ADVERTISEMENT

ಬಜೆಟ್ ಜನಪರ ಕಾರ್ಯಕ್ರಮಗಳ ಬಗ್ಗೆ ಬಿಜೆಪಿಯಿಂದ 12 ದಿನ ರಾಷ್ಟ್ರವ್ಯಾಪಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 10:21 IST
Last Updated 1 ಫೆಬ್ರುವರಿ 2023, 10:21 IST
ಬಿಜೆಪಿ
ಬಿಜೆಪಿ   

ನವದೆಹಲಿ (ಪಿಟಿಐ): ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಜನಪರ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಬಿಜೆಪಿ 12 ದಿನಗಳ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಈ ಅಭಿಯಾನವನ್ನು ಬಿಜೆಪಿಯ ಹಿರಿಯ ನಾಯಕ ಸುಶೀಲ್ ಮೋದಿ ಸಂಯೋಜಿಸಲಿದ್ದು, ಫೆ.12 ರಂದು ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ರೈತ ಮತ್ತು ಯುವ ಘಟಕಗಳ ಮುಖ್ಯಸ್ಥರು ಸೇರಿದಂತೆ ಒಂಬತ್ತು ಸದಸ್ಯರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗಿದೆ.

ADVERTISEMENT

ಅಭಿಯಾನದ ಭಾಗವಾಗಿ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ನಡೆಸಿದರೆ, ಪಕ್ಷವು ಅಧಿಕಾರದಲ್ಲಿಲ್ಲದ ರಾಜ್ಯಗಳಲ್ಲಿ ಬಿಜೆಪಿ ಘಟಕದ ಮುಖ್ಯಸ್ಥರು ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕರು ಪತ್ರಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.

ದೇಶದ 50 ಪ್ರಮುಖ ನಗರಗಳಲ್ಲಿ ನರೇಂದ್ರ ಮೋದಿ ಸರ್ಕಾರದ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಬಜೆಟ್ ನಲ್ಲಿ ಘೋಷಿಸಿದ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕ್ರಮಗಳನ್ನು ಅಂತಿಮಗೊಳಿಸಲು ಮತ್ತು ಬಜೆಟ್ ಕುರಿತು ಬಿಜೆಪಿಯ ಪ್ರಚಾರದ ನೀಲನಕ್ಷೆ ನಿರ್ಧರಿಸಲು ರಚಿಸಲಾದ ಕಾರ್ಯಪಡೆ ಸೋಮವಾರ ಇಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸಭೆ ಸೇರಿತ್ತು.

2024 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಕಾರಣ ಈ ಬಜೆಟ್ ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆ ಪೂರ್ಣ ಪ್ರಮಾಣದ ಬಜೆಟ್ ಆಗಿದೆ. ಆದ್ದರಿಂದ, ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಈ ಅಭಿಯಾನದ ಲಾಭ ಪಡೆಯಲು ಬಯಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.