ADVERTISEMENT

ಆತ್ಮನಿರ್ಭರ್‌ ಭಾರತ್ | 2021ರ ಬಜೆಟ್‌ನಲ್ಲಿ ಈ ಪ್ರಮುಖ ವಲಯಗಳಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 7:37 IST
Last Updated 29 ಜನವರಿ 2021, 7:37 IST
   

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾಸೀತಾರಾಮನ್‌ ಅವರು ಫೆಬ್ರುವರಿ 1ರಂದ ಬಜೆಟ್‌ ಮಂಡಿಸಲಿದ್ದಾರೆ. ಕೋವಿಡ್‌ ಸಂಕಷ್ಟದ ಈ ಸಂದರ್ಭದಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವ ಗುರುತರ ಜವಾಬ್ದಾರಿ ಅವರ ಮೇಲಿದೆ.

ತೆರಿಗೆ ಸಂಗ್ರಹ ಹಾಗೂ ಆದಾಯ ಕಡಿಮೆಯಾಗಿರುವುದರಿಂದ 19ನೇ ಹಣಕಾಸು ಯೋಜನೆಯನ್ನು ಜಾರಿಗೊಳಿಸುವ ಮೂಲಕ ‘ಆತ್ಮನಿರ್ಭರ’ತೆಗೆ ಆದ್ಯತೆ ನೀಡುವ ಸುಳಿವನ್ನು ಹಣಕಾಸು ಇಲಾಖೆ ಕೊಟ್ಟಿದೆ.

ಕೋವಿಡ್‌ ಸವಾಲಿನ ನಡುವೆಯೂ ಆರ್ಥಿಕತೆಗೆ ಚೇತರಿಕೆ ನೀಡಲು ಉತ್ಪಾದನ ವಲಯದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯಗಳಿವೆ. ಕೋವಿಡ್‌ನಿಂದ ಸಂಕಷ್ಟಕ್ಕೆ ತುತ್ತಾಗಿರುವ ಯುವ ಸಮುದಾಯಕ್ಕೆ ಉದ್ಯೋಗದ ಅವಕಾಶಗಳನ್ನು ಕಲ್ಪಿಸುವ ಬಜೆಟ್‌ ಇದಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ADVERTISEMENT

ವಿವಿಧ ವಲಯಗಳಿಗೆ ಸಂಬಂಧಿಸಿದಂತೆ ಈ ಸಲ ಏನನ್ನು ಕೊಡಬಹುದು ಹಾಗೂ ಕಳೆದ ಸಲ ಏನನ್ನು ನೀಡಲಾಗಿತ್ತು ಎಂಬುದರ ವಿಶ್ಲೇಷಣೆ ಇಲ್ಲಿದೆ.

ರಕ್ಷಣಾ ವಲಯ...

ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ್ ಘೋಷಣೆಯ ಫಲವಾಗಿ ರಕ್ಷಣಾ ವಲಯದಲ್ಲಿ ಭಾರತ ಸ್ವಾವಲಂಬನೆಯತ್ತ ಮುಖ ಮಾಡಿದೆ. ಮುಂದಿನ 4 ವರ್ಷಗಳಲ್ಲಿ ಮಿಲಿಟರಿಗೆ ಸಂಬಂಧಿಸಿದಂತೆ 101 ಸರಕುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ದೇಶಿಯವಾಗಿ ಉತ್ಪಾದನೆ ಮಾಡಲಾಗುವುದು ಎಂದು ರಕ್ಷಣಾ ಸಚಿವ ಸಚಿವ ರಾಜನಾಥ್ ಸಿಂಗ್ ಕಳೆದ ವರ್ಷ ಘೋಷಣೆ ಮಾಡಿದ್ದರು.

ಎಕೆ-203 ರೈಫಲ್ ಗಳನ್ನು ತಯಾರಿಸಲು ರಷ್ಯಾದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡಿದ್ದು ಶೇ 85% ರಷ್ಟು ರೈಫಲ್ ಗಳನ್ನು ಉತ್ಪಾದಿಸಿ ರಫ್ತು ಮಾಡಲಾಗುವುದು ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ರಕ್ಷಣಾ ಉತ್ಪಾದನೆಯಲ್ಲಿ ವಿದೇಶಿ ನೆರ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿರುವುದು ನಮ್ಮ ರಫ್ತು ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಈ ವರ್ಷ ಸ್ಥಳೀಯವಾಗಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳಿಗೆ ಬಳಸಲಾಗುವ ಮೂಲ ಕಚ್ಚಾ ವಸ್ತುಗಳನ್ನು ದೇಶಿಯವಾಗಿ ತಯಾರಿಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ಸೆಮಿಕಂಡಕ್ಟರ್‌...

