ADVERTISEMENT

2020ಕ್ಕೆ ₨62,000 ಕೋಟಿ ಗುರಿ: ಶರ್ಮಾ

ಸಾಗರೋತ್ಪನ್ನ ರಪ್ತು ದ್ವಿಗುಣಗೊಳಿಸಲು ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 19:30 IST
Last Updated 11 ಜನವರಿ 2014, 19:30 IST

ಚೆನ್ನೈ (ಪಿಟಿಐ): ‘ಮೀನು, ಸೀಗಡಿ ಸೇರಿದಂತೆ ವಿವಿಧ ಸಮುದ್ರದಿಂದ ಉತ್ಪತ್ತಿಯಾಗುವ ಆಹಾರ ಪದಾರ್ಥಗಳ ರಪ್ತು ಪ್ರಮಾಣವನ್ನು ದ್ವಿಗುಣ­ಗೊಳಿಸಲು ಯೋಜನೆ ರೂಪಿಸಲಾಗಿದೆ. 2020ಕ್ಕೆ ರಫ್ತು ಮೌಲ್ಯ 1000  ಕೋಟಿ ಡಾಲರ್‌ (₨62,000 ಕೋಟಿ) ದಾಟುವ ನಿರೀಕ್ಷೆ ಇದೆ’ ಎಂದು ಕೇಂದ್ರ ವಾಣಿಜ್ಯ ಸಚಿವ ಆನಂದ ಶರ್ಮಾ ಹೇಳಿದರು.

‘ಸಾಗರೋತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ’ ಮತ್ತು ‘ಭಾರತೀಯ ಸಾಗರೋತ್ಪನ್ನ ರಫ್ತುದಾರರ ಸಂಸ್ಥೆ’ ಚೆನ್ನೈ ನಲ್ಲಿ ಶುಕ್ರವಾರ ಆಯೋಜಿಸಿದ್ದ ‘19ನೇ ಭಾರತ–ಅಂತರರಾಷ್ಟ್ರೀಯ ಸಾಗರೋತ್ಪನ್ನ ಪ್ರದರ್ಶನ–2014’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮುದ್ರದಲ್ಲಿ ಲಭ್ಯವಾಗುವ ಆಹಾರ ಉತ್ಪನ್ನಗಳ ರಫ್ತು 2014ರ ಮಾರ್ಚ್‌ ವೇಳೆಗೆ 430 ಕೋಟಿ ಡಾಲರ್‌ (₨43,000 ಕೋಟಿ) ತಲುಪಲಿದ್ದು,
ಮುಂದಿನ ವರ್ಷ  ಈ ಮೌಲ್ಯ ಸುಮಾರು 530 ಕೋಟಿ ಡಾಲರ್ (₨ 53,000 ಕೋಟಿ) ಗಡಿಯನ್ನು ದಾಟಲಿದೆ’ ಎಂದು ಅವರು ವಿಶ್ವಾಸ
ವ್ಯಕ್ತಪಡಿಸಿದರು.

‘ರಫ್ತು ಪ್ರಮಾಣ ಹೆಚ್ಚಿಸುವ ಸಲುವಾಗಿ ‘ಸಮುದ್ರ ಉತ್ಪನ್ನಗಳ ರಫ್ತು ಅಭಿ ವೃದ್ಧಿ ಪ್ರಾಧಿಕಾರ’ ಮತ್ತು ‘ಭಾರತೀಯ ಸಾಗರೋತ್ಪನ್ನ ರಫ್ತುದಾರರ
ಸಂಸ್ಥೆ’ ನೇತೃತ್ವದಲ್ಲಿ ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಶರ್ಮಾ ಇದೇ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.