ADVERTISEMENT

Budget 2025 | ಮಧ್ಯಮವರ್ಗಕ್ಕೆ ಹಾರ: ಅಭಿವೃದ್ಧಿಗೆ ನೆರವಿನ ಬರ

ಮಂಜುನಾಥ್ ಹೆಬ್ಬಾರ್‌
Published 1 ಫೆಬ್ರುವರಿ 2025, 23:30 IST
Last Updated 1 ಫೆಬ್ರುವರಿ 2025, 23:30 IST
<div class="paragraphs"><p>ಪ್ರಕಾಶ ಶೆಟ್ಟಿ</p></div>
   

ಪ್ರಕಾಶ ಶೆಟ್ಟಿ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿ ಮನೆ ವಾರ್ತೆಯ ಖರ್ಚುಗಳನ್ನು ನಿಭಾಯಿಸಲು ಏದುಸಿರು ಬಿಡುತ್ತಿದ್ದ ಮಧ್ಯಮ ವರ್ಗದ ಜನರು ನಿರಾಳರಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಏರಿಸಿದೆ.ಸಂಬಳ ಪಡೆಯುವ ವ್ಯಕ್ತಿಗೆ ₹12.75 ಲಕ್ಷದವರೆಗೆ ಹೊಸ ತೆರಿಗೆ ಪದ್ಧತಿಯಡಿ ಯಾವುದೇ ತೆರಿಗೆ ಇರುವುದಿಲ್ಲ ಎಂದು ಪ್ರಕಟಿಸುವ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಜನರಲ್ಲಿ ‘ಸುಖಾನುಭವ’ ಮೂಡಿಸಿದ್ದಾರೆ. ಮಧ್ಯಮ ವರ್ಗದವರು, ಅದರಲ್ಲೂ ನೌಕರಿದಾರರೇ ಆದ್ಯತೆಯಾಗಿದ್ದಾರೆ. ಆದರೆ, ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯದಂತಹ ಮಹತ್ವದ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡುವ ಮೂಲಕ ಪ್ರಗತಿಯನ್ನು ನಿರ್ಲಕ್ಷಿಸಿದ್ದಾರೆ. 

‘ಎಲ್ಲ ಪ್ರದೇಶಗಳ ಸಮತೋಲಿತ ಅಭಿವೃದ್ಧಿಯ ಮೂಲಕ ಎಲ್ಲರ ಪ್ರಗತಿಯನ್ನು ಸಾಕಾರಗೊಳಿಸುವ ವಿಶಿಷ್ಟ ಅವಕಾಶವಾಗಿ ಮುಂದಿನ ಐದು ವರ್ಷಗಳನ್ನು ನೋಡುತ್ತೇವೆ’ ಎಂದು ನಿರ್ಮಲಾ ಅವರು ಬಜೆಟ್‌ನಲ್ಲಿ ಹೇಳಿದ್ದಾರೆ. ಬಜೆಟ್‌ ಭಾಷಣದ ಆರಂಭದಲ್ಲಿಯೇ, ಅರ್ಥ ವ್ಯವಸ್ಥೆಯ ಪ್ರಗತಿಯ ಎಂಜಿನ್‌ಗಳಲ್ಲಿ ಕೃಷಿಯು ಮೊದಲನೆಯದು ಎಂದಿದ್ದಾರೆ.

ADVERTISEMENT

ಆದರೆ, 2025–26ನೇ ಸಾಲಿನಲ್ಲಿ ಕೃಷಿಗೆ ₹1.27 ಲಕ್ಷ ಕೋಟಿ ಮೀಸಲಿರಿಸಿದ್ದಾರೆ. 2024–25ರಲ್ಲಿ ಈ ಮೊತ್ತವು ₹1.31 ಲಕ್ಷ ಕೋಟಿ ಇತ್ತು. ರಸಗೊಬ್ಬರ ಸಹಾಯಧನವು ₹1.71 ಲಕ್ಷ ಕೋಟಿಯಿಂದ ₹1.67 ಲಕ್ಷ ಕೋಟಿಗೆ ಇಳಿಕೆಯಾಗಿದೆ. 

