ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ 2025-26ನೇ ಸಾಲಿನ ಬಜೆಟ್ ಭಾಷಣದಲ್ಲಿ ವಚನಕಾರರ ಸಾಲುಗಳು, ಕವಿಗಳ ವಾಣಿ, ಚಿಂತಕರ ನುಡಿಗಳನ್ನು ಉಲ್ಲೇಖಿಸಿದ್ದಾರೆ.
ಮುಖ್ಯವಾಗಿ ರಾಷ್ಟ್ರಕವಿ ಕುವೆಂಪು, ಗೋಪಾಲ ಕೃಷ್ಣ ಅಡಿಗ, ಡಾ.ಬಿ.ಆರ್.ಅಂಬೇಡ್ಕರ್, ಕುಮಾರವ್ಯಾಸ, ವಿಲ್ಸನ್ ಕಟೀಲ್, ಸಾವಿತ್ರಿಬಾಯಿ ಪುಲೆ, ಡಾ. ರಾಮ ಮನೋಹರ ಲೋಹಿಯಾ, ಕೆ.ಎಸ್. ನಿಸಾರ್ ಅಹಮದ್, ವಚನಕಾರರಾದ ಬಸವಣ್ಣ ಹಾಗೂ ನುಲಿಯ ಚಂದಯ್ಯ ಅವರ ನುಡಿಗಳನ್ನು ಪ್ರಸ್ತಾಪಿಸಿದ್ದಾರೆ.
ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ನಿಂತಿದ್ದೇನೆ ಎಂದು ಭಾಷಣ ಆರಂಭಿಸಿ ಸಿಎಂ, ಮೊದಲು ಕುವೆಂಪು ಅವರ,
ನಮ್ಮ ಕೈಬುಟ್ಟಿಯಲಿ
ಸಿಡಿಲ ಗೂಡಿಹುದು
ಹುಡುಕಿ ನೋಡಿದರಲ್ಲಿ
ಸುಮದ ಬೀಡಿಹುದು ಎಂಬ ಕವಿತೆಯನ್ನು ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ತಳಹದಿ ಭದ್ರಗೊಳ್ಳುತ್ತಲೇ ಇರಬೇಕು ಎನ್ನುವುದು ನಮ್ಮ ಸರ್ಕಾರದ ದೃಢ ಸಂಕಲ್ಪ ಎಂದ ಸಿಎಂ ಗೋಪಾಲ ಕೃಷ್ಣ ಅಡಿಗ ಅವರ ನುಡಿಗಳನ್ನು ಪ್ರಸ್ತಾಪಿಸಿದ್ದಾರೆ.
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು.
– ಗೋಪಾಲ ಕೃಷ್ಣ ಅಡಿಗ
ಕೃಷಿ ವಲಯದ ಯೋಜನೆಗಳ ಘೋಷಣೆಗೆ ಕವಿ ಕುಮಾರವ್ಯಾಸ ಅವರ ಮಾತುಗಳನ್ನು ಬಳಸಿಕೊಂಡರು.
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದು ಆ ಕೃಷಿಯನುದ್ಯೋಗಿಸುವ
ಜನವನು ಪಾಲಿಸುವುದು
- ಕುಮಾರವ್ಯಾಸ
ನೀರಾವರಿ ಯೋಜನೆಗಳ ಬಗ್ಗೆ ಘೋಷಣೆ ಮಾಡುವಾಗ
ಹಾ! ಗಂಟಲು ಒಣಗಿದೆ!!
ತಕೋ ಈ ಬಂಗಾರದ ಸರಪಳಿ
ಬದಲಾಗಿ ಒಂದು ಗುಟುಕು ನೀರು ಕೊಡು
- ವಿಲ್ಸನ್ ಕಟೀಲ್
ಶಾಲಾ ಶಿಕ್ಷಣದ ಕುರಿತು ಪ್ರಸ್ತಾಪಿಸುವಾಗ..
ಶೋಷಿತರ ಬಹಿಷ್ಕೃತರ ಕಣ್ಣೀರನ್ನು ತೊಡೆದು ಹಾಕು,
ಜಾತಿವ್ಯವಸ್ಥೆ ಸಂಕೋಲೆಯನ್ನು ಮುರಿದು ಶಿಕ್ಷಣ ಪಡೆದುಕೋ…..
