ADVERTISEMENT

304 ಅಂಶ ಜಿಗಿತ ಕಂಡ ಸೂಚ್ಯಂಕ

ಪಿಟಿಐ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
304 ಅಂಶ ಜಿಗಿತ ಕಂಡ ಸೂಚ್ಯಂಕ
304 ಅಂಶ ಜಿಗಿತ ಕಂಡ ಸೂಚ್ಯಂಕ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸೋಮವಾರದ ವಹಿವಾಟಿನಲ್ಲಿ 304 ಅಂಶಗಳ ಏರಿಕೆ ದಾಖಲಿಸಿ ಮೂರು ವಾರಗಳ ಹಿಂದಿನ ಮಟ್ಟಕ್ಕೆ ತಲುಪಿತು.

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಉತ್ಸಾಹ ಮತ್ತು ದೇಶಿ ಆರ್ಥಿಕತೆಯು ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 7ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆಯಿಂದಾಗಿ ಪೇಟೆ ಚೇತರಿಕೆ ಕಂಡು ಸೂಚ್ಯಂಕವು 34,445 ಅಂಶಗಳಿಗೆ ತಲುಪಿತು. ಫೆಬ್ರುವರಿ 5ರಂದು ಸೂಚ್ಯಂಕವು ಇದೇ (34,757 ಅಂಶ) ಮಟ್ಟದಲ್ಲಿತ್ತು. ಹಿಂದಿನ ವಾರಾಂತ್ಯದಲ್ಲಿ (ಶುಕ್ರವಾರ) ಕೂಡ ಸೂಚ್ಯಂಕ 322 ಅಂಶಗಳ ಏರಿಕೆ ದಾಖಲಿಸಿತ್ತು.

ಅಮೆರಿಕದ ವಾಲ್‌ಸ್ಟ್ರೀಟ್‌ನಲ್ಲಿ ಶುಕ್ರವಾರದ ಖರೀದಿ ಉತ್ಸಾಹವು ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿಯೂ ಪ್ರತಿಫಲನಗೊಂಡಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ 91 ಅಂಶ ಹೆಚ್ಚಳ ಕಂಡು 10,582 ಅಂಶಗಳಿಗೆ ತಲುಪಿತು.

ADVERTISEMENT

‘ಪೇಟೆಯು ಇದುವರೆಗಿನ ನಷ್ಟವನ್ನು ನಿಧಾನವಾಗಿ ಭರ್ತಿ ಮಾಡಿಕೊಳ್ಳುತ್ತಿದೆ. ಇದಕ್ಕೆ ಜಾಗತಿಕ ಸಕಾರಾತ್ಮಕ ವಿದ್ಯಮಾನಗಳು ನೆರವಾಗುತ್ತಿವೆ. ಹೂಡಿಕೆದಾರರು ಈಗ,ಮೂರನೇ ತ್ರೈಮಾಸಿಕದ ಹಣಕಾಸು ಸಾಧನೆ ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಅಂಕಿ ಅಂಶಗಳು ಹೊರ ಬೀಳುವುದನ್ನು ಎದುರು ನೋಡುತ್ತಿದ್ದಾರೆ. ಸದ್ಯದ ಖರೀದಿ ಉತ್ಸಾಹವು ಪೇಟೆಯಲ್ಲಿನ ಏರಿಳಿತಕ್ಕೆ ಕಡಿವಾಣ ವಿಧಿಸಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.