ADVERTISEMENT

20 ಬ್ಯಾಂಕ್‌ಗೆ ₹88 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 19:30 IST
Last Updated 24 ಜನವರಿ 2018, 19:30 IST
ಅರುಣ್‌ ಜೇಟ್ಲಿ
ಅರುಣ್‌ ಜೇಟ್ಲಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ 20 ಬ್ಯಾಂಕ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 88,139 ಕೋಟಿಗಳ ಪುನರ್ಧನ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

ಈ ನೆರವಿನ ಜತೆಗೆ, ಸುಧಾರಣಾ ಕ್ರಮಗಳನ್ನೂ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಹೆಚ್ಚಲಿದ್ದು, ಆರ್ಥಿಕ ಬೆಳವಣಿಗೆಯು ಚೇತರಿಕೆ ಹಾದಿಗೆ ಮರಳಲಿದೆ. ಗರಿಷ್ಠ ಮಟ್ಟಕ್ಕೆ ತಲುಪಿರುವ ವಸೂಲಾಗದ ಸಾಲದ ಸಮಸ್ಯೆ ಪರಿಹರಿಸಲೂ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಬ್ಯಾಂಕಿಂಗ್‌ ವಲಯದ ವ್ಯಾ‍ಪಕ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು, ‘ಹೆಚ್ಚಿನ ಮೊತ್ತದ ಸಾಲ ಮಂಜೂರಾತಿ ಕುರಿತು ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಬ್ಯಾಂಕ್‌ಗಳು ಹೆಚ್ಚು ವೃತ್ತಿಪರತೆ ಮೈಗೂಡಿಸಿಕೊಳ್ಳಲೂ ಸೂಚಿಸಲಾಗಿದೆ. ಹಿರಿಯ ನಾಗರಿಕರು ಮತ್ತು ಅಂಗವಿಕಲರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸಲೂ ಸೂಚಿಸಲಾಗಿದೆ’ ಎಂದರು.

ADVERTISEMENT

ಪುನರ್ಧನ ನೆರವಿನಲ್ಲಿ ₹ 8,139 ಕೋಟಿ ಬಜೆಟ್ ಹಂಚಿಕೆ ಮೂಲಕ ಮತ್ತು ಉಳಿದ ಮೊತ್ತವನ್ನು  ಬಾಂಡ್‌ಗಳ ಮೂಲಕ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಪುನರ್ಧನ ನೆರವು ಈ ಹಣಕಾಸು ವರ್ಷಾಂತ್ಯದ ವೇಳೆಗೆ ₹ 1 ಲಕ್ಷ ಕೋಟಿ ದಾಟಲಿದೆ.

‘ಬ್ಯಾಂಕ್‌ಗಳ ಆರ್ಥಿಕ ಬಲವರ್ಧನೆಗೆ ಈ ಪ್ರಮಾಣದ ಬಂಡವಾಳ ನೆರವು ನೀಡಲು ಹಣಕಾಸು ಸಚಿವಾಲಯವು ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ಒಡೆತನದ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ಉತ್ತಮ ಆಗಿರುವಂತೆ ನೋಡಿಕೊಳ್ಳುವುದು ಇನ್ನು ಮುಂದೆ ಸರ್ಕಾರದ ಪ್ರಮುಖ ಹೊಣೆಗಾರಿಕೆಯಾಗಿರಲಿದೆ. ಆ ಉದ್ದೇಶ ಸಾಧಿಸಲೆಂದೇ ಈ ನೆರವು ನೀಡಲಾಗುತ್ತಿದೆ.

‘ಬ್ಯಾಂಕ್‌ಗಳ ಆಡಳಿತ ನಿರ್ವಹಣೆಯಲ್ಲಿ ಗರಿಷ್ಠ ಮಾನದಂಡಗಳ ಪಾಲನೆ ಆಗಬೇಕು, ಹಳೆಯ ಪ್ರವೃತ್ತಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಸಾಂಸ್ಥಿಕ ವ್ಯವಸ್ಥೆ ಅಳವಡಿಸಿಕೊಳ್ಳಬೇಕು’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

‘ಈ ಪುನರ್ಧನ ಬಾಂಡ್‌ಗಳ ನೆರವು ಬ್ಯಾಂಕ್‌ಗಳ ಹಣಕಾಸು ಸಾಧನೆ ಮತ್ತು ಅವುಗಳು ಅಳವಡಿಸಿಕೊಳ್ಳುವ ಸುಧಾರಣಾ ಕ್ರಮಗಳನ್ನು ಆಧರಿಸಿರುತ್ತದೆ. ಇನ್ನು ಮುಂದೆ ₹ 250 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ವಿತರಣೆಯ ನಿರ್ಧಾರವು ವಿಶೇಷ ನಿಗಾ ವ್ಯವಸ್ಥೆಗೆ ಒಳಪಟ್ಟಿರುತ್ತದೆ’ ’ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಬ್ಯಾಂಕ್‌ಗಳಿಗೆ ಎರಡು ಹಣಕಾಸು ವರ್ಷಗಳ ಅವಧಿಯಲ್ಲಿ ₹ 2.11 ಲಕ್ಷ ಕೋಟಿಗಳ ಬಂಡವಾಳ ನೆರವು ನೀಡುವುದಾಗಿ ಕೇಂದ್ರ ಸರ್ಕಾರವು 2017ರ ಅಕ್ಟೋಬರ್‌ನಲ್ಲಿ ಘೋಷಿಸಿತ್ತು. 2017–18ರ ಹಣಕಾಸು ವರ್ಷ ಕೊನೆಗೊಳ್ಳುವ ಮುಂಚೆ (ಮಾರ್ಚ್‌ 31ರ ಒಳಗೆ) ಮೊದಲ ಕಂತಿನ ರೂಪದಲ್ಲಿ ₹ 88,139 ಕೋಟಿಗಳ ನೆರವು ವಿತರಿಸಲಾಗುತ್ತಿದೆ. ಈ ನೆರವು ಪಡೆಯುವ ಬ್ಯಾಂಕ್‌ಗಳ ಸಾಲಿನಲ್ಲಿ ಐಡಿಬಿಐ ಬ್ಯಾಂಕ್‌ ಮೊದಲ ಸ್ಥಾನದಲ್ಲಿ (₹ 10,610 ಕೋಟಿ) ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (₹ 8,800 ಕೋಟಿ) ದ್ವಿತೀಯ ಸ್ಥಾನದಲ್ಲಿ ಇವೆ.ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ವಸೂಲಾಗದ ಸಾಲದ ಪ್ರಮಾಣದ ಸುಳಿಯಲ್ಲಿ ಸಿಲುಕಿವೆ. ಈ ಬಿಕ್ಕಟ್ಟಿನಿಂದ ಪಾರು ಮಾಡಲು ಪುನರ್ಧನ ನೆರವು ಅಗತ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.