಒಎಂ ಮಾಡಿರುವ ಶಿಫಾರಸಿನ ವಿವರ ನೀಡಲು ಅವರು ನಿರಾಕರಿಸಿದರು.
`ಟ್ರಾಯ್~ ಪ್ರಸ್ತಾವಿಸಿದ್ದ ಮೊತ್ತಕ್ಕಿಂತ ಕಡಿಮೆ ದರವನ್ನು ಇಜಿಒಎಂ ಶಿಫಾರಸು ಮಾಡಿದ್ದರೂ ಕಡಿಮೆ ಮಾಡಿರುವ ಪ್ರಮಾಣ ತೀರಾ ಹೆಚ್ಚಲ್ಲ ಎಂದು ಮೂಲಗಳು ತಿಳಿಸಿವೆ.ತರಂಗಾಂತರದ ಪ್ರತಿ ಮೆಗಾಹರ್ಟ್ಸ್ ಯೂನಿಟ್‌ಗೆ ರೂ 3622 ಕೋಟಿ ಮೊತ್ತವನ್ನು ಕನಿಷ್ಠ ಮೂಲ ದರವನ್ನಾಗಿ ನಿಗದಿ ಮಾಡಬೇಕು ಎಂದು `ಟ್ರಾಯ್~ ಪ್ರಸ್ತಾವಿಸಿತ್ತು.
`ಟ್ರಾಯ್~ ಪ್ರಸ್ತಾವ ಒಪ್ಪಿಕೊಂಡರೆ ಗ್ರಾಹಕರಿಗೆ ಮೊಬೈಲ್ ದರ ಶೇ 100ರಷ್ಟು ಹೆಚ್ಚಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಕಂಪೆನಿಗಳು, ಕನಿಷ್ಠ ಹರಾಜು ದರವನ್ನು ಶೇ 80ರಷ್ಟು ಕಡಿತ ಮಾಡಬೇಕು ಎಂದು ಒತ್ತಾಯಿಸಿದ್ದವು.
2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತರಂಗಾಂತರ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಆಗಿನ ದೂರಸಂಪರ್ಕ ಸಚಿವ ಎ.ರಾಜಾ ಅವರು ಹಂಚಿಕೆ ಮಾಡಿದ್ದ 122 ಪರವಾನಗಿಗಳನ್ನು ರದ್ದು ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.