ADVERTISEMENT

620ಲಕ್ಷ ಹೆಕ್ಟೇರ್ ಬಿತ್ತನೆ

ಉತ್ತಮ ಮಳೆ; ಕೃಷಿ ಚಟುವಟಿಕೆ ಚುರುಕು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 19:59 IST
Last Updated 20 ಜುಲೈ 2013, 19:59 IST

ನವದೆಹಲಿ(ಪಿಟಿಐ): ಉತ್ತಮ ಮಳೆಯಿಂದಾಗಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ದೇಶದ ವಿವಿಧೆಡೆ ಈವರೆಗೆ 620.20 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಕಳೆದ ವರ್ಷದಲ್ಲಿನ ಇದೇ ಅವಧಿಗೆ ಹೋಲಿಸಿದರೆ ಬಿತ್ತನೆ ಮತ್ತು ನಾಟಿ ಚಟುವಟಿಕೆಯಲ್ಲಿ ಶೇ 22.51ರಷ್ಟು ಹೆಚ್ಚಳವಾಗಿದೆ.

ಈಗಾಗಲೇ 154.85 ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತದ ಪೈರುಗಳ ನಾಟಿಯಾಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ 11.06ರಷ್ಟು ಹೆಚ್ಚೇ ಇದೆ. ಕಳೆದ ವರ್ಷ ಇದೇ ವೇಳೆ 139.42 ಲಕ್ಷ ಹೆಕ್ಟೇರ್‌ಗಳಲ್ಲಿಯಷ್ಟೇ ಭತ್ತ ನಾಟಿ ಪೂರ್ಣಗೊಂಡಿತ್ತು ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.

ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಕಳೆದೊಂದು ವಾರದಿಂದ ಬಹಳ ಚುರುಕಾಗಿ ಸಾಗಿದೆ. ವಿವಿಧ ರಾಜ್ಯಗಳಿಂದ ಪಡೆದುಕೊಂಡ ಮಾಹಿತಿ ಪ್ರಕಾರ ಜುಲೈ 19ರ ವೇಳೆಗೆ ಒಟ್ಟು 620.20 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. 2012ರ ಜುಲೈ 19ರಂದು 506.21 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದ್ದಿತು ಎಂದು ಸಚಿವಾಲಯದ ಅಧಿಕೃತ ಪ್ರಕಟಣೆ ತಿಳಿಸಿದೆ.

ಈವರೆಗೆ ದೇಶದ ವಿವಿಧೆಡೆ ವಾಡಿಕೆಗಿಂತ ಶೇ 21ರಷ್ಟು ಅಧಿಕ ಪ್ರಮಾಣದ ಮಳೆ ಸುರಿದಿದೆ. ಇದು ರೈತರಲ್ಲಿ ಹರ್ಷಕ್ಕೆ ಕಾರಣವಾಗಿದ್ದು, ಕೃಷಿ ಚಟುವಟಿಕೆ ವೇಗವಾಗಿ ನಡೆಯಲು ಕಾರಣವಾಗಿದೆ.

149.82 ಲಕ್ಷ ಹೆಕ್ಟೇರ್‌ಗಳಲ್ಲಿ ದ್ವಿದಳ ಧಾನ್ಯ(ಕಳೆದ ವರ್ಷ 108.81 ಲಕ್ಷ ಹೆಕ್ಟೇರ್), 126.64 ಲಕ್ಷ ಹೆಕ್ಟೇರ್‌ಗಳಲ್ಲಿ ಏಕದಳ ಧಾನ್ಯಗಳು(95.43 ಲಕ್ಷ ಹೆಕ್ಟೇರ್), 48.45 ಲಕ್ಷ ಹೆಕ್ಟೇರ್‌ಗಳಲ್ಲಿ ಕಬ್ಬು (ಕಳೆದ ವರ್ಷ 50.04 ಲಕ್ಷ ಹೆಕ್ಟೇರ್) ಬಿತ್ತನೆಯಾಗಿದೆ.

ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಮಾತ್ರವೇ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ ಎಂದು ಸಚಿವಾಲಯ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.