ಮೈಸೂರು: ಹದಿನಾರನೇ ಬಜೆಟ್ ಮಂಡಿಸುವ ಮೂಲಕ ತಮ್ಮ ದಾಖಲೆಯನ್ನು ತಾವೇ ಮುರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತವರಾದ ಮೈಸೂರು ಜಿಲ್ಲೆಗೆ ಭರಪೂರ ಕೊಡುಗೆಗಳನ್ನು ಘೋಷಿಸಿದ್ದಾರೆ.
2025–26ನೇ ಸಾಲಿನ ಬಜೆಟ್‌ನಲ್ಲಿ, ಜಿಲ್ಲೆಯ ಹಲವು ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳನ್ನು ನೀಡಿದ್ದಾರೆ. ಸಮಾಜದ ಅಂಚಿನಲ್ಲಿರುವ ಬುಡಕಟ್ಟು ಜನರಿಂದ ಹಿಡಿದು ಸಂಶೋಧನೆಯವರೆಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ.
ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ರೇಷ್ಮೆ ಬೆಳೆಗಾರರಿಗೆ ಅನುಕೂಲ ಆಗುವಂತೆ ಮೈಸೂರಿನಲ್ಲಿ ರೇಷ್ಮೆಗೂಡಿನ ಮಾರುಕಟ್ಟೆಯನ್ನು ನಬಾರ್ಡ್ (ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ಸಹಯೋಗದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.
ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ‘ಹೈ-ಟೆಕ್ ಮತ್ಸ್ಯದರ್ಶಿನಿ’ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಮೀನುಗಾರಿಕೆ ಮಹಾಮಂಡಳದಿಂದ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಸೇರಿದಂತೆ ನಗರದ ವಿವಿಧೆಡೆ ಮತ್ಸ್ಯದರ್ಶಿನಿಗಳು ಕಾರ್ಯ ನಿರ್ವಹಿಸುತ್ತಿವೆ. ಈಗ, ಅತ್ಯಾಧುನಿಕ ವ್ಯವಸ್ಥೆಯುಳ್ಳ ‘ಮತ್ಸ್ಯದರ್ಶಿನಿ’ ಬಗ್ಗೆ ಪ್ರಸ್ತಾಪಿಸಲಾಗಿದೆ.
ಬುಡಕಟ್ಟು ಜನರಿಗೆ: ಬುಡಕಟ್ಟು ಜನಾಂಗದ ಶೈಕ್ಷಣಿಕ ಉದ್ದೇಶಕ್ಕಾಗಿ ಸ್ಥಾಪಿಸಲಾಗಿರುವ 78 ಬುಡಕಟ್ಟು ವಸತಿ ಶಾಲೆಗಳಲ್ಲಿ 2025-26ನೇ ಸಾಲಿನಿಂದ 7ನೇ ತರಗತಿ ಪ್ರಾರಂಭಿಸಲಾಗುವುದು. ಚಾಮರಾಜನಗರ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ಐದು ವಸತಿ ಶಾಲೆಗಳನ್ನು 12ನೇ ತರಗತಿಯವರೆಗೆ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಲಾಗಿದೆ.
ರಾಜ್ಯದ ಬುಡಕಟ್ಟು ಸಂಸ್ಕೃತಿಯನ್ನು ಪರಿಚಯಿಸಲು ಮೈಸೂರು ನಗರದಲ್ಲಿ ನಡೆಸಲಾಗುತ್ತಿರುವ ಬುಡಕಟ್ಟು ಸಂಶೋಧನಾ ಕೇಂದ್ರ (ಟಿಆರ್‌ಐ)ದ ಆವರಣದಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮುಖ್ಯಮಂತ್ರಿಯು ಈಚೆಗೆ ಎಚ್.ಡಿ. ಕೋಟೆ ತಾಲ್ಲೂಕಿನ ಹಾಡಿಗೆ ಭೇಟಿ ನೀಡಿದ್ದ ವೇಳೆ ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದ್ದರು.
ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಪಂಗಡದ ಬುಡಕಟ್ಟುಗಳ ಜನಾಂಗದವರಿಗೆ ಮೂಲಸೌಕರ್ಯ ಒದಗಿಸಲು ₹200 ಕೋಟಿ ಅನುದಾನ ನೀಡಲಾಗುವುದು. ಬುಡಕಟ್ಟು ಜನರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದಾರೆ. ಇದರಲ್ಲಿ ಮೈಸೂರು ಜಿಲ್ಲೆಯ ಹಲವು ಬುಡಕಟ್ಟು ಜನರಿಗೆ ಅನುಕೂಲ ಆಗಲಿದೆ.
