ADVERTISEMENT

3ನೇ ದಿನವೂ ಸೂಚ್ಯಂಕ ಏರಿಕೆ

ರೂಪಾಯಿ ಚೇತರಿಕೆಯ ಪ್ರಭಾವ

ಪಿಟಿಐ
Published 28 ಮೇ 2018, 19:30 IST
Last Updated 28 ಮೇ 2018, 19:30 IST
3ನೇ ದಿನವೂ ಸೂಚ್ಯಂಕ ಏರಿಕೆ
3ನೇ ದಿನವೂ ಸೂಚ್ಯಂಕ ಏರಿಕೆ   

ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಕಂಡಿದ್ದು, ಕುಸಿತದ ಹಾದಿಯಲ್ಲಿದ್ದ ರೂಪಾಯಿ ಚೇತರಿಸಿಕೊಳ್ಳುತ್ತಿದೆ. ಹೀಗಾಗಿ ಷೇರುಪೇಟೆಗಳಲ್ಲಿ ಸತತ 3ನೇ ವಹಿವಾಟು ಅವಧಿಯಲ್ಲಿಯೂ ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 241 ಅಂಶ ಏರಿಕೆ ಕಂಡು 35,165 ಅಂಶಗಳಲ್ಲಿ ವಹಿವಾಟು ಅಂತ್ಯ ಕಂಡಿದೆ. ಹಿಂದಿನ ಎರಡು ವಹಿವಾಟು ಅವಧಿಗಳಲ್ಲಿ 579 ಅಂಶಗಳಷ್ಟು ಜಿಗಿತ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 84 ಅಂಶ ಹೆಚ್ಚಾಗಿ 10,688 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಇಳಿಕೆ ಕಾಣುತ್ತಿದೆ. ಬ್ರೆಂಟ್‌ ಕಚ್ಚಾ ತೈಲದ ದರ ಶುಕ್ರವಾರ ಶೇ 3 ರಷ್ಟು ಇಳಿಕೆ ಕಂಡಿತ್ತು. ಸೋಮವಾರ ಶೇ 1.88 ರಷ್ಟು ಇಳಿಕೆಯಾಗಿ, ಒಂದು ಬ್ಯಾರೆಲ್‌ಗೆ 75 ಡಾಲರ್‌ಗಳಿಗೆ ತಗ್ಗಿದೆ.

ರೂಪಾಯಿ ಮೌಲ್ಯ ಡಾಲರ್ ಎದುರು 49 ಪೈಸೆ ಹೆಚ್ಚಾಗಿ ₹67.29 ರಂತೆ ವಹಿವಾಟು ನಡೆಸಿತು. ಈ ವಿದ್ಯಮಾನಗಳು ಹೂಡಿಕೆ ಚಟುವಟಿಕೆಗೆ ಉತ್ತೇಜನ ನೀಡಿದವು.

‘ಕಚ್ಚಾ ತೈಲ ದರ ಇಳಿಕೆ ಆಗುತ್ತಿರುವುದರಿಂದ ಒಪೆಕ್‌ ರಾಷ್ಟ್ರಗಳಿಂದ ಪೂರೈಕೆ ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ. ಜತೆಗೆ ಅಮೆರಿಕ ಮತ್ತು ಉತ್ತರ ಕೊರಿಯಾ ಶೃಂಗಸಭೆಯು ಮಾರುಕಟ್ಟೆಗೆ ಚೇತರಿಕೆ ನೀಡುವ ಆಶಾವಾದ ಮೂಡಿಸಿದೆ. ದೇಶಿ ಮಟ್ಟದಲ್ಲಿ ರೂಪಾಯಿ ಚೇತರಿಕೆಯು ವಹಿವಾಟು ಹೆಚ್ಚಳಕ್ಕೆ ನೆರವಾಯಿತು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ ಲಿಮಿಟೆಡ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕಚ್ಚಾ ತೈಲ ದರ ಇಳಿಕೆ ಕಂಡಿರುವುದರಿಂದ ಬಿಪಿಸಿಎಲ್‌ ಮತ್ತು ಐಒಸಿ ಷೇರುಗಳು ಶೇ 6.10ರವರೆಗೂ ಏರಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.