ಕೇಂದ್ರ ಬಜೆಟ್ ಮಂಡನೆಗೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲ್ವಾ ಸಮಾರಂಭದಲ್ಲಿ ಭಾಗಿಯಾದರು
ಎಕ್ಸ್ ಚಿತ್ರ
ನವದೆಹಲಿ: ವಾರ್ಷಿಕ ಆಯವ್ಯಯ ಸಂಪೂರ್ಣವಾಗಿ ತಯಾರಾದ ಬಳಿಕ ಮಂಡನೆಯ ಪೂರ್ವದಲ್ಲಿ ನಡೆಸುವ ಸಾಂಪ್ರದಾಯಿಕ ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಭಾಗಿಯಾದರು.
ಇದೇ ಜುಲೈ 23 ರಂದು 2024–25ನೇ ಸಾಲಿನ ಕೇಂದ್ರ ಬಜೆಟ್ ನಡೆಯಲಿದೆ.
ಬಜೆಟ್ ತಯಾರಿಯಲ್ಲಿ ಭಾಗಿಯಾದ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಲ್ವಾ ತಯಾರಿಸಿ ಹಂಚುವುದು ಸಂಪ್ರದಾಯ. ಇದನ್ನು ದೆಹಲಿಯ ಉತ್ತರ ಬ್ಲಾಕ್‌ನಲ್ಲಿ ನಡೆಸಲಾಗುತ್ತದೆ.
ಹಲ್ವಾ ಸಮಾರಂಭದ ಕುರಿತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಎಕ್ಸ್ ಖಾತೆಯಲ್ಲಿ ಖುಷಿ ಹಂಚಿಕೊಂಡಿದ್ದಾರೆ.
ಕಳೆದ ಮೂರು ಬಾರಿಯ ಪೂರ್ಣ ಪ್ರಮಾಣದ ಬಜೆಟ್ ಹಾಗೂ ಒಂದು ಮಧ್ಯಂತರ ಬಜೆಟ್‌ನಂತೆಯೇ ಈ ಬಾರಿಯೂ ಕಾಗದರಹಿತ ಬಜೆಟ್ ಇರಲಿದೆ.
ಹಲ್ವಾ ಸಮಾರಂಭದಲ್ಲಿ ನಿರ್ಮಲಾ ಸೀತಾರಾಮನ್‌ರೊಂದಿಗೆ ಹಣಕಾಸು ಇಲಾಖೆಯ ರಾಜ್ಯ ಸಚಿವ ಪಂಕಜ್ ಚೌಧರಿ, ಹಣಕಾಸು ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್, ಹಣಕಾಸು ಸೇವೆಗಳ ಕಾರ್ಯದರ್ಶಿ ವಿವೇಕ್ ಶೋಶಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಹಲ್ವಾ ಸಮಾರಂಭ
ವಾರ್ಷಿಕ ಆಯವ್ಯಯ ತಯಾರಿಯಲ್ಲಿ ಪಾಲ್ಗೊಂಡು ಶ್ರಮಿಸಿದ ಹಣಕಾಸು ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುವ ಮೆಚ್ಚುಗೆಯ ಸೂಚಕ ಈ ಹಲ್ವಾ ಸಮಾರಂಭ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.