ADVERTISEMENT

ಹಿಂದಿನ ಬಜೆಟ್‌ನ 132 ಘೋಷಣೆ ಜಾರಿಗೆ ಬಾಕಿ

ಬಜೆಟ್‌: ಇನ್ನೂ ಅನುಷ್ಠಾನಗೊಳ್ಳದ ‘ರೈತ ಶಕ್ತಿ’, ‘ಅಸ್ಮಿತೆ’ ಯೋಜನೆ

ರಾಜೇಶ್ ರೈ ಚಟ್ಲ
Published 24 ಜನವರಿ 2023, 21:35 IST
Last Updated 24 ಜನವರಿ 2023, 21:35 IST
   

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫೆಬ್ರುವರಿ 17ರಂದು ತಮ್ಮ ಎರಡನೇ ಬಜೆಟ್‌ ಮಂಡಿಸುವ ಸಿದ್ಧತೆಯಲ್ಲಿದ್ದಾರೆ. ಆದರೆ, 2022–23ರಲ್ಲಿ ಅವರು ಮಂಡಿಸಿದ ಚೊಚ್ಚಲ ಆಯವ್ಯಯದಲ್ಲಿರುವ 132 ಘೋಷಣೆಗಳು ಇನ್ನೂ ಅನುಷ್ಠಾನಗೊಂಡಿಲ್ಲ.

ಆರೋಗ್ಯ ಇಲಾಖೆಗೆ ಸಂಬಂಧಿಸಿದಂತೆ ಅತೀ ಹೆಚ್ಚು 23 ಸೇರಿದಂತೆ, 34 ಇಲಾಖೆಗಳಲ್ಲಿ ಒಟ್ಟು 391 ಘೋಷಣೆಗಳನ್ನು ನೀಡಿದ್ದರು. ಆ ಪೈಕಿ, 52 ನೀತಿಗೆ ಸಂಬಂಧಿಸಿದ ಹೇಳಿಕೆಗಳು. ಉಳಿದಂತೆ, 330 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಆ ಪೈಕಿ, 207 ಅನುಷ್ಠಾನಗೊಂಡಿವೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ‘ಗೆ ತಿಳಿಸಿವೆ.

ಅನುಷ್ಠಾನವಾಗದ ಘೋಷಣೆಗಳ ಕುರಿತು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಿರಿಯ ಅಧಿಕಾರಿಗಳ ಜೊತೆ ಜ. 10ರಂದು ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ. ಸರ್ಕಾರಿ ಆದೇಶ ಹೊರಡಿಸಿರುವ ಘೋಷಣೆಗಳ ತ್ವರಿತ ಅನುಷ್ಠಾನಕ್ಕೆ ಅವರು ಸಲಹೆ ನೀಡಿದ್ದಾರೆ.

ADVERTISEMENT

ಅನುಷ್ಠಾನಕ್ಕೆ ಬಾಕಿ ಇರುವ ಘೋಷಣೆಗಳು: ರೈತರಿಗೆ ಕೃಷಿ ಯಂತ್ರೋಪಕರಣ ಬಳಕೆಯನ್ನು ಪ್ರೋತ್ಸಾಹಿಸಲು ಮತ್ತು ಇಂಧನ ವೆಚ್ಚದ ಭಾರ ಕಡಿಮೆ ಮಾಡಲು ಪ್ರತಿ ಎಕರೆಗೆ ₹ 250ರಂತೆ ಗರಿಷ್ಠ 5 ಎಕರೆಗೆ ಡಿಬಿಟಿ ಮೂಲಕ ಡೀಸೆಲ್‌ ಸಹಾಯಧನ ನೀಡಲು ‘ರೈತ ಶಕ್ತಿ’‌ ಯೋಜನೆಯನ್ನು ₹ 500 ಕೋಟಿಯಲ್ಲಿ ಒದಗಿಸುವುದಾಗಿ ಘೋಷಿಸಲಾಗಿದೆ. ಈ ಬಗ್ಗೆ 2022ರ ಮೇ 17ರಂದೇ ಆದೇಶ ಹೊರಡಿಸಿದ್ದರೂ ಇನ್ನೂ ಚಾಲನೆ ಸಿಕ್ಕಿಲ್ಲ.‌ ರಾಜ್ಯದ ಎಲ್ಲ ಹೋಬಳಿಗೆ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ವಿಸ್ತರಿಸುವ ಯೋಜನೆಯೂ ಆದೇಶದಲ್ಲಿಯೇ ಉಳಿದಿದೆ.

ಎಲ್ಲ ಜಿಲ್ಲೆಗಳಲ್ಲಿ ಮಿನಿ ಆಹಾರ ಪಾರ್ಕ್‌, ಹೀರೇಕೆರೂರಿನಲ್ಲಿ ಗೋವಿನ ಜೋಳ ಸಂಶೋಧನಾ ಕೇಂದ್ರ, ಮೆಣಸು ಮತ್ತು ಇತರ ಸಾಂಬಾರ್‌ ಪದಾರ್ಥಗಳ ಗುಣಮಟ್ಟ ಹೆಚ್ಚಿಸಲು ಬ್ಯಾಡಗಿಯಲ್ಲಿ ಸಂಶೋಧನಾ ಕೇಂದ್ರ, ಹಾನಗಲ್‌ನಲ್ಲಿ ಮಾವು ಸಂಸ್ಕರಣಾ ಘಟಕ, ಮಂಡ್ಯ ಜಿಲ್ಲೆಯ ಕೆ.ಆರ್‌. ಪೇಟೆಯಲ್ಲಿ ರೇಷ್ಮೆ ಉತ್ಪಾದನಾ ಚಟುವಟಿಕೆಗೆ ತರಬೇತಿ ಕೇಂದ್ರ ಇನ್ನೂ ಆರಂಭ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.