ADVERTISEMENT

ವಿವಿಧ ಸೇವೆಗಳಿಗೆ ‘ಆಧಾರ್’

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ವಿವಿಧ ಸೇವೆಗಳಿಗೆ ‘ಆಧಾರ್’
ವಿವಿಧ ಸೇವೆಗಳಿಗೆ ‘ಆಧಾರ್’   

‘ಆಧಾರ್‌’ ಸಂಖ್ಯೆ ಇಂದು ಹೆಚ್ಚು ಮಹತ್ವ ಪಡೆದಿದೆ. ಎಲ್ಲ ಸೇವೆಗಳನ್ನು ಪಡೆಯಲು ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಅನಿವಾರ್ಯವಾಗುತ್ತಿದೆ. ಕೇಂದ್ರ ಸರ್ಕಾರವು ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಹೀಗಾಗಿ, ಪ್ರತಿಯೊಬ್ಬರಿಗೆ ಆಧಾರ್‌ ಅಗತ್ಯವಾಗಿದೆ.

ವಿವಿಧ ಸಮಾಜ ಕಲ್ಯಾಣ ಯೋಜನೆಗಳಿಗೆ ಮತ್ತು ಹಣಕಾಸು ಸೇವೆಗಳಿಗೆ ‘ಆಧಾರ್‌’ ಸಂಖ್ಯೆ ಜೋಡಿಸುವ ಅವಧಿಯನ್ನು ಸುಪ್ರೀಂಕೋರ್ಟ್‌ 2018ರ ಮಾರ್ಚ್‌ 31ರವರೆಗೆ ವಿಸ್ತರಿಸಿದೆ. ಕೊನೆಯತನಕ ಕಾಯುವ ಬದಲು ಅವಧಿಗೆ ಮುಂಚೆ ‘ಆಧಾರ್‌’ ಸಂಪರ್ಕ ಕಲ್ಪಿಸುವುದು ಉತ್ತಮ. ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ.

ಪ್ಯಾನ್‌ ಕಾರ್ಡ್‌ ಜತೆ ಆಧಾರ್‌

ADVERTISEMENT

ಪ್ಯಾನ್‌ ಕಾರ್ಡ್‌ ಜತೆ ಆಧಾರ್‌ ಸಂಪರ್ಕ ಕಲ್ಪಿಸಲು 2017ರ ಜುಲೈ 1ರವರೆಗೆ ಗಡುವು ನೀಡಲಾಗಿತ್ತು. ಆದರೆ, ಹಲವರ ಹೆಸರಿನಲ್ಲಿ ತಪ್ಪುಗಳು ಉಂಟಾಗಿ ಗೊಂದಲವಾಗಿದ್ದರಿಂದ ಈ ಅವಧಿಯನ್ನು ವಿಸ್ತರಿಸಲಾಯಿತು.

2017ರ ಡಿಸೆಂಬರ್‌ 31ರ ಒಳಗೆ ಆಧಾರ್‌ ನೊಂದಣಿ ಮಾಡಿದವರ ಆದಾಯ ತೆರಿಗೆ ವಿವರಗಳನ್ನು ಪರಿಶೀಲಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಆದಾಯ ತೆರಿಗೆ ವಿವರಗಳನ್ನು ಸಲ್ಲಿಸುವವರೆಗೆ ಇದು ಕಡ್ಡಾಯ. ₹2.5ಲಕ್ಷದ ಒಳಗಿನ ಆದಾಯ ಹೊಂದಿರುವವರಿಗೆ ಇದು ಕಡ್ಡಾಯವಲ್ಲ.

