ADVERTISEMENT

3.5 ಕೋಟಿ ಟನ್‌ ಗೋಧಿ ಸಂಗ್ರಹ

ಬಾಡಿಗೆಗೆ ದಾಸ್ತಾನು ಮಳಿಗೆ ಪಡೆಯಲು ಕೇಂದ್ರ ಚಿಂತನೆ

ಪಿಟಿಐ
Published 17 ಜೂನ್ 2018, 18:41 IST
Last Updated 17 ಜೂನ್ 2018, 18:41 IST
3.5 ಕೋಟಿ ಟನ್‌ ಗೋಧಿ ಸಂಗ್ರಹ
3.5 ಕೋಟಿ ಟನ್‌ ಗೋಧಿ ಸಂಗ್ರಹ   

ನವದೆಹಲಿ : ಈ ವರ್ಷ ಗೋಧಿ ಸಂಗ್ರಹವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 3.5 ಕೋಟಿ ಟನ್‌ಗಳಿಗೆ ತಲುಪಿದೆ.

ಹೆಚ್ಚುವರಿ ಉತ್ಪನ್ನವನ್ನು ಸಂಗ್ರಹಿಸಿ ಇಡಲು ಸ್ಥಳದ ಕೊರತೆ ಎದುರಾಗಿದೆ. ಉತ್ತರ ಮತ್ತು ಮಧ್ಯ ಭಾರತದಲ್ಲಿಯೂ ಮುಂಗಾರು ಆರಂಭವಾಗುವ ಮುನ್ನ ದಾಸ್ತಾನು ಮಾಡಬೇಕಿದೆ. ಹೀಗಾಗಿ  ಕೇಂದ್ರ ಸರ್ಕಾರ ಬಾಡಿಗೆಗೆ ದಾಸ್ತಾನು ಮಳಿಗೆ ಪಡೆಯಲು ಚಿಂತನೆ ನಡೆಸಿದೆ.

ಭಾರತೀಯ ಆಹಾರ ನಿಗಮ (ಎಫ್‌ಸಿಐ) ಮತ್ತು ಇತರೆ ಸಂಸ್ಥೆಗಳು 2018–19ನೇ ಮಾರುಕಟ್ಟೆ ವರ್ಷಕ್ಕೆ (ಏಪ್ರಿಲ್‌–ಮಾರ್ಚ್) ಗೋಧಿ ಸಂಗ್ರಹಿಸಿವೆ.

ADVERTISEMENT

ದಾಸ್ತಾನು ಹೆಚ್ಚಾಗಿದೆ. ಸಂಗ್ರಹಕ್ಕೆ ಪರ್ಯಾಯ ಮಾರ್ಗಗಳನ್ನು ಚಿಂತಿಸಲಾಗುತ್ತಿದೆ. ಗೋದಾಮುಗಳನ್ನು ಬಾಡಿಗೆ ಪಡೆಯುವ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ ಎಂದು ಆಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿದೆ. ಹೀಗಾಗಿ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ.

ಕಸ್ಟಮ್ಸ್‌ ಸುಂಕ ಹೆಚ್ಚಳ: ದೇಶಿ ಬೆಳೆಗಾರರ ಹಿತರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರವು ಗೋಧಿ ಆಮದು ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 20 ರಿಂದ ಶೇ 30ಕ್ಕೆ ಹೆಚ್ಚಿಸಿದೆ.

ದಾಖಲೆ ಪ್ರಮಾಣದಲ್ಲಿ ಗೋಧಿ ಉತ್ಪಾದನೆ ಆಗಿದೆ. ಆದರೆ, ಈ ಬಾರಿ ರಷ್ಯಾದಲ್ಲಿ ಉತ್ಪಾದನೆ ಉತ್ತಮವಾಗಿರುವ ನಿರೀಕ್ಷೆ ಮಾಡಲಾಗಿದೆ. ಅಲ್ಲಿಂದ ಅಗ್ಗದ ಬೆಲೆಗೆ ಆಮದಾಗುವುದನ್ನು ತಪ್ಪಿಸಲು ಸುಂಕವನ್ನು ಶೇ 10 ರಷ್ಟು ಏರಿಕೆ ಮಾಡಿರುವುದಾಗಿ ಹೇಳಿದೆ.

ಬೇರೆ ದೇಶಗಳಿಂದ ಖರೀದಿಸುವ ಪ್ರಮಾಣವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಸಾಧ್ಯವಾಗಲಿದೆ ಎಂದು ಉದ್ಯಮವಲಯದ ತಜ್ಞರು ಹೇಳಿದ್ದಾರೆ.

ಕೇಂದ್ರ ಸರ್ಕಾರ ಈ ಬೆಳೆ ವರ್ಷದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋಧಿ ಸಂಗ್ರಹಿಸಿದೆ. ಹೀಗಾಗಿ  ಪ್ರತಿ ಕ್ವಿಂಟಲ್‌ಗೆ ₹ 1,900 ರಂತೆ ಗಿರಣಿಗಳಿಗೆ ಮಾರಾಟ ಮಾಡಿ ದಾಸ್ತಾನು ವಿಲೇವಾರಿ ಮಾಡಲು ಮುಂದಾಗಿದೆ.

ಕಸ್ಟಮ್ಸ್‌ ಸುಂಕ ಹೆಚ್ಚಿಸದೇ ಇದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಗೋಧಿ ಮಾರಾಟ ಮಾಡಲು ಕಷ್ಟವಾಗಲಿದೆ ಎಂದು ಗಿರಣಿ ಮಾಲೀಕರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.