ವಿಮಾನ ನಿಲ್ದಾಣಕ್ಕೆ: ಮೈಸೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಯ ಭೂಸ್ವಾಧೀನಕ್ಕಾಗಿ ₹319 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೈಸೂರು ನಗರದಲ್ಲಿ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗುವುದು. ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ವಲಯದಲ್ಲಿ ಕರ್ನಾಟಕದ ನಾಯಕತ್ವವನ್ನು ಮತ್ತಷ್ಟು ಬಲಪಡಿಸಲು, ಕಿಯೋನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಆಗಿ ಮೈಸೂರನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಘೋಷಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಸೃಷ್ಟಿಸಲು ಮೈಸೂರಿನ 150 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು ₹1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮೈಸೂರಿನ ರಂಗಾಯಣದ ಕಾರ್ಯ ಚಟುವಟಿಕೆಗಳಿಗೆ ₹2 ಕೋಟಿ ಅನುದಾನ ಒದಗಿಸಲಾಗುವುದು ಎಂದು ತಿಳಿಸಲಾಗಿದೆ.
ವಿಶ್ವ ಪಾರಂಪರಿಕ ತಾಣಕ್ಕೆ: ಯುನೆಸ್ಕೊ (ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿ ಜಾಗತಿಕ ಮಾನ್ಯತೆ ಗಳಿಸಿರುವ ಪ್ರವಾಸಿ ತಾಣವಾದ ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇಗುಲದಲ್ಲಿ ಮೂಲಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಲಾಗಿದೆ. ಅನುದಾನದ ಪ್ರಸ್ತಾಪವಿಲ್ಲ.
ರಾಜ್ಯದ ಸಂಸ್ಕೃತಿ, ನಾಗರಿಕತೆಯ ಉಗಮ, ವಿಕಾಸಗಳೂ ಸೇರಿದಂತೆ ಐತಿಹಾಸಿಕ, ಸಾಮಾಜಿಕ ಸಂಗತಿಗಳನ್ನು ಬಿಂಬಿಸುವ ರಾಜ್ಯ ಮಟ್ಟದ ವಸ್ತು ಸಂಗ್ರಹಾಲಯವನ್ನು ಮೈಸೂರು ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ. ರಾಜ್ಯೋತ್ಸವ ಭಾಷಣದಲ್ಲಿ ಇದನ್ನು ಮುಖ್ಯಮಂತ್ರಿ ಪ್ರಸ್ತಾಪಿಸಿದ್ದರು.
ರಾಜ್ಯದ 4 ವಿಭಾಗಗಳಲ್ಲಿ ತಲಾ ಒಂದರಂತೆ ಜಿಲ್ಲಾ ಕ್ರೀಡಾಂಗಣಗಳಲ್ಲಿ ಶೂಟಿಂಗ್ ರೇಂಜ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ಒಟ್ಟು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ. ಈ ಪೈಕಿ ಮೈಸೂರಿಗೂ ಒಂದು ದೊರೆಯಲಿದೆ. ಮೈಸೂರು ಮತ್ತು ಬೆಳಗಾವಿಯಲ್ಲಿ ಹೊಸದಾಗಿ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ₹7 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲಾಗಿದೆ. ಮೈಸೂರಿನಲ್ಲಿ ಕುಸ್ತಿ, ವಾಲಿಬಾಲ್, ಕೊಕ್ಕೊ ಅಕಾಡೆಮಿಗಳನ್ನು ಸ್ಥಾಪಿಸಲು ₹2 ಕೋಟಿ ಒದಗಿಸಲಾಗುವುದು ಎಂದು ಪ್ರಕಟಿಸಲಾಗಿದೆ.
ಬೇಡಿಕೆಗಳೇನಿದ್ದವು?: ಮೈಸೂರಿನಲ್ಲಿ ಹೊಸದಾಗಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ಪುನರುಜ್ಜೀವನಕ್ಕೆ ಅನುದಾನ ಒದಗಿಸಬೇಕು, ದಸರಾ ಪ್ರಾಧಿಕಾರ ರಚಿಸಬೇಕು, ಪ್ರವಾಸೋದ್ಯಮ ವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಸ್ಪಂದಿಸಿಲ್ಲ.
