ADVERTISEMENT

ಬಜೆಟ್‌ನಲ್ಲಿ ಹೊಸ ಖಾಸಗೀಕರಣ ನೀತಿ?

ಪಿಟಿಐ
Published 29 ಜನವರಿ 2021, 7:37 IST
Last Updated 29 ಜನವರಿ 2021, 7:37 IST
   

ನವದೆಹಲಿ: ಹೊಸ ಖಾಸಗೀಕರಣ ನೀತಿಗೆ ಸಂಬಂಧಿಸಿದ ರೂಪುರೇಷೆಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸುವ ಸಾಧ್ಯತೆ ಇದೆ. ಈ ನೀತಿಯ ಮೂಲಕ ಕೇಂದ್ರ ಸರ್ಕಾರವು ಮಹತ್ವದ್ದಲ್ಲದ ಉದ್ಯಮ ವಲಯಗಳಲ್ಲಿನ ತನ್ನ ಷೇರು ಪಾಲನ್ನು ಮಾರಾಟ ಮಾಡಲಿದೆ.

ಸರ್ಕಾರಿ ಸ್ವಾಮ್ಯದ ಯಾವೆಲ್ಲ ಉದ್ಯಮ ವಲಯಗಳು ಮಹತ್ವದವು, ಎಲ್ಲೆಲ್ಲಿ ಸರ್ಕಾರದ ಸ್ವಾಮ್ಯತ್ಯ ಮುಂದುವರಿಯಬೇಕು ಎಂಬುದನ್ನು ಈ ಬಾರಿಯ ಬಜೆಟ್‌ನಲ್ಲಿ ಗುರುತಿಸುವ ಕೆಲಸ ಆಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಸರ್ಕಾರಿ ಸ್ವಾಮ್ಯದಲ್ಲಿ ಇರುವ ಮಹತ್ವದ ಹಾಗೂ ಮಹತ್ವದ್ದಲ್ಲದ ಉದ್ದಿಮೆಗಳನ್ನು ವ್ಯಾಖ್ಯಾನಿಸುವ ನೀತಿಗೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.

ರಾಷ್ಟ್ರದ ಹಿತಾಸಕ್ತಿ ಹಾಗೂ ಸಾರ್ವಜನಿಕರ ಒಳಿತಿನ ದೃಷ್ಟಿಯಿಂದ ಪ್ರಮುಖವಾಗಿರುವ ಉದ್ದಿಮೆಗಳನ್ನು ‘ಮಹತ್ವದ್ದು’ ಎಂದು ವರ್ಗೀಕರಿಸುವ ಸಾಧ್ಯತೆ ಇದೆ. ಆತ್ಮನಿರ್ಭರ ಭಾರತ ಕಾರ್ಯಕ್ರಮದ ಅಂಗವಾಗಿ ಕೇಂದ್ರವು 2020ರ ಮೇ ತಿಂಗಳಲ್ಲಿ, ‘ಮಹತ್ವದ ವಲಯಗಳಲ್ಲಿ ಸರ್ಕಾರಿ ಸ್ವಾಮ್ಯದ ಗರಿಷ್ಠ ನಾಲ್ಕು ಕಂಪನಿಗಳು ಮಾತ್ರ ಇರಲಿವೆ. ಇನ್ನಿತರ ವಲಯಗಳಲ್ಲಿ ಇರುವ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಹಂತಹಂತವಾಗಿ ಖಾಸಗೀಕರಣ ಮಾಡಲಾಗುವುದು’ ಎಂದು ಹೇಳಿತ್ತು.

ADVERTISEMENT

ಹೊಸ ನೀತಿಯ ಅಡಿಯಲ್ಲಿ, ಮಹತ್ವದ ವಲಯಗಳನ್ನು ಗುರುತಿಸಲಾಗುತ್ತದೆ. ಈ ವಲಯಗಳಲ್ಲಿ ಕನಿಷ್ಠ ಒಂದು ಅಥವಾ ಗರಿಷ್ಠ ನಾಲ್ಕು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಇರುತ್ತವೆ. ಇತರ ವಲಯಗಳಲ್ಲಿನ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಮಾಲೀಕತ್ವದಲ್ಲಿ ಈಗ 249 ಉದ್ದಿಮೆಗಳು ಇವೆ. ಇವುಗಳ ವಹಿವಾಟು ಮೊತ್ತ ₹ 12 ಲಕ್ಷ ಕೋಟಿ. ಈ ಕಂಪನಿಗಳ ಪೈಕಿ 54ಕ್ಕಿಂತ ಹೆಚ್ಚು ಕಂಪನಿಗಳು ಷೇರುಪೇಟೆಯಲ್ಲಿ ನೋಂದಾಯಿತ ಆಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.