ADVERTISEMENT

ಕೇಂದ್ರದ ಸಾಲದ ಬಗ್ಗೆ ಬಿಜೆಪಿಗರ ಮೌನ ಏಕೆ: ಸಿದ್ದರಾಮಯ್ಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 1:30 IST
Last Updated 8 ಮಾರ್ಚ್ 2025, 1:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ರಾಜ್ಯ ಸರ್ಕಾರದ ಸಾಲವನ್ನು ಟೀಕಿಸುವ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ 2025–26ನೇ ಸಾಲಿನಲ್ಲಿ ಮಾಡುತ್ತಿರುವ ₹15.04 ಲಕ್ಷ ಕೋಟಿ ಸಾಲದ ಬಗ್ಗೆಯೂ ಏಕೆ ಧ್ವನಿ ಎತ್ತುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. 

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ವರ್ಷ ಉದ್ದೇಶಿಸಿರುವ ಒಟ್ಟು ಸಾಲ ₹1.16 ಲಕ್ಷ ಕೋಟಿ. ಇದು ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ ರೂಪಿಸಿದ ನಿಯಮಕ್ಕೆ ಅನುಗುಣವಾಗಿಯೇ ಇದೆ. ನಿಯಮದಂತೆ ಬಜೆಟ್‌ ಗಾತ್ರದ ಶೇ 25 ಮೀರಬಾರದು. ರಾಜ್ಯದ ಸಾಲ ಶೇ 24.95 ಇದೆ. ಕಳೆದ ಸಾಲಿಗೆ ಹೋಲಿಸಿದರೆ ₹10 ಸಾವಿರ ಕೋಟಿಯಷ್ಟೇ ಹೆಚ್ಚುವರಿ ಸಾಲ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.

2025-26ನೇ ಸಾಲಿನ ಕೇಂದ್ರ ಬಜೆಟ್‌ ಗಾತ್ರ ₹50.65 ಲಕ್ಷ ಕೋಟಿ. ಇದೇ ಬಜೆಟ್‌ನಲ್ಲಿ ತೋರಿಸಿರುವ ಸಾಲ ಹಾಗೂ ಕೇಂದ್ರದ ಒಟ್ಟು ಸಾಲ ಶೇ 56 ದಾಟುತ್ತದೆ. ರಾಜಕೀಯ ಕಾರಣಗಳಿಗಾಗಿ ಟೀಕಿಸುವ ಬದಲು ವಿರೋಧ ಪಕ್ಷದ ನಾಯಕರು ವಸ್ತುಸ್ಥಿತಿಯತ್ತ ಗಮನಹರಿಸಬೇಕು ಎಂದರು. 

ADVERTISEMENT

ಈ ಬಾರಿಯ ಆಯವ್ಯಯದಲ್ಲಿ ವಿತ್ತೀಯ ಶಿಸ್ತು ಪಾಲಿಸಲಾಗಿದೆ. ಬಡವರ, ಮಹಿಳೆಯರ, ಶೋಷಿತರ, ದುರ್ಬಲ ವರ್ಗದವರ ಅಭಿವೃದ್ಧಿಗೆ ಜನಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಕಡಿಮೆ ತೆರಿಗೆಯ ಮಿತಿಯಲ್ಲೇ ಎಲ್ಲ ವರ್ಗದ ಜನರ ಹಿತಾಸಕ್ತಿಗೆ ಆದ್ಯತೆ ನೀಡಲಾಗಿದೆ ಎಂದರು.

ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಗ್ಯಾರಂಟಿಗಳಿಗೆ ಹಣವಿಲ್ಲ ಎಂಬ ಅಪಪ್ರಚಾರಕ್ಕೆ ತಲೆಕೆಡಿಸಿಕೊಳ್ಳದೆ ಇರುವ ಸಂಪನ್ಮೂಲಗಳ ಇತಿಮಿತಿಯಲ್ಲೇ ಬಜೆಟ್‌ ಮಂಡಿಸಲಾಗಿದೆ. ಸಾಮಾನ್ಯ ಜನರ ನೆಮ್ಮದಿಯ ಬದುಕಿಗೆ ಗ್ಯಾರಂಟಿ ನೆಮ್ಮದಿ ಮೂಡಿಸಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.