ADVERTISEMENT

45 ಕೆ.ಜಿ ಯೂರಿಯಾ ಚೀಲ ಮಾರಾಟ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
45 ಕೆ.ಜಿ ಯೂರಿಯಾ ಚೀಲ ಮಾರಾಟ
45 ಕೆ.ಜಿ ಯೂರಿಯಾ ಚೀಲ ಮಾರಾಟ   

ನವದೆಹಲಿ: ಯೂರಿಯಾ ರಸಗೊಬ್ಬರವನ್ನು 50 ಕೆ.ಜಿ ಚೀಲದ ಬದಲಿಗೆ 45 ಕೆ.ಜಿ ಚೀಲದಲ್ಲಿ ಮಾರಾಟ ಮಾಡುವುದನ್ನು ಜಾರಿಗೆ ತರಲಾಗಿದೆ.

ಕೃಷಿ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮತ್ತು ಗರಿಷ್ಠ ಸಬ್ಸಿಡಿ ಸೌಲಭ್ಯದ ಯೂರಿಯಾದ ಬಳಕೆಗೆ ಕಡಿವಾಣ ಹಾಕುವ ಮತ್ತು ಸಮತೋಲನದ ಪ್ರಮಾಣದಲ್ಲಿ ಅದನ್ನು ಬಳಸುವುದನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷವೇ ಈ ನಿರ್ಧಾರ ಕೈಗೊಳ್ಳಲಾಗಿತ್ತು.

ಪ್ರತಿ 45 ಕೆ.ಜಿಯ ಯೂರಿಯಾ ಚೀಲವನ್ನು ₹ 242ರಂತೆ (ತೆರಿಗೆ ಪ್ರತ್ಯೇಕ) ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸರ್ಕಾರ ನಿಗದಿಪಡಿಸಿರುವ ಪ್ರತಿ ಟನ್‌ಗೆ ₹ 5,360ರ ದರ ಆಧರಿಸಿ ಈ ಬೆಲೆ ನಿಗದಿ ಮಾಡಲಾಗಿದೆ. ಗರಿಷ್ಠ ಮಾರಾಟ ಬೆಲೆ ಮತ್ತು ಉತ್ಪಾದನಾ ವೆಚ್ಚದ ಅಂತರವನ್ನು ಕೇಂದ್ರ ಸರ್ಕಾರವು ಭರಿಸಲಿದೆ. ಇತರ ರಸಗೊಬ್ಬರಗಳಿಗೆ ಹೋಲಿಸಿದರೆ ಯೂರಿಯಾ ಅಗ್ಗದ ದರದಲ್ಲಿ ದೊರೆಯುತ್ತಿದೆ.

ADVERTISEMENT

50 ಕೆ.ಜಿ ಚೀಲದ ಹಳೆಯ ದಾಸ್ತಾನನ್ನು ಕರಗಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. 25 ಕೆ.ಜಿ ಲೆಕ್ಕದಲ್ಲಿಯೂ ಯೂರಿಯಾ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ.

ಯೂರಿಯಾ ಬಳಕೆ ತಗ್ಗಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ಕಾರಣಕ್ಕೆ ಬೇವು ಲೇಪಿತ ಯೂರಿಯಾ ಬಳಕೆಗೆ ತರಲಾಗಿದೆ. ರೈತರು ಪ್ರತಿ ಹೆಕ್ಟೇರ್‌ ಭೂಮಿಗೆ ಯೂರಿಯಾ ಚೀಲ ಆಧರಿಸಿ ರಸಗೊಬ್ಬರ ಬಳಸುತ್ತಿದ್ದಾರೆ.

50 ಕೆ.ಜಿ ಚೀಲಗಳ ಸಂಖ್ಯೆ ಕಡಿಮೆ ಮಾಡಿ ಎನ್ನುವ ಸಲಹೆಗೆ ರೈತರು ಓಗೊಟ್ಟಿಲ್ಲ. ಈ ಕಾರಣಕ್ಕೆ 45 ಕೆ.ಜಿ ಚೀಲ ಮಾರಾಟ ಮಾಡಲು ನಿರ್ಧರಿಸಲಾಗಿತ್ತು. ರೈತರು ಈ ಮೊದಲಿನ ಪ್ರಮಾಣದಲ್ಲಿಯೇ ಯೂರಿಯಾ ಚೀಲ ಬಳಸುವುದರಿಂದ ಬಳಕೆಯಲ್ಲಿ ಶೇ 10ರಷ್ಟು ಕಡಿತ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.