₹100 ಕೋಟಿ ವೆಚ್ಚದಲ್ಲಿ ಕೇಂದ್ರ
ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಒಟ್ಟು ₹100 ಕೋಟಿ ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ (Endocrinology– ಅಂತಃಸ್ರಾವ ಶಾಸ್ತ್ರ, ನಿರ್ನಾಳ ಗ್ರಂಥಿಗಳ ವ್ಯವಸ್ಥೆಯ ಒಂದು ಅಸ್ವಸ್ಥತೆಯ ಕಾರಣದಿಂದಾಗಿ ಬರುವ ರೋಗವಿದು. ಹಾರ್ಮೋನು ಅಸಮತೋಲನ ಎಂದೂ ಕರೆಯಲಾಗುತ್ತದೆ) ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಮೈಸೂರು ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್ ಮಾದರಿಯ ಸಂಸ್ಥೆಯನ್ನು ₹100 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಘೋಷಣೆಯೊಂದಿಗೆ, ಈ ಭಾಗದ ಜನರಿಗೆ ದೊಡ್ಡ ಕೊಡುಗೆಯನ್ನು ಅವರು ನೀಡಿದ್ದಾರೆ.
ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ₹5 ಕೋಟಿ ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂಸೇವಾ ಸಂಸ್ಥೆಗಳ ಸಹಕಾರದಲ್ಲಿ ಕೈಗೊಳ್ಳಲಾಗುವುದು ಎಂದು ಪ್ರಕಟಿಸಲಾಗಿದೆ. ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ವಸತಿ ಶಾಲೆಗಳನ್ನು ಪಿಯು ಕಾಲೇಜಾಗಿ ಉನ್ನತೀಕರಿಸಲಾಗುವುದು ಎಂದು ಘೋಷಿಸಿದ್ದು, ಮೈಸೂರಿಗೂ ಇದು ದೊರೆಯಲಿದೆ.
₹120 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ
ಮೈಸೂರು ನಗರದಲ್ಲಿ ಪ್ರಸಕ್ತ ವರ್ಷ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಗಳನ್ನು ಸ್ಥಾಪಿಸಲಾಗುವುದು. ಮೈಸೂರು ನಗರದ ವ್ಯಾಪ್ತಿಯಲ್ಲಿ ₹3 ಕೋಟಿ ವೆಚ್ಚದಲ್ಲಿ ಹೊಸ ಅಗ್ನಿಶಾಮಕ ಠಾಣೆಯ ಕಟ್ಟಡವನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ. ಠಾಣೆ ಇರುವ ಪಾರಂಪರಿಕ ಕಟ್ಟಡದ ಒಂದು ಭಾಗ ಶಿಥಿಲಗೊಂಡು ಕುಸಿದುಬಿದ್ದಿತ್ತು.
ಮೈಸೂರಿನ ಬನ್ನಿಮಂಟಪದಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣವನ್ನು ಒಟ್ಟಾರೆ ₹120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಈಗಿರುವ ಕೇಂದ್ರ ಬಸ್ ನಿಲ್ದಾಣ ಸ್ಥಳಾಂತರಕ್ಕೆ ಅಲ್ಲಿನ ವ್ಯಾಪಾರಿಗಳು, ಹೋಟೆಲ್ ಉದ್ಯಮಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಡುವೆಯೂ ಯೋಜನೆಯನ್ನು ಬಜೆಟ್‌ನಲ್ಲೇ ಪ್ರಸ್ತಾಪಿಸಲಾಗಿದೆ.
ಸೇತುವೆ, ರಸ್ತೆ ನಿರ್ಮಾಣ, ಸಾಲಿಗ್ರಾಮದಲ್ಲಿ ಪ್ರಜಾಸೌಧ
ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಹಾಗೂ ಕಪ್ಪಡಿ ಗ್ರಾಮದ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆಗಳನ್ನು 2025–26ನೇ ಸಾಲಿನಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಲಾಗಿದೆ. ಕೆ–ಶಿಪ್–4 ಮಂಡ್ಯ ಜಿಲ್ಲೆಯ ಮಳವಳ್ಳಿ- ಮೈಸೂರು ಜಿಲ್ಲೆಯ ಬಾವಲಿ (ಕೇರಳ ಗಡಿ) (ಬನ್ನೂರು, ಎಚ್.ಡಿ.ಕೋಟೆ ಮಾರ್ಗವಾಗಿ)-141 ಕಿ.ಮೀ. ಹಾಗೂ ಹುಲ್ಲಹಳ್ಳಿ– ತಗಡೂರು– ಸಂತೇಮರಹಳ್ಳಿ ಸಂಪರ್ಕಿಸುವ 55 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವುದಾಗಿ ಪ್ರಕಟಿಸಲಾಗಿದೆ.
