ADVERTISEMENT

3ನೇ ದಿನವೂ ಸೂಚ್ಯಂಕ ಏರಿಕೆ

ಷೇರುಪೇಟೆಯಲ್ಲಿ ಹೆಚ್ಚಿದ ವಿದೇಶಿ ಬಂಡವಾಳ ಹೂಡಿಕೆ ಪ್ರಮಾಣ

ಪಿಟಿಐ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
3ನೇ ದಿನವೂ ಸೂಚ್ಯಂಕ ಏರಿಕೆ
3ನೇ ದಿನವೂ ಸೂಚ್ಯಂಕ ಏರಿಕೆ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸತತ ಮೂರನೇ ವಹಿವಾಟಿನ ದಿನವೂ ಏರುಗತಿಯಲ್ಲಿ ಸಾಗಿದ್ದು, ಮಂಗಳವಾರ ಇನ್ನೊಂದು ಹೊಸ ಎತ್ತರಕ್ಕೆ ತಲುಪಿತು.

ಐ.ಟಿ, ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ), ತೈಲ ಮತ್ತು ನೈಸರ್ಗಿಕ ಅನಿಲ, ಇಂಧನ ಷೇರುಗಳ ಬೆಲೆ ಏರಿಕೆ ಬೆನ್ನೇರಿ ಸೂಚ್ಯಂಕವು  90 ಅಂಶಗಳಷ್ಟು ಹೆಚ್ಚಳ ಕಂಡು 34,443 ಅಂಶಗಳಿಗೆ ತಲುಪಿತು. ಇದೊಂದು ಇನ್ನೊಂದು ಸಾರ್ವಕಾಲಿಕ ದಾಖಲೆಯಾಗಿದೆ.

ವಿದೇಶಿ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಕೂಡ ಪೇಟೆಯಲ್ಲಿ ಖರೀದಿ ಭರಾಟೆಗೆ ನೆರವಾಗುತ್ತಿದೆ.

ADVERTISEMENT

ಕೋಲ್‌ ಇಂಡಿಯಾ, ಐಟಿಸಿ ಮತ್ತು ಟಾಟಾ ಮೋಟಾರ್ಸ್‌ ಷೇರುಗಳು ಕೂಡ ಇಂದಿನ ವಹಿವಾಟಿನಲ್ಲಿ ಉತ್ತಮ ಲಾಭ ಮಾಡಿಕೊಂಡವು.

ಗರಿಷ್ಠ ಮಟ್ಟ ತಲುಪಿದ್ದ ಔಷಧಿ, ಭಾರಿ ಯಂತ್ರೋಪಕರಣ ಮತ್ತು ದೂರ ಸಂಪರ್ಕ ಷೇರುಗಳನ್ನು ವಹಿವಾಟುದಾರರು ಮಾರಾಟ ಮಾಡಿ ಲಾಭ ಮಾಡಿಕೊಳ್ಳಲು ಮುಂದಾಗಿದ್ದರಿಂದ ದಿನದ  ಒಂದು ಹಂತದಲ್ಲಿ ಸಂವೇದಿ ಸೂಚ್ಯಂಕವು 34,343 ಅಂಶಗಳಿಗೆ ಕುಸಿದಿತ್ತು. ಆದರೆ, ಅಂತಿಮವಾಗಿ 90 ಅಂಶಗಳ ಏರಿಕೆಯೊಂದಗೆ ವಹಿವಾಟು ಕೊನೆಗೊಳಿಸಿತು.

ಇತ್ತೀಚಿನ ಮೂರು ನಿರಂತರ ವಹಿವಾಟಿನ ದಿನಗಳಲ್ಲಿ ಸಂವೇದಿ ಸೂಚ್ಯಂಕವು 559 ಅಂಶಗಳಷ್ಟು ಏರಿಕೆ ಕಂಡಿದೆ.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ಯಲ್ಲಿಯೂ ಗೂಳಿಯ ನಾಗಾಲೋಟ ಮುಂದುವರೆದಿದೆ. ವಹಿವಾಟಿನ ಒಂದು ಹಂತದಲ್ಲಿ 10,659 ಅಂಶಗಳಿಗೆ ತಲುಪಿತ್ತು. ದಿನದಂತ್ಯಕ್ಕೆ 13 ಅಂಶಗಳ ಏರಿಕೆಯೊಂದಿಗೆ 10,637 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.

ವಿದೇಶಿ ಹೂಡಿಕೆದಾರರು ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವುದರಿಂದ ಸೂಚ್ಯಂಕವು ನಾಗಾಲೋಟದಲ್ಲಿ ಏರಿಕೆಯಾಗುತ್ತಿದೆ.

ಸೋಮವಾರದ ವಹಿವಾಟಿನಲ್ಲಿ ಇವರು ₹ 693 ಕೋಟಿಗಳಷ್ಟು ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 206 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ.

ನಿಫ್ಟಿ: ಹೆಚ್ಚಿನ ಲಾಭ ನಿರೀಕ್ಷೆ ಬೇಡ

‘ನಿಫ್ಟಿ’ಯಲ್ಲಿ ಗೂಳಿಯ ನಾಗಾಲೋಟ ಮುಂದುವರೆದಿದ್ದರೂ, ಹೂಡಿಕೆದಾರರು ಗರಿಷ್ಠ ಪ್ರಮಾಣದಲ್ಲಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇಲ್ಲ ಎಂದು  ಸ್ವಿಟ್ಜರ್ಲೆಂಡ್‌ನ ದಲ್ಲಾಳಿ ಸಂಸ್ಥೆ ಯುಬಿಎಸ್‌ ಅಂದಾಜಿಸಿದೆ.

ರಾಷ್ಟ್ರೀಯ ಷೇರುಪೇಟೆಯಲ್ಲಿ ಷೇರುಗಳ ಬೆಲೆ ಏರುತ್ತಿದ್ದರೂ ಹೂಡಿಕೆದಾರರಿಗೆ ಅದೇ ಮಟ್ಟದಲ್ಲಿ ಲಾಭ ದೊರೆಯದು. ದೇಶದ ಅತಿದೊಡ್ಡ ಸಂಸ್ಥೆಗಳ ಷೇರುಗಳು ಭಾರಿ ಏರಿಕೆ ಕಂಡರೂ ಹೂಡಿಕೆದಾರರಿಗೆ ಇದರಿಂದ ಹೆಚ್ಚಿನ ಲಾಭ ದೊರೆಯಲಾರದು ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.