ADVERTISEMENT

ಬಜೆಟ್ ವಿಶ್ಲೇಷಣೆ | ನಾಲ್ಕು ಚಾಲಕಶಕ್ತಿಗಳಿಗೆ ದೊರೆಯುವುದೇ ಬಲ?

ಪ್ರಣಯ ಕೋಟಸ್ಥಾನೆ ಮತ್ತು ಅದಿಪ್‌ ಅಮಿನ್‌
Published 5 ಮಾರ್ಚ್ 2020, 18:06 IST
Last Updated 5 ಮಾರ್ಚ್ 2020, 18:06 IST
ಪ್ರಣಯ್ ಕೋಟಸ್ಥಾನೆ
ಪ್ರಣಯ್ ಕೋಟಸ್ಥಾನೆ   

ಈಗಿರುವ ಆರ್ಥಿಕ ಸ್ಥಿತಿಯನ್ನು ಉಪೇಕ್ಷಿಸಿ ಬಜೆಟ್ ವಿಶ್ಲೇಷಣೆ ಸಾಧ್ಯವಿಲ್ಲ. ಖಾಸಗಿ ಕಾರ್ಪೊರೇಟ್ ಹೂಡಿಕೆಯು ಉದ್ಯೋಗಸೃಷ್ಟಿ ಮತ್ತು ಜಿಡಿಪಿ ಬೆಳವಣಿಗೆಯ ದೊಡ್ಡ ಮೂಲವಾಗಿದ್ದರೂ, ಆ ವಲಯದಲ್ಲಿ ಹೂಡಿಕೆಯ ವಿಶ್ವಾಸ ಹೆಚ್ಚಿಸುವಲ್ಲಿ ಸರ್ಕಾರಗಳಿಗೆ ಕಳೆದ ಒಂದು ದಶಕದಿಂದಲೂ ಸಾಧ್ಯವಾಗಿಲ್ಲ.

ಕರ್ನಾಟಕದ ಕಥೆ ಭಿನ್ನವಾಗಿಲ್ಲ. ಒಂದು ವರ್ಷದ ಅವಧಿಯಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಬೆಳವಣಿಗೆ ಪ್ರಮಾಣವು ಕ್ರಮವಾಗಿ ಶೇ 0.8 ಹಾಗೂ 1.9ರಷ್ಟು ತಗ್ಗಿದೆ. ಹಾಗಾಗಿ, ಖಾಸಗಿ ವಲಯದ ವಿಶ್ವಾಸ ಹೆಚ್ಚಿಸಲು ಈ ಬಾರಿಯ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಏನು ಹೇಳಿದೆ ಎಂಬುದನ್ನು ನಾವು ನೋಡಬೇಕು. ಖಾಸಗಿ ವಲಯದ ಹೂಡಿಕೆ ಹೆಚ್ಚಿಸಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸ್ಥಿರ ಕಾರ್ಯನೀತಿ ಇಲ್ಲದಿದ್ದ ಕಾರಣ ಈ ವಿಚಾರ ಮಹತ್ವದ್ದಾಗುತ್ತದೆ.

ಕರ್ನಾಟಕದ ಬೆಳವಣಿಗೆಯ ನಾಲ್ಕು ಚಾಲಕಶಕ್ತಿಗಳ ವಿಚಾರದಲ್ಲಿ ಬಜೆಟ್ ಏನು ಮಾಡಿದೆ ಎಂಬುದನ್ನು ನೋಡೋಣ.