- ಸಾವಿತ್ರಿಬಾಯಿ ಪುಲೆ
ರಾಷ್ಟ್ರವು ತನ್ನ ಅರ್ಧದಷ್ಟಿರುವ ಮಹಿಳೆಯರನ್ನು ಆರ್ಥಿಕವಾಗಿ ನಿಷ್ಕ್ರಿಯವಾಗಿಸಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸದೆ ಮಾಡುವ ಎಲ್ಲಾ ಅಭಿವೃದ್ಧಿ ಮಾದರಿಗಳು ಟೊಳ್ಳಾಗಿರುತ್ತವೆಡಾ|| ಬಿ. ಆರ್. ಅಂಬೇಡ್ಕರ್
ಸಮಾಜವು ತನ್ನ ಅಸಹಾಯಕ ಸದಸ್ಯರ ಕುರಿತು ತೋರುವ ಕಾಳಜಿಯು ಆ ನಾಗರಿಕತೆಯ ಪ್ರಬುದ್ಧತೆಯನ್ನು ತೋರುತ್ತದೆ.–ಡಾ. ರಾಮ ಮನೋಹರ ಲೋಹಿಯಾ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಪ್ರಸ್ತಾಪದ ಸಂದರ್ಭದಲ್ಲಿ ...
ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ,
ಸದ್ವಿಕಾಸಶೀಲ ನುಡಿಯ ಲೋಕಾವೃತ ಸೀಮೆಯೆ,
ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ
–ಕೆ.ಎಸ್. ನಿಸಾರ್ ಅಹಮದ್
ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುಲ ಹರಿವುದು
ಜಂಗಮವಾದರೂ ಕಾಯಕದಿಂದಲೇ ವೇಶಪಾಶ ಹರಿವುದು
–ವಚನಕಾರ ನುಲಿಯ ಚಂದಯ್ಯ
ಆನೆಯನೇರಿಕೊಂಡು ಹೋದಿರೇ ನೀವು
ಕುದುರೆಯನೇರಿಕೊಂಡು ಹೋದಿರೇ ನೀವು
ಕುಂಕುಮ ಕಸ್ತೂರಿಯ ಪೂಸಿಕೊಂಡು ಹೋದಿರೇ ಅಣ್ಣಾ
ಸತ್ಯದ ನಿಲುವನರಿಯದೆ ಹೋದಿರಲ್ಲಾ
– ಬಸವಣ್ಣ.
ನಾನು ರಾಜ್ಯದ ವಿತ್ತೀಯ ಪರಿಸ್ಥಿತಿಯನ್ನು ನಿರ್ವಹಿಸುವ ಜೊತೆಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಆಯವ್ಯಯವನ್ನು ಮಂಡಿಸುತ್ತಿದ್ದೇನೆ. ಮೂಲಸೌಕರ್ಯ, ನೀರಾವರಿಯಂತಹ ಪ್ರಮುಖ ಕ್ಷೇತ್ರಗಳು ಒಳಗೊಂಡು ಸಾಮಾಜ ಕಲ್ಯಾಣಕ್ಕೆ ಆಯವ್ಯಯದಲ್ಲಿ ಆದ್ಯತೆ ನೀಡುವ ಮೂಲಕ, ದೀರ್ಘಕಾಲೀನ ಬೆಳವಣಿಗೆಗೆ ಯೋಜನೆ ಮಾಡಲಾಗಿದೆ. ಅಲ್ಲದೆ, ಆಯವ್ಯಯದಲ್ಲಿ ಅಂದಾಜಿಸಿರುವಂತೆ ವಿತ್ತೀಯ ಶಿಸ್ತನ್ನು ಪಾಲಿಸುವ ಮೂಲಕ ನಮ್ಮ ಸರ್ಕಾರವು ರಾಜ್ಯದ ಹಣಕಾಸು ಪರಿಸ್ಥಿತಿಯನ್ನು ಸುಸ್ಥಿರ ಮತ್ತು ಸಧೃಡ ಪಡಿಸುತ್ತಿರುವುದನ್ನು ಇದು ಖಚಿತಪಡಿಸುತ್ತದೆ. ಈ ಆಯವ್ಯಯವು ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ, ರಾಜ್ಯದ ಒಟ್ಟಾರೆ ವಿತ್ತೀಯ ಪರಿಸ್ಥಿಯನ್ನು ಮತ್ತಷ್ಟು ಬಲಗೊಳಿಸಲಿದೆ. ಈ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಈ ಸದನದ ಪ್ರತಿಯೊಬ್ಬ ಸದಸ್ಯರ ಬೆಂಬಲವನ್ನು ನಾನು ಕೇಳುತ್ತೇನೆ. ರಾಜ್ಯದ ಪ್ರಗತಿಗೆ ನಿಮ್ಮೆಲ್ಲರ ಬೆಂಬಲ ದೊರೆಯಲಿದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರು ಬಜೆಟ್ ಭಾಷಣವನ್ನು ಪೂರ್ಣಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.