ಆಧಾರ್‌, ಬಯೊ ಮೆಟ್ರಿಕ್‌ ಆಧಾರಿತ ಗುರುತು ಪತ್ತೆಯ ಕಾರ್ಡ್ ಆಗಿರುವುದರಿಂದ ಒಬ್ಬ ವ್ಯಕ್ತಿ ಒಂದೇ ‘ಆಧಾರ್‌’ ಹೊಂದಬಹುದು. ಒಂದು ವೇಳೆ ನಿಗದಿತ ಅವಧಿ ಒಳಗೆ ಪ್ಯಾನ್‌ ಜತೆ ಆಧಾರ್‌ ಸಂಪರ್ಕ ಕಲ್ಪಿಸದಿದ್ದರೆ ಅದು ಅಪ್ರಸ್ತುತವಾಗಲಿದೆ. ಹೀಗಾಗಿ, ಒಬ್ಬ ವ್ಯಕ್ತಿ ಹಲವು ಪ್ಯಾನ್‌ ಕಾರ್ಡ್‌ಗಳನ್ನು ಹೊಂದಲು ಸಾಧ್ಯವಿಲ್ಲ. ಒಂದೇ ಒಂದು ಮಾತ್ರ ಇರಬೇಕಾಗುತ್ತದೆ. ನಕಲಿ ಕಂಪೆನಿಗಳಿಗೆ ಹಣ ವರ್ಗಾವಣೆ ಮಾಡಲು ಪ್ಯಾನ್‌ ಕಾರ್ಡ್‌ಗಳನ್ನು ಬಳಸಲಾಗುತ್ತಿತ್ತು ಎನ್ನುವುದು ಸಹ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಮ್ಯೂಚುವಲ್‌ ಫಂಡ್‌ ಜತೆ ಸಂಪರ್ಕ

ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ಮಾಡಿದ ಬಳಿಕ ಮ್ಯೂಚುವಲ್‌ ಫಂಡ್‌ಗಳಿಗೂ ಆಧಾರ್‌ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಹೂಡಿಕೆದಾರರು ತಮ್ಮ ಖಾತೆಗೆ ಈ ಸಂಖ್ಯೆಯನ್ನು ಜೋಡಿಸಬೇಕು. ಮ್ಯೂಚುವಲ್‌ ಫಂಡ್‌ ವಹಿವಾಟು ನಡೆಸುವ ಕಂಪೆನಿಗಳ ಜತೆ ಗ್ರಾಹಕರು ಆಧಾರ್‌ ಲಿಂಕ್‌ ಮಾಡಲು ಇಲ್ಲಿ ಕೆಲವು ಸಂಪರ್ಕ ಕೊಂಡಿಗಳನ್ನು (ಲಿಂಕ್‌) ಇಲ್ಲಿ ನೀಡಲಾಗಿದೆ. ಸಿಎಎಂಎಸ್‌ಗೆ http://www.camsonline.com/investorservices/COL_Aadhar.aspx, ಸುಂದರಂಗೆ https://sundarambnpparibasfs.in/web/service/aadhaar, ಕಾರ್ವಿಗೆ https://www.karvymfs.com/karvy/Aadhaarlinking.aspx, ಫ್ರಾಂಕ್ಲಿನ್‌ ಟೆಂಪ್ಲೆಟಾನ್‌ಗೆ https://accounts.franklintempletonindia.com/guest/#/customerservices/updateaadhaar/accountdetails ವೀಕ್ಷಿಸಬಹುದು.

ಆನ್‌ಲೈನ್‌ ಲಿಂಕ್‌ಗಳ ಮೂಲಕವೂ ಆಧಾರ್‌ ಜೋಡಿಸಬಹುದು ಅಥವಾ ಎಸ್‌ಎಂಎಸ್‌ ಸಂದೇಶ ಕಳುಹಿಸಬೇಕು. ಆದರೆ, ನಿಮ್ಮ ಮೊಬೈಲ್‌ ದೂರವಾಣಿ ಸಂಖ್ಯೆ ಮತ್ತು ಇ–ಮೇಲ್‌ ದಾಖಲಾಗಿರಬೇಕು.

ಬ್ಯಾಂಕ್‌ ಖಾತೆಗೆ ಜೋಡಿಸುವುದು

ನೆಟ್‌ ಬ್ಯಾಂಕಿಂಗ್‌ಗೆ ಲಾಗಿನ್‌ ಆಗಿ ಆಧಾರ್‌ ಸಂಖ್ಯೆಯನ್ನು ಜೋಡಿಸಬಹುದು. ಅಲ್ಲಿ ವಿವರಗಳನ್ನು ಭರ್ತಿ ಮಾಡಬಹುದು. ಒಂದು ವೇಳೆ ನೆಟ್‌ ಬ್ಯಾಂಕಿಂಗ್‌ ಸೌಲಭ್ಯ ಇಲ್ಲದಿದ್ದರೆ ವೈಯಕ್ತಿಕವಾಗಿ ಶಾಖೆಗೆ ಭೇಟಿ ನೀಡಿ ವಿವರಗಳನ್ನು ಸಲ್ಲಿಸಬೇಕು.