ADVERTISEMENT

ಕರ್ನಾಟಕದ ಬೆಳವಣಿಗೆಯ ದೊಡ್ಡ ಚಾಲಕಶಕ್ತಿ ‘ಬೆಂಗಳೂರು’. ಈ ಸಂದರ್ಭದಲ್ಲಿ ಬಜೆಟ್‌ನ ಆದ್ಯತೆಯು ಬೆಂಗಳೂರಿನ ಉತ್ಪಾದಕತೆಯನ್ನು ಹೆಚ್ಚಿಸುವುದಾಗಿರಬೇಕು. ಆರ್ಥಿಕವಾಗಿ ಬಿಗುವಿನ ಸ್ಥಿತಿ ಇರುವಾಗ ಸರ್ಕಾರಗಳು ಹೈಟೆಕ್ ಕಂಪನಿಗಳನ್ನು ಬೆಂಗಳೂರಿನಿಂದ ಹೊರಗೆ ಕಳಿಸಿ, ಅವು ಎರಡನೆಯ ಹಂತದ ನಗರಗಳಲ್ಲಿ ತಮ್ಮ ಘಟಕ ಆರಂಭಿಸುತ್ತವೆ ಎಂದು ನಿರೀಕ್ಷಿಸಬಾರದು. ಹಾಗಾಗಿ, ‘ರಾಜ್ಯ ಮತ್ತು ದೇಶದ ಆರ್ಥಿಕ ಬೆಳವಣಿಗೆಗಾಗಿ ಬೆಂಗಳೂರಿಗೆ ವಿಶೇಷ ಗಮನ ನೀಡುವುದು ಮುಖ್ಯ’ ಎಂದು ಮುಖ್ಯಮಂತ್ರಿ ಹೇಳಿರುವುದು ಒಳ್ಳೆಯದು.

ಬೆಂಗಳೂರಿಗಾಗಿ ಹೊಸ ಮುನಿಸಿಪಲ್ ಕಾಯ್ದೆ ರೂಪಿಸುವುದಾಗಿ ಹೇಳಿರುವುದು ಸರಿಯಾದ ಕ್ರಮ. ಇಲ್ಲಿನ ಆಡಳಿತದಲ್ಲಿನ ಲೋಪ ಸರಿಪಡಿಸಲು ಸಶಕ್ತ ವ್ಯವಸ್ಥೆ ಬೇಕು. ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಿಸಲು ಸಮಗ್ರ ಸಾರಿಗೆ ಯೋಜನೆಗೆ ಕೂಡ ಅನುದಾನ ಇದೆ. ನಗರದೊಳಗೆ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಲು ಸೌಲಭ್ಯ ಕಲ್ಪಿಸುವುದು ಉತ್ಪಾದಕತೆ ಹೆಚ್ಚಿಸುವ ಒಂದು ಮಾರ್ಗವಾಗಿರುವ ಕಾರಣ, ಉಪನಗರ ರೈಲು, ಮೆಟ್ರೊ ಮತ್ತು ರಸ್ತೆ ಜಾಲಕ್ಕೆ ಆದ್ಯತೆ ನೀಡುವುದು ದೀರ್ಘಾವಧಿ ಬೆಳವಣಿಗೆ ದೃಷ್ಟಿಯಿಂದ ಉತ್ತಮ.

ಕೈಗಾರಿಕೆ ಮತ್ತು ಸೇವಾವಲಯವು ರಾಜ್ಯದ ಎರಡನೆಯ ಚಾಲಕಶಕ್ತಿ. ಇಲ್ಲಿ ಹಿಂದಿನ ವಿಧಾನಗಳನ್ನು ಮೀರಿ, ಹೊಸ ದಾರಿ ಹುಡುಕುವಲ್ಲಿ ಬಜೆಟ್ ವಿಫಲವಾಗಿದೆ. ಕೆಲವು ನಿರ್ದಿಷ್ಟ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಕ್ರಮಗಳು ಇದ್ದರೂ, ಕಾರ್ಮಿಕ ಕಾನೂನು ಸುಧಾರಣೆಯ ಭರವಸೆ ಇಲ್ಲ.