ಬೆಳೆ ಸಂಬಂಧಿ ಅನುದಾನದಲ್ಲಿ ₹8,129 ಕೋಟಿ, ಗ್ರಾಮೀಣ ರಸ್ತೆ ಮತ್ತು ಸೇತುವೆಗೆ 16,057 ಕೋಟಿ, ಬೆಳೆವಿಮೆಗೆ ₹3,622 ಕೋಟಿ ಅನುದಾನವನ್ನು ಕಳೆದ ಬಜೆಟ್‌ಗೆ ಹೋಲಿಸಿದರೆ ಕಡಿತ ಮಾಡಲಾಗಿದೆ. ಇದು, ಬಜೆಟ್‌ನ ಗಮನವು ಮಧ್ಯಮ ವರ್ಗವನ್ನು ಬಿಟ್ಟು ಬೇರೆಡೆಗೆ ಹರಿದಿಲ್ಲ ಎಂಬುದುರ ಸುಳಿವನ್ನು ನೀಡುತ್ತದೆ.

ವಿರೋಧ ಪಕ್ಷಗಳ ಭಾರಿ ಗದ್ದಲದ ನಡುವೆಯೇ ತಮ್ಮ 75 ನಿಮಿಷಗಳ ಬಜೆಟ್‌ ಭಾಷಣದಲ್ಲಿ ಸಚಿವರು ದೆಹಲಿ ಹಾಗೂ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ‘ಮತ ಶಿಕಾರಿ’ಗೆ ಪೂರಕವಾದ ಜನಪ್ರಿಯ ಘೋಷಣೆಗಳನ್ನೂ ಮಾಡಿದರು. ಆದರೆ, ಕರ್ನಾಟಕದ ಬಹುಕಾಲದ ಬೇಡಿಕೆಗಳಿಗೆ ನಿರ್ಮಲಾ ಕಿಮ್ಮತ್ತು ನೀಡಿಲ್ಲ. 

‘ತೆರಿಗೆ ವಿನಾಯಿತಿಯ ನಿರ್ಧಾರದಿಂದ ಹೊಸ ತೆರಿಗೆ ಪದ್ಧತಿಯಲ್ಲಿ ₹12 ಲಕ್ಷ  ಆದಾಯ ಹೊಂದಿರುವ ತೆರಿಗೆ ಪಾವತಿದಾರರಿಗೆ ₹80,000 ಉಳಿತಾಯ ಆಗಲಿದೆ’ ಎಂದು ಸಚಿವರು ಪ್ರತಿಪಾದಿಸಿದರು. ಆದರೆ, ಸರ್ಕಾರದ ‘ಭರ್ಜರಿ’ ಘೋಷಣೆಯಿಂದ ₹12.75 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರಿಗೆ ಭಾರಿ ಅನುಕೂಲವೇನೂ ಆಗುವುದಿಲ್ಲ. ಶನಿವಾರ ಬೆಳಿಗ್ಗೆ 12 ರವರೆಗೆ ಚೇತೋಹಾರಿಯಾಗಿದ್ದ ಷೇರು ಮಾರುಕಟ್ಟೆಯ ಸೂಚ್ಯಂಕಗಳು ಸಚಿವರು ತೆರಿಗೆ ವಿನಾಯಿತಿ ಘೋಷಿಸಿದ ಬಳಿಕ ಜಾರು ಹಾದಿಯಲ್ಲಿ ಸಾಗಿದವು. 

ದೇಶದ ಆರ್ಥಿಕ ಸ್ಥಿತಿ ಆಶಾದಾಯಕವಾಗಿಲ್ಲ. ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಅತ್ಯಾಕರ್ಷಕ ಹೆಸರಿನ ಯೋಜನೆಗಳ ಮಹಾಪೂರದ ನಡುವೆಯೂ ಅಭಿವೃದ್ಧಿ ಚಟುವಟಿಕೆಗಳು ವೇಗ ಪಡೆದುಕೊಳ್ಳುತ್ತಿಲ್ಲ. ಈ ಸಲವೂ ಬಜೆಟ್‌ನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಭಾರಿ ಉತ್ತೇಜನ ನೀಡಿಲ್ಲ. ಹಲವು ಪ್ರಮುಖ ಇಲಾಖೆಗಳ ಅನುದಾನ ಪ್ರಮಾಣವನ್ನು ಸದ್ದಿಲ್ಲದೆ ಕಡಿತಗೊಳಿಸಲಾಗಿದೆ. ದೇಶದ ಸಾಲ ಪ್ರಮಾಣವು ಏರುಮುಖದಲ್ಲಿ ಸಾಗಿದೆ. ಈ ಎಲ್ಲ ಸಮಸ್ಯೆಗಳಿಗೆ ಮದ್ದು ಹುಡುಕುವಂತಹ ನೀಲನಕ್ಷೆಗಳು ಬಜೆಟ್‌ನಲ್ಲಿ ಕಂಡುಬರಲಿಲ್ಲ. 

