ಮುಂಬೈ: ಹೊಸ ವರ್ಷದ ಮೊದಲ ದಿನದ ವಹಿವಾಟಿನಲ್ಲಿಯೇ ಸೂಚ್ಯಂಕಗಳು ಇಳಿಕೆ ಕಂಡಿವೆ.
ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ 2017ನೇ ವರ್ಷಾಂತ್ಯದ ವಹಿವಾಟು ಅಂತ್ಯವಾಗಿತ್ತು. 2018ನೇ ವರ್ಷದ ಮೊದಲ ದಿನ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 244 ಅಂಶ ಇಳಿಕೆ ಕಂಡು 34,000 ಮಟ್ಟದಿಂದ ಕೆಳಗಿಳಿಯಿತು. 33,812 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಡಿಸೆಂಬರ್ 1ರ ನಂತರ ಸೂಚ್ಯಂಕದ ಗರಿಷ್ಠ ಕುಸಿತ ಇದಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 95 ಅಂಶ ಇಳಿಕೆಯಾಗಿ 10,435 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ಹೊಸ ವರ್ಷಾಚರಣೆಯ ಅಂಗವಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಸೋಮವಾರ ವಹಿವಾಟು ನಡೆಯಲಿಲ್ಲ. ಹೀಗಾಗಿ ದೇಶದ ಷೇರುಪೇಟೆಗಳಲ್ಲಿ ಹೂಡಿಕೆದಾರರು ಲಾಭಗಳಿಕೆ ಉದ್ದೇಶದ ವಹಿವಾಟು ನಡೆಸಿದರು. ಅದರಲ್ಲೂ ಮುಖ್ಯವಾಗಿ ದಿನದ ವಹಿವಾಟು ಅಂತ್ಯವಾಗುವುದಕ್ಕೂ ಒಂದು ಗಂಟೆ ಇದ್ದಾಗ ಷೇರುಪೇಟೆಯಲ್ಲಿ ಅತಿಯಾದ ಮಾರಾಟದ ಒತ್ತಡ ಸೃಷ್ಟಿಯಾಯಿತು. ಹೀಗಾಗಿ ವರ್ಷಾಂತ್ಯದಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ತಲುಪಿದ್ದ ಸೂಚ್ಯಂಕಗಳು ಮತ್ತೆ ಕೆಳಗಿಳಿಯುವಂತಾಯಿತು ಎಂದು ದಲ್ಲಾಳಿಗಳು ವಿಶ್ಲೇಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.