ADVERTISEMENT

ಲೋಕಸಭೆ: 35 ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ 2025 ಅಂಗೀಕಾರ

ಪಿಟಿಐ
Published 25 ಮಾರ್ಚ್ 2025, 11:07 IST
Last Updated 25 ಮಾರ್ಚ್ 2025, 11:07 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಪಿಟಿಐ ಚಿತ್ರ

ನವದೆಹಲಿ: ಆನ್‌ಲೈನ್ ಜಾಹೀರಾತುಗಳ ಮೇಲೆ ಶೇ 6ರಷ್ಟು ಡಿಜಿಟಲ್ ತೆರಿಗೆಯನ್ನೂ ಒಳಗೊಂಡು ಒಟ್ಟು 35 ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ 2025ಕ್ಕೆ ಲೋಕಸಭೆಯಲ್ಲಿ ಮಂಗಳವಾರ ಧ್ವನಿಮತದ ಮೂಲಕ ಅಂಗೀಕಾರ ದೊರೆಯಿತು.

ADVERTISEMENT

ಮಸೂದೆಗೆ ಅಂಗೀಕಾರ ಪಡೆಯುವ ಮೂಲಕ ಬಜೆಟ್‌ ಅನುಮೋದನೆ ಪ್ರಕ್ರಿಯೆಯು ಲೋಕಸಭೆಯಲ್ಲಿ ಪೂರ್ಣಗೊಂಡಂತಾಯಿತು. ಮಸೂದೆಯನ್ನು ಈಗ ರಾಜ್ಯಸಭೆಯು ಪರಿಗಣಿಸಬೇಕಿದೆ. ಅಲ್ಲಿಯೂ ಅನುಮೋದನೆ ದೊರೆತಲ್ಲಿ, 2025–26ನೇ ಸಾಲಿನ ಬಜೆಟ್‌ ಪ್ರಕ್ರಿಯೆ ಪೂರ್ಣಗೊಂಡಂತಾಗಲಿದೆ. 

2025–26ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್‌ನ ವೆಚ್ಚದ ಗಾತ್ರ ₹50.65 ಲಕ್ಷ ಕೋಟಿಯಾಗಿದ್ದು, ಇದು ಪ್ರಸಕ್ತ ಸಾಲಿಗೆ (2024–25) ಹೋಲಿಸಿದಲ್ಲಿ ಶೇ 7.4ರಷ್ಟು ಅಧಿಕವಾಗಿದೆ. ಮುಂದಿನ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವು ₹11.22 ಲಕ್ಷ ಕೋಟಿ ಹಾಗೂ ಪರಿಣಾಮಕಾರಿ ಬಂಡವಾಳ ವೆಚ್ಚ ₹15.48 ಲಕ್ಷ ಕೋಟಿಯಾಗಿದೆ. ತೆರಿಗೆ ಮೂಲಕ ಹರಿದುಬರುವ ಆದಾಯ ಸಂಗ್ರಹವು ₹42.70 ಲಕ್ಷ ಕೋಟಿಯಾಗಿದ್ದು, ಸಾಲದ ಮೊತ್ತ ₹14.01 ಲಕ್ಷ ಕೋಟಿಯಾಗಿದೆ.

ಬಜೆಟ್ ದಾಖಲೆಗಳ ಪ್ರಕಾರ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ ₹5.41 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ಸಾಲಿನಲ್ಲಿ ಇದು ₹4.15 ಲಕ್ಷ ಕೋಟಿ ಇತ್ತು. ಕೇಂದ್ರ ಯೋಜನೆಗಳಿಗೆ ₹16.29 ಲಕ್ಷ ಕೋಟಿ ಮುಂದಿನ ವರ್ಷಕ್ಕೆ ಮೀಸಲಿಡಲಾಗಿದ್ದು, ಇದು 2024–25ರಲ್ಲಿ ₹15.13 ಲಕ್ಷ ಕೋಟಿಯಷ್ಟಿತ್ತು.

ಪಡೆದ ಸಾಲಕ್ಕೆ ಹೆಚ್ಚಿದ ಮಾರುಕಟ್ಟೆ ಬಡ್ಡಿ ದರ, ಖಜಾನೆ ಬಿಲ್ಲುಗಳು, ಬಾಹ್ಯ ಸಾಲ, ಸಣ್ಣ ಉಳಿತಾಯ ಹಾಗೂ ಭವಿಷ್ಯ ನಿಧಿ, ರಕ್ಷಣಾ ಇಲಾಖೆಯಲ್ಲಿ ಹೆಚ್ಚಿದ ಬೇಡಿಕೆ, ಉದ್ಯೋಗ ಸೃಜನೆಗೆ ಅಧಿಕ ಒತ್ತು ನೀಡುವ ಉದ್ದೇಶದಿಂದ 2025–26ನೇ ಸಾಲಿನ ಬಜೆಟ್‌ ವೆಚ್ಚವು ಏರಿಕೆಯಾಗಿದೆ. 

ಬಜೆಟ್‌ನಲ್ಲಿ ರಾಜ್ಯಗಳ ಪಾಲು, ಸಾಲ, ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳು ಒಳಗೊಂಡಂತೆ 2025–26ನೇ ಸಾಲಿನಲ್ಲಿ ₹25,01,284 ಕೋಟಿ ಮೀಸಲಿಡಲಾಗಿದೆ. 2023–24ನೇ ಸಾಲಿಗೆ ಹೋಲಿಸಿದಲ್ಲಿ ₹4,91,668 ಕೋಟಿ ಹೆಚ್ಚಳವಾಗಿದೆ. ವಿತ್ತೀಯ ಕೊರತೆಯು ಸದ್ಯ ಶೇ 4.8ರಷ್ಟಿದ್ದು, ಇದು 2026ರಲ್ಲಿ ಶೇ 4.4ಕ್ಕೆ ತಗ್ಗಲಿದೆ. 

2025–26ನೇ ಸಾಲಿನಲ್ಲಿ ಜಿಡಿಪಿಯು ₹3.56 ಲಕ್ಷ ಕೋಟಿಯಾಗಲಿದೆ. 2024–25ರಲ್ಲಿ ₹3.24 ಲಕ್ಷ ಕೋಟಿ ಇತ್ತು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.