ಸರಳವಾದ ಹೊಸ ಆದಾಯ ತೆರಿಗೆ ಮಸೂದೆಯನ್ನು ಮುಂದಿನ ವಾರ ಪರಿಚಯಿಸುವುದಾಗಿ ಸಚಿವರು ಈ ವೇಳೆ ಪ್ರಕಟಿಸಿದರು. ಹಿರಿಯ ನಾಗರಿಕರ ತೆರಿಗೆ ಕಡಿತ ಮಿತಿ ₹50,000ರಿಂದ ₹1 ಲಕ್ಷಕ್ಕೆ ಏರಿಸುವುದಾಗಿ ಹೇಳಿದರು. ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ₹2.40 ಲಕ್ಷದ ಮಿತಿಯನ್ನು ₹6 ಲಕ್ಷಕ್ಕೆ ಏರಿಸುವುದಾಗಿ ಘೋಷಿಸಿದರು. ಭೌಗೋಳಿಕ ರಾಜಕೀಯ ಅಡೆತಡೆಗಳಿಂದ ಉಂಟಾದ ಆರ್ಥಿಕ ಅನಿಶ್ಚಿತತೆಗಳ ನಡುವೆಯೂ ದೇಶದ ಬೆಳವಣಿಗೆ ಗತಿಯನ್ನು ಉತ್ತೇಜಿಸಲು ನಿರ್ಮಲಾ ಅವರು ದುಡಿಯುವ ವರ್ಗವನ್ನು ಓಲೈಸುವ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಬಾಗಿಲಿಗೆ ಬಂದು ನಿಂತಿರುವ ಹೊತ್ತಿನಲ್ಲಿ ದೊಡ್ಡ ಸಮುದಾಯವನ್ನು ಸಂತೃಪ್ತಗೊಳಿಸುವ ಸಚಿವರ ‘ಮಧ್ಯಮ ಮಾರ್ಗ’ವು ಕಮಲ ಪಾಳಯಕ್ಕೆ ಇನ್ನಷ್ಟು ಚೈತನ್ಯ ನೀಡಲಿದೆ ಎಂದು ಅಂದಾಜಿಸಲಾಗಿದೆ.  

2025-26ರ ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರದ ಒಟ್ಟು ಖರ್ಚು ₹50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜು ಮಾಡಲಾಗಿದೆ. ಅದರಲ್ಲಿ ₹11.21 ಲಕ್ಷ ಕೋಟಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ದೀರ್ಘಾವಧಿಯ ಆಸ್ತಿ ಸೃಷ್ಟಿಗೆ ವೆಚ್ಚವಾಗಲಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು ಸುಮಾರು ₹1 ಲಕ್ಷ ಕೋಟಿ ಕಡಿಮೆಯಾಗುವ ಸಾಧ್ಯತೆಯಿದೆ. ವಿತ್ತೀಯ ಕೊರತೆಯನ್ನು 2026ಕ್ಕೆ ಜಿಡಿಪಿಯ ಶೇ 4.4ಕ್ಕೆ ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು. ವಿತ್ತೀಯ ಕೊರತೆ ಕಡಿಮೆಗೊಳಿಸಿ ಬಂಡವಾಳ ವೆಚ್ಚವನ್ನು ಹೆಚ್ಚಿಸಿದರೆ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಆದರೆ, ಈ ಸಲ ಅಂತಹ ಪ್ರಯತ್ನವೇನೂ ಕಂಡಿಲ್ಲ. ಕಲ್ಯಾಣ ಯೋಜನೆಗಳ ಘೋಷಣೆಗಳ ಬಳಿಕವೂ ವಿತ್ತೀಯ ಕೊರತೆಯನ್ನು ಹದ್ದು ಮೀರಲು ಬಿಟ್ಟಿಲ್ಲ ಎಂಬುದು ಕಾರ್ಪೊರೇಟ್ ವಲಯದ ಸಮಾಧಾನ. ಜನಪ್ರಿಯ ಘೋಷಣೆಗಳಿಗೆ ಒತ್ತು ನೀಡಿರುವ ಈ ಬಜೆಟ್ ಅರ್ಥನೀತಿಯ ಒಳಿತು ಕೆಡುಕುಗಳ ಕುರಿತು ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಕೆಲವು ವರ್ಷಗಳಲ್ಲಿ ಸತತವಾಗಿ ಅನುದಾನ ಕಡಿತ ಮಾಡಲಾಗಿತ್ತು. ಕಳೆದ ವರ್ಷ ಪರಿಷ್ಕೃತ ಅಂದಾಜಿನ ಪ್ರಕಾರ ಈ ಯೋಜನೆಗೆ ₹86 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಈ ಸಲವೂ ಅಷ್ಟೇ ಮೊತ್ತ ಮೀಸಲಿಡಲಾಗಿದೆ. ಗ್ರಾಮೀಣ ಭಾರತದ ಸ್ತಂಭಗಳಾದ ಬಡವರು ಹಾಗೂ ರೈತರ ಕಲ್ಯಾಣವನ್ನು ನಿರ್ಲಕ್ಷಿಸಿ ಗ್ರಾಮೀಣ ಭಾರತದ ಬೆನ್ನೆಲುಬು ಮುರಿಯುವ ಕೆಲಸ ಮಾಡಿದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದವು. 