ಅಂಚೆ ಕಚೇರಿಯಲ್ಲಿ ಹೂಡಿಕೆಗೆ

ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಿರುವ ಗ್ರಾಹಕರು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ಗೆ ಲಾಗ್‌ಆನ್‌ ಆಗಿ ಆಧಾರ್‌ ಜೋಡಣೆಗೆ ಅರ್ಜಿಯನ್ನು ಡೌನ್‌ಲೌಡ್‌ ಮಾಡಿಕೊಳ್ಳಬೇಕು. ಬಳಿಕ ಈ ಅರ್ಜಿಯನ್ನು ಭರ್ತಿ ಮಾಡಿ ನೀವು ಖಾತೆ ಹೊಂದಿರುವ ಶಾಖೆಯಲ್ಲಿ ಸಲ್ಲಿಸಬೇಕು. ಉದಾಹರಣೆಗೆ ಪಿಪಿಎಫ್‌, ಸುಕನ್ಯಾ ಸಮೃದ್ಧಿ , ಎನ್‌ಎಸ್‌ಸಿ, ಕೆವಿಪಿ ಮುಂತಾದ ಯೋಜನೆಗಳಿಗೆ ಇದು ಅನ್ವಯವಾಗಲಿದೆ. ಇಂಡಿಯಾ ಪೋಸ್ಟ್‌ನಲ್ಲಿ ಆನ್‌ಲೈನ್‌ ಮೂಲಕ ಆಧಾರ್‌ ಜೋಡಿಸುವ ವ್ಯವಸ್ಥೆ ಇನ್ನೂ ಆಗಿಲ್ಲ.

ವಿಮಾ ಪಾಲಿಸಿಗಳಿಗೆ

ವಿಮಾ ಕಂಪೆನಿಗಳ ವೆಬ್‌ಸೈಟ್‌ಗಳ ಮೂಲಕವೂ ಆಧಾರ್‌ ಜೋಡಿಸಬಹುದು. ಪ್ಯಾನ್‌ ಸಂಖ್ಯೆ, ಜನ್ಮ ದಿನಾಂಕ, ಆಧಾರ್‌, ಮೊಬೈಲ್ ಸಂಖ್ಯೆ, ಪಾಲಿಸಿ ಸಂಖ್ಯೆ ಇತ್ಯಾದಿ ವಿವರಗಳನ್ನು ವೆಬ್‌ಸೈಟ್‌ ಮೂಲಕವೇ ಸಲ್ಲಿಸಬಹುದು. ಜತೆಗೆ ವಿಮಾ ಕಚೇರಿಗೂ ಭೇಟಿ ನೀಡಿ ಮಾಹಿತಿ ನೀಡಬಹುದು.

ಮೊಬೈಲ್‌ ಸಂಖ್ಯೆ ಜೋಡಣೆ

ಸೇವೆ ಒದಗಿಸುವ ಮೊಬೈಲ್‌ ಕಂಪೆನಿಯ ಕಚೇರಿಗೆ ತೆರಳಿ ಆಧಾರ್‌ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಅಥವಾ ಕಾಲ್‌ಸೆಂಟರ್‌ಗೆ ಕರೆ ಮಾಡಿ ಮನವಿ ಮಾಡಬೇಕು. 2018ರ ಮಾರ್ಚ್‌ 31ರ ಬಳಿಕ ಆಧಾರ್‌ ಸಂಖ್ಯೆ ಜೋಡಣೆಯಾಗದ ಮೊಬೈಲ್‌ ದೂರವಾಣಿಗಳ ಸೇವೆ ಸ್ಥಗಿತಗೊಳ್ಳಲಿದೆ.

ಆಧಾರ್‌ ಮಾಹಿತಿಯನ್ನು ಯುಐಡಿಎಐಗೆ ಕಳುಹಿಸಲಾಗುತ್ತದೆ. ಬಯೋಮೆಟ್ರಿಕ್‌ ಮಾಹಿತಿಯನ್ನು ತಾವೇ ಇಟ್ಟುಕೊಳ್ಳುವುದು ಅಪರಾಧ. ಇದಕ್ಕಾಗಿ ಆಧಾರ್‌ ಕಾಯ್ದೆ 2016ರ ಅನ್ವಯ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.