ಜಾಗತಿಕವಾಗಿ ಸೆಮಿಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ಅಮೆರಿಕ ಮತ್ತು ಚೀನಾ ದೇಶಗಳು ಪ್ರಾಬಲ್ಯ ಸಾಧಿಸಿವೆ. ಚೀನಾ ಅಥವಾ ಅಮೆರಿಕದಿಂದ ಸೆಮಿಕಂಡಕ್ಟರ್‌ಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಎಲ್ಲಾ ಮಾದರಿಯ ಎಲೆಕ್ಟ್ರಾನಿಕ್‌ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಇದರಲ್ಲಿ ಸ್ವಾವಲಂಬನೆ ಸಾಧಿಸಲು ಆಧುನಿಕ ಪದ್ಧತಿಯಲ್ಲಿ ಸೆಮಿಕಂಡಕ್ಟರ್‌ಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ.

2013ರಲ್ಲಿ ಎರಡು ಸೆಮಿಕಂಡಕ್ಟರ್‌ ಘಟಕಗಳನ್ನು ತೆರೆಯಲು ಸರ್ಕಾರ ₹ 63 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಆದರೆ ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆಗೆ ದೇಶದಲ್ಲಿ ಪೂರಕ ವಾತಾವರಣ ಇಲ್ಲದಿರುವುದಕ್ಕೆ ಅದು ಇನ್ನು ಸಾಧ್ಯವಾಗಿಲ್ಲ.

ಎಲೆಕ್ಟ್ರಾನಿಕ್‌ ಉತ್ಪನ್ನಗಳ ತಯಾರಿಕೆ ಕಂಪನಿಗಳಿಗೆ ಅಗತ್ಯ ಮೂಲಕಸೌಕರ್ಯ ನೀಡಿ, ಸೆಮಿಕಂಡಕ್ಟರ್‌ಗಳ ಉತ್ಪಾದನೆಯಲ್ಲಿ ದೇಶ ಸ್ವಾಲಂಬನೆ ಸಾಧಿಸುವುದಕ್ಕೆ ಈ ಸಲದ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ. ದೇಶಕ್ಕೆ ಸೆಮಿಕಂಡಕ್ಟರ್‌ಗಳ ತಯಾರಿಕೆ ಸಾಮರ್ಥ್ಯ ಇದ್ದು, ಸ್ಥಳೀಯ ಸಂಪನ್ಮೂಲ ಮತ್ತು ಬೌದ್ಧಿಕತೆಯನ್ನು ಸದ್ಬಳಕೆ ಮಾಡಿಕೊಳ್ಳುವ ಯೋಜನೆ ಈ ಸಲದ ಬಜೆನಲ್ಲಿ ಘೋಷಣೆಯಾಗಲಿದೆ.

ಉತ್ಪಾದನ ವಲಯ

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದನಂತರ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೊಳಿಸಿದ್ದರು ನಿರೀಕ್ಷಿತಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವುದೆ ಮುಖ್ಯ ಆಶಯವಾಗಿದ್ದರೂ ಎಲೆಕ್ಟ್ರಾನಿಕ್ಸ್, ಟೆಲಿಕಾಂ ಮತ್ತು ವೈದ್ಯಕೀಯ ಉಪಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಆಮದಾಗುತ್ತಿರುವುದು ಮೇಕ್ ಇನ್ ಇಂಡಿಯಾ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.

ಈ ಬಜೆಟ್‌ನಲ್ಲಿ ಸ್ಮಾರ್ಟ್ ಫೋನ್, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪಕರಣಗಳು ಸೇರಿದಂತೆ 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಆಮದು ಸುಂಕವನ್ನು ಶೇ.5ರಿಂದ 10ರಷ್ಟು ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಈ ಕ್ರಮವು ಸುಮಾರು ₹ 200 - 210 ಶತಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಆಮದು ಸುಂಕವನ್ನು ಹೆಚ್ಚಿಸುವ ಕ್ರಮ ಒಳ್ಳೆಯ ನಡೆ ಎನ್ನಲಾಗಿದೆ.

ವಿದ್ಯುತ್‌ಚಾಲಿತ ವಾಹನಗಳು

ಪಳೆಯುಳಿಕೆ ಇಂಧನ ವ್ಯಾಪಕ ಬಳಕೆಯನ್ನು ಕಡಿಮೆ ಮಾಡಲು ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಮಾಡುವುದು ಪರ್ಯಾಯ ಮಾರ್ಗವಾಗಿದೆ. ಇದರಿಂದ ಸ್ಥಳೀಯವಾಗಿ ಸಾಕಷ್ಟು ಲಾಭಗಳು ದೊರೆಯಲಿವೆ ಎಂದು ಎಲೆಕ್ಟ್ರಿಕ್ ವಾಹನ ತಯಾರಕರ ಉದ್ಯಮ ಸಂಸ್ಥೆ ತಿಳಿಸಿದೆ.

ಈ ಸಂಬಂಧ ಹಣಕಾಸು ಸಚಿವರಿಗೆ ಪತ್ರ ಬರೆದಿರುವ ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲಹೆ ಮಾಡಿದ್ದಾರೆ. ಅಗತ್ಯ ಮೂಲಕ ಸೌಕರ್ಯ ನೀಡುವುದು, ಆಕರ್ಷಕ ರಿಯಾಯಿತಿ ಯೋಜನೆಗಳನ್ನು ಘೋಷಣೆ ಮಾಡುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.