ನರೇಂದ್ರ ಮೋದಿ ಸರ್ಕಾರದ ಕನಸಿನ ಯೋಜನೆ ಜಲಜೀವನ್‌ ಮಿಷನ್‌ ಅನ್ನು 2028ರೊಳಗೆ ಪೂರ್ಣಗೊಳಿಸಲಾಗುವುದು ಎಂದೂ ನಿರ್ಮಲಾ ಸೀತಾರಾಮನ್‌ ತಿಳಿಸಿದರು. ಜಲಜೀವನ್‌ ಮಿಷನ್‌ನ ಯೋಜನಾ ವೆಚ್ಚ ಗಣನೀಯವಾಗಿ ಹೆಚ್ಚಳ ಆಗಿದೆ. ಈ ಸಲ ಬಜೆಟ್‌ನಲ್ಲಿ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯಕ್ಕೆ ₹74,226 ಕೋಟಿ ನೀಡಲಾಗಿದೆ. ಇದರಲ್ಲಿ ಸಿಂಹಪಾಲು ಜಲಜೀವನ್‌ ಮಿಷನ್‌ಗೇ ಹೋಗಲಿದೆ. 

ಬಿಹಾರಕ್ಕೆ ಉಡುಗೊರೆಗಳ ಸುರಿಮಳೆ

ವರ್ಷಾಂತ್ಯದಲ್ಲಿ ಚುನಾವಣೆಗೆ ಹೋಗಲಿರುವ ಬಿಹಾರದ ಮತದಾರರಿಗೆ ರಂಗು ರಂಗಿನ ಉಡುಗೊರೆಗಳ ಪೊಟ್ಟಣವನ್ನು ನರೇಂದ್ರ ಮೋದಿ ಸರ್ಕಾರ ಕೈಗಿಟ್ಟಿದೆ. ಈ ಮೂಲಕ, ಎನ್‌ಡಿಎ ಮೈತ್ರಿಕೂಟದ ಪ್ರಮುಖ ಪಾಲುದಾರ ಪಕ್ಷಗಳನ್ನು ಮತ್ತಷ್ಟು ಸಂತೃಪ್ತಗೊಳಿಸುವ ಪ್ರಯತ್ನ ನಡೆಸಿದೆ. 

ರಾಜ್ಯಕ್ಕೆ ಹಲವಾರು ಯೋಜನೆಗಳನ್ನು ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದರು. ಇದರಲ್ಲಿ ರೈತರಿಗೆ ತರಬೇತಿ ನೀಡಲು ಮಖಾನ ಮಂಡಳಿ ಸ್ಥಾಪನೆ, ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ, ವಿಮಾನ ನಿಲ್ದಾಣ ಮತ್ತು ರಾಜ್ಯದ ಮಿಥಿಲಾಂಚಲ್ ಪ್ರದೇಶದಲ್ಲಿ ಪಶ್ಚಿಮ ಕೋಶಿ ಕಾಲುವೆ ಯೋಜನೆಗೆ ಆರ್ಥಿಕ ನೆರವು, ಪಟನಾ ಐಐಟಿ ಹಾಗೂ ವಿಮಾನ ನಿಲ್ದಾಣಗಳ ವಿಸ್ತರಣೆ ಸೇರಿವೆ. ಬಿಜೆಪಿಯು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರೈತರು, ಕೃಷಿ ಉದ್ಯಮಿಗಳು, ಯುವಕರು ಮತ್ತು ಮಧ್ಯಮ ವರ್ಗವನ್ನು ಓಲೈಸುವ ಕಸರತ್ತು ಮಾಡಿದೆ. 

