ADVERTISEMENT

6 ಲಕ್ಷ ಕೋಟಿಗಳಷ್ಟು ಹೂಡಿಕೆ ಒಪ್ಪಂದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2012, 19:30 IST
Last Updated 8 ಮಾರ್ಚ್ 2012, 19:30 IST

ಮುಂಬೈ: ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಎರಡನೇ ಸಮಾವೇಶದಲ್ಲಿ (ಜಿಐಎಂ) ರೂ 6 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲು ಕರ್ನಾಟಕ ರಾಜ್ಯ ಸರ್ಕಾರ ಗುರಿ ನಿಗದಿಪಡಿಸಿದೆ.

ಕಳೆದ ಬಾರಿಯ ಸಮಾವೇಶದಲ್ಲಿ ರೂ 3.92 ಲಕ್ಷ ಕೋಟಿಗಳಷ್ಟು ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಜೂನ್ ತಿಂಗಳ 7 ಮತ್ತು 8ರಂದು ನಡೆಯಲಿರುವ ಎರಡನೇ ಸಮಾವೇಶದಲ್ಲಿ ರೂ 6 ಲಕ್ಷ ಕೋಟಿಗಳಷ್ಟು ಹೂಡಿಕೆಯ ಒಪ್ಪಂದಗಳಿಗೆ ಸಹಿ ಹಾಕುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಅವರು ಗುರುವಾರ ಇಲ್ಲಿ ಹೇಳಿದರು.

ಸಮಾವೇಶದ ಬಗ್ಗೆ ಸ್ಥಳೀಯ ಹೂಡಿಕೆದಾರರ ಜತೆ ಸಭೆ ನಡೆಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ರಾಜಕೀಯ ನಾಯಕತ್ವ ಮತ್ತು ಗಣಿಗಾರಿಕೆ ವಿವಾದಗಳ ಹೊರತಾಗಿಯೂ ್ಙ 6 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆಯ ಒಪ್ಪಂದಗಳು ನಡೆಯುವ ಬಗ್ಗೆ ತಮ್ಮ ಸರ್ಕಾರ ಆಶಾಭಾವ ತಳೆದಿದೆ ಎಂದರು.

ಕಳೆದ ಸಮಾವೇಶದ ಸಂದರ್ಭದಲ್ಲಿ ಆಗಿರುವ ಒಪ್ಪಂದಗಳಲ್ಲಿ ಶೇ 60ರಷ್ಟು ಕಾರ್ಯರೂಪಕ್ಕೆ ಬಂದಿವೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ನುಡಿದರು. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಾದ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿವಾದಗಳು ಉದ್ಭವಿಸದಂತೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದೆ ಎಂದು ಅವರು ಉದ್ಯಮಿಗಳಿಗೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.