ADVERTISEMENT

₹ 92 ಸಾವಿರ ಕೋಟಿ ಸಂಗ್ರಹ

ರಿಟರ್ನ್ಸ್‌ ಸಲ್ಲಿಕೆ ವಿಳಂಬದ ದಂಡ ಮನ್ನಾ ಮಾಡಿದ ಸರ್ಕಾರ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
₹ 92 ಸಾವಿರ ಕೋಟಿ ಸಂಗ್ರಹ
₹ 92 ಸಾವಿರ ಕೋಟಿ ಸಂಗ್ರಹ   

ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರೂಪದಲ್ಲಿ ₹ 92,150 ಕೋಟಿ ಸಂಗ್ರಹವಾಗಿದೆ.

ವಿಭಿನ್ನ ತೆರಿಗೆ ರೂಪಗಳಲ್ಲಿ ಈ ತಿಂಗಳ 23ರವರೆಗೆ  ವಹಿವಾಟುದಾರರು ಸೆಪ್ಟೆಂಬರ್‌ ತಿಂಗಳ ‘ಜಿಎಸ್‌ಟಿಆರ್‌–3ಬಿ’ ರಿಟರ್ನ್ಸ್‌ಗಳನ್ನು ಸಲ್ಲಿಸಿದ್ದಾರೆ. 42.91 ಲಕ್ಷ ವಹಿವಾಟುದಾರರಿಂದ ಈ ಪ್ರಮಾಣದ ವರಮಾನ ಸಂಗ್ರಹವಾಗಿದೆ  ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರೀಯ ಜಿಎಸ್‌ಟಿ ರೂಪದಲ್ಲಿ ₹ 14,042 ಕೋಟಿ, ರಾಜ್ಯಗಳ ಜಿಎಸ್‌ಟಿ  ₹ 21,172 ಕೋಟಿ, ಸಮಗ್ರ ಜಿಎಸ್‌ಟಿ ರೂಪದಲ್ಲಿ ₹ 48,948 ಕೋಟಿ ಸಂಗ್ರಹವಾಗಿದೆ.  ಇದರಲ್ಲಿ ₹ 23,951 ಕೋಟಿ ಆಮದಿಗೆ ಸಂಬಂಧಿಸಿದೆ.

ADVERTISEMENT

ರಾಜ್ಯಗಳ ನಷ್ಟ ಭರ್ತಿಗೆ ವಿಧಿಸಲಾಗುತ್ತಿರುವ ಪರಿಹಾರ ಸೆಸ್‌ ರೂಪದಲ್ಲಿ ₹ 7,988 ಕೋಟಿ ಸಂಗ್ರಹಗೊಂಡಿದ್ದು, ಇದರಲ್ಲಿ ಆಮದಿಗೆ ಸಂಬಂಧಿಸಿದ ₹ 722 ಕೋಟಿ ಒಳಗೊಂಡಿದೆ.

ವಿಳಂಬ ದಂಡ ರದ್ದು: ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ  ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸಲು ವಿಳಂಬ ಮಾಡಿದ್ದಕ್ಕೆ ವಿಧಿಸಲಾಗುವ ದಂಡವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ.

‘ತೆರಿಗೆದಾರರಿಗೆ ಅನುಕೂಲತೆ ಕಲ್ಪಿಸಲು ಜಿಎಸ್‌ಟಿಆರ್‌–3ಬಿ’ ವಿಳಂಬ ಸಲ್ಲಿಕೆ ಮೇಲಿನ ವಿಳಂಬ ಶುಲ್ಕ ರದ್ದು ಪಡಿಸಲಾಗಿದೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ಈಗಾಗಲೇ ವಸೂಲಿ ಮಾಡಿರುವ ದಂಡದ ಹಣವನ್ನು ತೆರಿಗೆದಾರರ ಖಾತೆಗೆ ಮರಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಜುಲೈ ತಿಂಗಳ ರಿಟರ್ನ್ಸ್‌ ಸಲ್ಲಿಕೆಗೆ ವಿಧಿಸಲಾಗಿದ್ದ ದಂಡವನ್ನೂ ಈ ಮೊದಲೇ ಮನ್ನಾ ಮಾಡಲಾಗಿದೆ.

ಬಾಕಿ ತೆರಿಗೆ ಪಾವತಿಸಿದ ನಂತರ ತಿಂಗಳ ‘ಜಿಎಸ್‌ಟಿಆರ್‌–3ಬಿ’ ಅನ್ನು ಮುಂದಿನ ತಿಂಗಳ 20ರಂದು ಸಲ್ಲಿಸಬೇಕಾಗುತ್ತದೆ.ಜಿಎಸ್‌ಟಿಎನ್‌ ಜಾಲತಾಣದ ಮಾಹಿತಿ ಪ್ರಕಾರ, ಭಾರಿ ಸಂಖ್ಯೆಯ ತೆರಿಗೆದಾರರು ಕೊನೆಯ ದಿನದ ನಂತರವೇ ರಿಟರ್ನ್ಸ್‌ ಸಲ್ಲಿಸುತ್ತಿದ್ದಾರೆ. ಜುಲೈ ತಿಂಗಳಲ್ಲಿ ಅಂತಿಮ ದಿನದ ಒಳಗೆ ರಿಟರ್ನ್ಸ್‌ ಸಲ್ಲಿಸಿದವರ ಸಂಖ್ಯೆ 33.98 ಲಕ್ಷ ಇತ್ತು. ಆನಂತರ ಈ ಸಂಖ್ಯೆ 55.87 ಲಕ್ಷಕ್ಕೆ ಏರಿಕೆಯಾಗಿತ್ತು.

ಅದೇ ರೀತಿ ಆಗಸ್ಟ್‌ನಲ್ಲಿ ನಿಗದಿತ ದಿನದ ಒಳಗೆ ರಿಟರ್ನ್ಸ್‌ ಸಲ್ಲಿಸಿದವರ ಸಂಖ್ಯೆ 28.46 ಲಕ್ಷ ಇತ್ತು. ಆನಂತರ ಈ ಸಂಖ್ಯೆ 51.37 ಲಕ್ಷಕ್ಕೆ ತಲುಪಿತ್ತು. ಸೆಪ್ಟೆಂಬರ್‌ನಲ್ಲಿಯೂ ಈ ಸಂಖ್ಯೆ ಆರಂಭದಲ್ಲಿ 39.4 ಲಕ್ಷದಷ್ಟಿತ್ತು. ಈ ತಿಂಗಳ 23ರವರೆಗೆ ಇದು 42 ಲಕ್ಷಕ್ಕೆ ಏರಿಕೆಯಾಗಿದೆ.

ದಂಡದ ಪ್ರಮಾಣ

ತಡವಾಗಿ ರಿಟರ್ನ್ಸ್‌ ಸಲ್ಲಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿಗೆ ಅನ್ವಯಿಸಿ ಪ್ರತಿ ದಿನಕ್ಕೆ ತಲಾ ₹ 100  (ದಿನವೊಂದಕ್ಕೆ ಒಟ್ಟು ₹ 200) ದಂಡ ವಿಧಿಸಲು ಜಿಎಸ್‌ಟಿ ಕಾಯ್ದೆಯಲ್ಲಿ ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.