ಈ ಘೋಷಣೆಗಳನ್ನು ಬಿಜೆಪಿಯ ಬಿಹಾರ ಮಿತ್ರಪಕ್ಷಗಳಾದ ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಮತ್ತು ಕೇಂದ್ರ ಸಚಿವ ನಾಯಕ ಚಿರಾಗ್ ಪಾಸ್ವಾನ್‌ ಶ್ಲಾಘಿಸಿದರು. ಆದರೆ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌, ‘ಚುನಾವಣಾ ವರ್ಷದಲ್ಲಿ ಬಿಹಾರ ಸಾಕಷ್ಟು ಕೊಡುಗೆಗಳನ್ನು ಪಡೆದಿದೆ. ಆದರೆ, ಎನ್‌ಡಿಎಯ ಮತ್ತೊಂದು ಆಧಾರಸ್ತಂಭವಾದ ಆಂಧ್ರಪ್ರದೇಶವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ’ ಎಂದು ವ್ಯಂಗ್ಯವಾಡಿದರು. ‘ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಬಜೆಟ್‌ಗೆ ಮುನ್ನವೇ ಈಡೇರಿಸಿದೆ. ಇದನ್ನು ವಿವಾದ ಮಾಡುವ ಅಗತ್ಯ ಇಲ್ಲ’ ಎಂದು ಟಿಡಿಪಿ ಹಾಗೂ ಬಿಜೆಪಿ ನಾಯಕರು ಸಮಜಾಯಿಷಿ ನೀಡಿದರು. 

ಟಿಡಿಪಿ ಹಾಗೂ ಜೆಡಿಯು ಸಹಕಾರದಿಂದ ಮೂರನೇ ಬಾರಿಗೆ ಅಧಿಕಾರಕ್ಕೆ ಹಿಡಿದ ಬಿಜೆಪಿಯು 2024ರ ಜುಲೈ ಬಜೆಟ್‌ನಲ್ಲಿ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಭರಪೂರ ಯೋಜನೆಗಳನ್ನು ಪ್ರಕಟಿಸಿತ್ತು. ‘ಪೂರ್ವೋದಯ’ಕ್ಕೆ ಮೋದಿ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳುತ್ತಾ ನಿರ್ಮಲಾ ಅವರು, ‘ಪೂರ್ವ ಪ್ರದೇಶದಲ್ಲಿ ಆಹಾರ ಸಂಸ್ಕರಣಾ ಚಟುವಟಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲು ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ ಸ್ಥಾಪಿಸುವುದಾಗಿ ಘೋಷಿಸಿದರು.