‘ಕೈಗಾರಿಕೆ ಸ್ಥಾಪನೆಗೆ ಗುರುತಿಸಲಾದ ಸ್ಥಳದಲ್ಲಿ ಜಮೀನು ಮಾಲೀಕರಿಂದ ನೇರವಾಗಿ ಜಮೀನು ಖರೀದಿಗೆ ಅವಕಾಶ ಕಲ್ಪಿಸುವಂತೆ ನಿಯಮ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಅನುಷ್ಠಾನಕ್ಕೆ ಬಂದರೆ, ಹೊಸ ಕೈಗಾರಿಕೆಗಳ ಬಂಡವಾಳ ವೆಚ್ಚವನ್ನು ತಗ್ಗಿಸಬಹುದು.

ತೆರಿಗೆ ತಗ್ಗಿಸಿ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಕೈಯಲ್ಲಿ ಹೆಚ್ಚು ಹಣವಿರುವಂತೆ ಮಾಡುವುದು ಅಭಿವೃದ್ಧಿಗೆ ಮೂರನೆಯ ಚಾಲಕಶಕ್ತಿ. ಆದರೆ, ಕೇಂದ್ರದಿಂದ ಅನುದಾನ ತಗ್ಗಿರುವುದು ಹಾಗೂ ತನಗೆ ಹೊಸ ಆದಾಯ ಮೂಲ ಕಂಡುಕೊಳ್ಳಲು ಆಗದಿರುವುದರ ಪರಿಣಾಮವಾಗಿ ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಮತ್ತು ಭಾರತೀಯ ಮದ್ಯದ ಮೇಲಿನ ಎಕ್ಸೈಸ್‌ ಸುಂಕ ಹೆಚ್ಚಿಸಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆದುಕೊಳ್ಳುವ, ಕೆಲವು ಸಬ್ಸಿಡಿಗಳನ್ನು ತಗ್ಗಿಸುವ ವಿಚಾರದಲ್ಲಿ ಈ ಬಜೆಟ್‌ನಲ್ಲಿಆತುರ ಇಲ್ಲ.

ಕೃಷಿಯು ನಾಲ್ಕನೆಯ ಚಾಲಕಶಕ್ತಿ. ಹಿಂದಿನ ಹಣಕಾಸು ವರ್ಷದಲ್ಲಿ ರಾಜ್ಯದಲ್ಲಿ ಶೇ 3.9ರಷ್ಟು ಬೆಳವಣಿಗೆ ಕಂಡ ಈ ವಲಯಕ್ಕೆ ಭೂಸುಧಾರಣೆ ಹಾಗೂ ಮಾರುಕಟ್ಟೆ ಸುಧಾರಣೆಯ ಅಗತ್ಯವಿದೆ. ರೈತರಿಗೆ ತಮ್ಮ ಆಯ್ಕೆಯ ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರುವ ಸ್ವಾತಂತ್ರ್ಯ ಕೊಡುವಲ್ಲಿ ರಾಜ್ಯ ಮುಂಚೂಣಿಯಲ್ಲಿದ್ದರೂ, ಸೂಕ್ತ ಯೋಜನೆಯ ಕೊರತೆ ಹಾಗೂ ಅಸಮರ್ಪಕ ಅನುಷ್ಠಾನದ ಕಾರಣದಿಂದ ಇದರ ಪ್ರಯೋಜನ ತೀರಾ ಸೀಮಿತವಾಗಿದೆ ಎಂದು ಮಹಾಲೇಖಪಾಲರ ಹಿಂದಿನ ವರ್ಷದ ವರದಿ ಹೇಳಿತ್ತು. ಆದರೆ, ಮಾರುಕಟ್ಟೆ ಸುಧಾರಣೆ ವಿಚಾರದಲ್ಲಿ ಸರ್ಕಾರ ಗಂಭೀರವಾಗಿದೆ ಎಂಬುದನ್ನು ಸೂಚಿಸುವ ಯಾವುವೂ ಈ ಬಜೆಟ್‌ನಲ್ಲಿಲ್ಲ.

(ಲೇಖಕ ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯ ಫೆಲೊ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.