ADVERTISEMENT

20 ಲಕ್ಷ ಬ್ಯಾರೆಲ್‌ ತೈಲ ಆಮದು

ಮಂಗಳೂರು ತಲುಪಿದ ಅಬುಧಾಬಿಯ ಕಚ್ಚಾತೈಲ

​ಪ್ರಜಾವಾಣಿ ವಾರ್ತೆ
Published 21 ಮೇ 2018, 19:49 IST
Last Updated 21 ಮೇ 2018, 19:49 IST
ಮಂಗಳೂರಿನ ಪೆರ್ಮುದೆಯಲ್ಲಿರುವ ತೈಲ ಸಂಗ್ರಹಾಗಾರದಲ್ಲಿ ಅಬುಧಾಬಿ ತೈಲ ಕಂಪನಿಯ ಕಚ್ಚಾತೈಲ ಸಂಗ್ರಹಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ ಸುಧೀರ್‌ ಚಾಲನೆ ನೀಡಿದರು.
ಮಂಗಳೂರಿನ ಪೆರ್ಮುದೆಯಲ್ಲಿರುವ ತೈಲ ಸಂಗ್ರಹಾಗಾರದಲ್ಲಿ ಅಬುಧಾಬಿ ತೈಲ ಕಂಪನಿಯ ಕಚ್ಚಾತೈಲ ಸಂಗ್ರಹಿಸುವ ಕಾರ್ಯಕ್ಕೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ ಸುಧೀರ್‌ ಚಾಲನೆ ನೀಡಿದರು.   

ಮಂಗಳೂರು: ಯುಎಇ ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿಯ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಹೊತ್ತ ಹಡಗು ಮಂಗಳೂರಿಗೆ ಬಂದಿದ್ದು, ಸೋಮವಾರ ಪೆರ್ಮುದೆಯಲ್ಲಿರುವ ಭಾರತೀಯ ತೈಲ ಸಂಗ್ರಹ ಕಂಪನಿ (ಐಎಸ್‌ಪಿಆರ್‌)  ಕಂಪನಿಗೆ ಸೇರಿದ ಭೂಗತ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಶೇಖರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಜಂಟಿ ಕಾರ್ಯದರ್ಶಿ ಸಂಜಯ ಸುಧೀರ್‌, ‘ಒಟ್ಟು 58.6 ಲಕ್ಷ ಬ್ಯಾರೆಲ್‌ಗಳಷ್ಟು ಕಚ್ಚಾತೈಲವನ್ನು ಅಬುಧಾಬಿ ಕಂಪನಿ ಇಲ್ಲಿ ಸಂಗ್ರಹಿಸಲಿದೆ. ಸೋಮವಾರ 20 ಲಕ್ಷ ಬ್ಯಾರೆಲ್ ಕಚ್ಚಾತೈಲ ಇಲ್ಲಿಗೆ ಬಂದಿದೆ. ಉಳಿದ ಕಚ್ಚಾತೈಲವನ್ನು ಮಳೆಗಾಲದ ನಂತರ ಪೂರೈಸಲು ಕಂಪನಿ ನಿರ್ಧರಿಸಿದೆ’ ಎಂದರು.

‘ಮಂಗಳೂರಿನಲ್ಲಿ ಸಂಗ್ರಹಿಸಿದ ಕಚ್ಚಾತೈಲದ ಶೇ 30 ರಷ್ಟನ್ನು ಅಬುಧಾಬಿ ಕಂಪನಿಯು, ಭಾರತೀಯ ತೈಲ ಸಂಸ್ಕರಣಾ ಘಟಕಗಳಿಗೆ ಮಾರಾಟ ಮಾಡಲಿದೆ. ಒಂದು ವೇಳೆ ದೇಶದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆ ಉಂಟಾದಲ್ಲಿ ಈ ಕಚ್ಚಾತೈಲವನ್ನು ಭಾರತ ಸರ್ಕಾರ ಬಳಕೆ ಮಾಡಬಹುದಾಗಿದೆ.

ADVERTISEMENT

‘ಮಂಗಳೂರಿನ ತೈಲ ಸಂಗ್ರಹಾಗಾರದಲ್ಲಿ ತಲಾ 7.5 ಲಕ್ಷ ಟನ್ ಸಾಮರ್ಥ್ಯದ ಎರಡು ಕೋಣೆಗಳಿದ್ದು, ಇರಾನ್‌ನಿಂದ ಬಂದ 7.5 ಲಕ್ಷ ಟನ್‌ ಕಚ್ಚಾ ತೈಲವನ್ನು ಒಂದು ಕೋಣೆಯಲ್ಲಿ ಸಂಗ್ರಹಿಸಲಾಗಿದೆ. ಇನ್ನೊಂದು ಕೋಣೆಯಲ್ಲಿ ಅಬುಧಾಬಿ ಕಂಪನಿಯ ತೈಲವನ್ನು ಸಂಗ್ರಹಿಸಲಾಗುತ್ತಿದೆ’ ಎಂದರು.

ಮತ್ತೊಂದು ಸಂಗ್ರಹಾಗಾರ: ‘ಎರಡನೇ ಹಂತದಲ್ಲಿ ಪಾದೂರಿನಲ್ಲಿ ಹೆಚ್ಚುವರಿ 25 ಲಕ್ಷ ಟನ್ ಸಾಮರ್ಥ್ಯದ ಮತ್ತೊಂದು ಸಂಗ್ರಹಾಗಾರ ಹಾಗೂ ಒಡಿಶಾದ ಚಾಂಡಿಕೋಲನಲ್ಲಿ 40 ಲಕ್ಷ ಟನ್ ಸಾಮರ್ಥ್ಯದ ತೈಲ ಸಂಗ್ರಹಾಗಾರ ನಿರ್ಮಿಸಲು ಉದ್ದೇಶಿಸಲಾಗಿದ್ದು, ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.