ADVERTISEMENT

‘2018ರಲ್ಲಿ ದೇಶಿ ಐ.ಟಿ ವಲಯಕ್ಕೆ ಉತ್ತಮ ಭವಿಷ್ಯ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:42 IST
Last Updated 23 ಅಕ್ಟೋಬರ್ 2017, 19:42 IST
ವಿ. ಬಾಲಕೃಷ್ಣನ್‌
ವಿ. ಬಾಲಕೃಷ್ಣನ್‌   

ಹೈದರಾಬಾದ್‌: ಅಮೆರಿಕದ ಆರ್ಥಿಕತೆಯು ಉತ್ತಮ ಸಾಧನೆ ತೋರುತ್ತಿರುವುದರಿಂದ 2018ರಲ್ಲಿ ದೇಶಿ ಐ.ಟಿ ವಲಯದ ವಹಿವಾಟು ಕೂಡ ಚೇತರಿಕೆ ಕಾಣಲಿದೆ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಐ.ಟಿ ಸಂಸ್ಥೆಗಳಿಗೆ ಅಮೆರಿಕೆಯು ಅತಿದೊಡ್ಡ ಮಾರುಕಟ್ಟೆಯಾಗಿದೆ. ಅಲ್ಲಿನ ಅರ್ಥವ್ಯವಸ್ಥೆಯು ಚೇತರಿಕೆ ಹಾದಿಯಲ್ಲಿ ಇರುವುದರಿಂದ ಉದ್ದಿಮೆ ಸಂಸ್ಥೆಗಳು ತಂತ್ರಜ್ಞಾನಕ್ಕೆ ಮಾಡುವ ವೆಚ್ಚವು ಗಮನಾರ್ಹವಾಗಿ ಏರಿಕೆಯಾಗಲಿದೆ. ಅಲ್ಲಿನ ಗ್ರಾಹಕರಿಂದ ದೇಶಿ ಸಾಫ್ಟ್‌ವೇರ್‌ ಸೇವಾ ಸಂಸ್ಥೆಗಳಿಗೆ ಬೇಡಿಕೆಯೂ ಹೆಚ್ಚಲಿದೆ. ಇದರಿಂದ ಭಾರತದ ಐ.ಟಿ ಸಂಸ್ಥೆಗಳ ವಹಿವಾಟು ಏರಿಕೆ ಕಾಣಲಿದೆ’ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಅಭಿಪ್ರಾಯಪಟ್ಟಿದ್ದಾರೆ.

‘ಅಮೆರಿಕದ ಆರ್ಥಿಕತೆಯು ಗಮನಾರ್ಹ ಬೆಳವಣಿಗೆ ದಾಖಲಿಸುತ್ತಿದೆ. ಅಲ್ಲಿನ ಆರ್ಥಿಕ ಬೆಳವಣಿಗೆಯು ಶೇ 2 ರಿಂದ ಶೇ 2.5ರಷ್ಟಿದೆ. ಇದು ಅಲ್ಲಿನ ಅರ್ಥ ವ್ಯವಸ್ಥೆಯ ಪಾಲಿಗೆ ಅತ್ಯುತ್ತಮ ವೃದ್ಧಿ ದರವಾಗಿದೆ. ಗಾರ್ಟ್ನರ್‌ ವರದಿ ಪ್ರಕಾರ, ಈ ವರ್ಷ ಐ.ಟಿ ವೆಚ್ಚವು ಶೇ 4 ರಿಂದ ಶೇ 4.5ರಷ್ಟು ಏರಿಕೆಯಾಗಲಿದೆ. ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆ ಉತ್ತಮ ಸಾಧನೆ ತೋರುತ್ತಿರುವುದರಿಂದ ಭಾರತದ ಐ.ಟಿ ಸಂಸ್ಥೆಗಳು ತಮ್ಮ ವಹಿವಾಟು ಕೂಡ ವೃದ್ಧಿಯಾಗುವ ಬಗ್ಗೆ ಆಶಾವಾದ ತಳೆಯಬೇಕು.

ADVERTISEMENT

‘ಬೆಳವಣಿಗೆ ಉತ್ತಮವಾಗಿರುವುದರಿಂದ ಬಡ್ಡಿ ದರ ಕಡಿತದ ಬಗ್ಗೆ ಮಾತನಾಡಲಾಗುತ್ತಿದೆ.ನಿರುದ್ಯೋಗ ಪ್ರಮಾಣ ಕಡಿಮೆ ಇದೆ. ಕಾರ್ಪೊರೇಟ್‌ ತೆರಿಗೆ ಕಡಿತದ ಬಗ್ಗೆ ಟ್ರಂಪ್‌ ಸುಳಿವು ನೀಡಿದ್ದಾರೆ. ಅಮೆರಿಕದ ಆರ್ಥಿಕತೆಯ ಪ್ರಗತಿಯ ಹಾದಿಯಲ್ಲಿ ಸಾಗುವವರೆಗೆ ಭಾರತದ ಐ.ಟಿ ಸಂಸ್ಥೆಗಳಿಗೆ ವಹಿವಾಟು ವಿಸ್ತರಿಸಲು ಅವಕಾಶಗಳ ಹೆಬ್ಬಾಗಿಲು ತೆರೆದಿರುತ್ತದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.