ಇಳಿಕೆ

l ಎಲ್‌ಇಡಿ/ಎಲ್‌ಸಿಡಿ ಟಿವಿ

l ಮೊಬೈಲ್‌ ಫೋನ್‌

l ಮೊಬೈಲ್‌ ಚಾರ್ಜರ್‌

l ಆಭರಣ

l ಸಾಗರ ಉತ್ಪನ್ನಗಳು

l ಲಿಥಿಯಂ ಬ್ಯಾಟರಿ

l ಚರ್ಮದ ಉತ್ಪನ್ನಗಳು

l 36 ಜೀವರಕ್ಷಕ ಔಷಧಗಳು

l ಮಾರ್ಬಲ್‌

l ಗ್ರಾನೈಟ್‌

l ವಿದೇಶಿ ಮೋಟಾರು ಸೈಕಲ್‌ಗಳು

l ಕೆಲ ವಿದೇಶಿ ಕಾರುಗಳು

ಏರಿಕೆ

l ಹೆಣೆದ ಬಟ್ಟೆಗಳು

l ಪ್ಯಾನೆಲ್‌ ಡಿಸ್‌ಪ್ಲೆ

l ಸ್ಮಾರ್ಟ್‌ ಮೀಟರ್‌

l ಆಮದು ಮಾಡಿಕೊಂಡ ಪಾದರಕ್ಷೆ

l ಪಿವಿಸಿ ಉತ್ಪನ್ನಗಳು

l ಸೌರ ಫಲಕಗಳು

ರಾಜ್ಯದ ಪ್ರಮುಖ ಬೇಡಿಕೆಗಳಿಗಿಲ್ಲ ಮಣೆ

ನವದೆಹಲಿ: ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎಂಬುದು ಸೇರಿದಂತೆ ರಾಜ್ಯದ ಹಲವು ಬೇಡಿಕೆಗಳನ್ನು ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ‍ಪರಿಗಣಿಸಿಲ್ಲ.  ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯದ ಬೇಡಿಕೆಯ ಪಟ್ಟಿಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ರೈಲ್ವೆ ಯೋಜನೆಗಳಿಗೆ ಕಳೆದ ಸಲಕ್ಕಿಂತ ₹5 ಕೋಟಿಯಷ್ಟೇ ಹೆಚ್ಚು ಸಿಕ್ಕಿದೆ. ರೈಲ್ವೆ ಯೋಜನೆಗಳ ಪೂರ್ಣ ಮೊತ್ತವನ್ನು ಕೇಂದ್ರವೇ ಭರಿಸಬೇಕು ಎಂಬ ಮನವಿಯನ್ನು ರೈಲ್ವೆ ಸಚಿವಾಲಯ ಒಪ್ಪಿಲ್ಲ. ಬೆಂಗಳೂರು ನಗರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡಬೇಕು ಎಂಬ ಮನವಿಗೆ ಕೇಂದ್ರದ್ದು ಮೌನವೇ ಉತ್ತರ.

ಉಳಿತಾಯ, ಹೂಡಿಕೆ, ಜನರು ಮಾಡುವ ವೆಚ್ಚ ಹಾಗೂ ಅಭಿವೃದ್ಧಿಯನ್ನು ಹೆಚ್ಚಿಸುವ ‘ಜನಸಾಮಾನ್ಯರ ಬಜೆಟ್’ ಇದು. ದೇಶದ ಅಭಿವೃದ್ಧಿಯಲ್ಲಿ ಜನರನ್ನು ಪಾಲುದಾರರನ್ನಾಗಿ ಮಾಡಲು ಬಲವಾದ ಅಡಿಪಾಯವನ್ನು ಹಾಕುತ್ತದೆ. ಮಧ್ಯಮವರ್ಗದವರ ತೆರಿಗೆ ಹೊರೆ ತಗ್ಗಿದೆ
ನರೇಂದ್ರ ಮೋದಿ, ಪ್ರಧಾನಿ
ಈ ಬಜೆಟ್, ಗುಂಡೇಟಿನಿಂದ ಆಗಿರುವ ದೊಡ್ಡ ಗಾಯಕ್ಕೆ ಸಣ್ಣ ಬ್ಯಾಂಡೇಜ್‌ ಹಾಕಿದಂತಿದೆ. ಜಾಗತಿಕ ಅನಿಶ್ಚಿತತೆಯ ಈಗಿನ ಸಂದರ್ಭದಲ್ಲಿ ಆರ್ಥಿಕ ಬಿಕ್ಕಟ್ಟು ಬಗೆಹರಿಸಲು ಭಾರಿ ಪಲ್ಲಟವೇ ಆಗಬೇಕಿದೆ. ಕೇಂದ್ರ ಸರ್ಕಾರವನ್ನು ‘ಯೋಚನೆಗಳ ದಿವಾಳಿತನ’ ಕಾಡುತ್ತಿದೆ
ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ಕೊಡುವುದನ್ನು ಮುಂದುವರಿಸಿದೆ. ತೆರಿಗೆ ಪಾವತಿಯಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದ್ದರೂ ಬಿಹಾರ ಹಾಗೂ ಆಂಧ್ರಪ್ರದೇಶಕ್ಕೆ ರಾಜಕೀಯ ಕಾರಣಗಳಿಗಾಗಿ ಹೆಚ್ಚಿನ ಪಾಲು ನೀಡಲಾಗಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ
₹12 ಲಕ್ಷವರೆಗೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಎಲ್ಲರಿಗೂ ಅನುಕೂಲವಾಗಿದೆ. ಜಲಜೀವನ್‌ ಮಿಷನ್‌ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಕೇಂದ್ರದ ಯೋಜನೆಗಳು ರಾಜ್ಯಕ್ಕೂ ಸಿಗಲಿವೆ. ಹಾಗಿದ್ದರೂ ರಾಜ್ಯಕ್ಕೆ ಏನೂ ನೀಡಿಲ್ಲ ಎಂದು ಸುಳ್ಳು ಹೇಳುವುದೇಕೆ?
ಆರ್. ಅಶೋಕ,ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.