ನೂತನ ತಾಲ್ಲೂಕು ಸಾಲಿಗ್ರಾಮದಲ್ಲಿ ‘ತಾಲ್ಲೂಕು ಪ್ರಜಾಸೌಧ’ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ.
ಸ್ವಕ್ಷೇತ್ರ ವರುಣಕ್ಕೆ ಕೊಟ್ಟಿದ್ದೇನು?
ಸ್ವಕ್ಷೇತ್ರ ವರುಣದಲ್ಲಿನ ಜಿಟಿಟಿಸಿ ಬಹು ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ನಬಾರ್ಡ್ ಸಹಯೋಗದೊಂದಿಗೆ ₹60 ಕೋಟಿ ಅನುದಾನ ಒದಗಿಸಿ ಪ್ರಸಕ್ತ ವರ್ಷದಲ್ಲಿಯೇ ಕೇಂದ್ರವನ್ನು ಕಾರ್ಯಾರಂಭ ಮಾಡಲಾಗುವುದು ಎಂದು ಪ್ರಕಟಿಸಲಾಗಿದೆ.
ಅಂತರರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಮಾದರಿಯಲ್ಲಿ ಅಂದಾಜು ₹500 ಕೋಟಿ ವೆಚ್ಚದಲ್ಲಿ ಮೈಸೂರಿನಲ್ಲಿ ಸ್ಥಾಪಿಸಲು 150 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಮುಂದಿನ ವರ್ಷಗಳಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಲಾಗಿದೆ. ವರುಣ ಕ್ಷೇತ್ರದ ವ್ಯಾಪ್ತಿಯಲ್ಲೇ ಬರುವ ಇಮ್ಮಾವು ಕೈಗಾರಿಕಾ ಪ್ರದೇಶದಲ್ಲಿ ಜಾಗ ಗುರುತಿಸಲಾಗಿದೆ. ಚಿತ್ರನಗರಿ ಸ್ಥಾಪನೆ ಬಗ್ಗೆ ಹಿಂದಿನಿಂದಲೂ ಹೇಳುತ್ತಲೇ ಬರಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನಲ್ಲಿರುವ ತಗಡೂರು ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಲಾಗಿದೆ. ಇದು ಅನುಷ್ಠಾನಗೊಂಡಲ್ಲಿ, ಆ ಭಾಗದ ಹಳ್ಳಿಗಳ ಜನರಿಗೆ ಸುಧಾರಿತ ಸೌಲಭ್ಯಗಳು ದೊರೆಯುವ ಆಶಯವನ್ನು ಹೊಂದಲಾಗಿದೆ.
ರಾಜಕೀಯ ಗುರುವಿಗೆ ‘ನಮನ’
ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಸಂಶೋಧನಾ ಪೀಠವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ. ‘ನಂಜುಂಡಸ್ವಾಮಿ ಅವರ ಪ್ರಭಾವಕ್ಕೆ ಒಳಗಾಗಿ ರಾಜಕೀಯ, ಹೋರಾಟ ಹಾಗೂ ಜನಪರ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದೆ’ ಎಂದು ಅವರು ಆಗಾಗ ನೆನೆಯುವುದುಂಟು. ತಮ್ಮ ರಾಜಕೀಯ ಗುರುವಿನ ಹೆಸರಿನಲ್ಲಿ ತವರಿನ ವಿಶ್ವವಿದ್ಯಾಲಯದಲ್ಲೇ ಪೀಠ ಸ್ಥಾಪನೆಯ ಬಗ್ಗೆ ಘೋಷಿಸಿದ್ದಾರೆ. ಈ ಮೂಲಕ ಗುರುವಿಗೆ ನಮನ ಸಲ್ಲಿಸುವ ಕೆಲಸವನ್ನು ಮಾಡಿದ್ದಾರೆ. ಇದಕ್ಕೆ ಅನುದಾನದ ಬಗ್ಗೆ ಪ್ರಸ್ತಾಪಿಸಿಲ್ಲ.
ಮೈಸೂರಿನಲ್ಲಿ ಹೊಸದಾಗಿ ಪಶುವೈದ್ಯಕೀಯ ಕಾಲೇಜು ಸ್ಥಾಪನೆಯ ಬೇಡಿಕೆಗೆ ಮನ್ನಣೆ ದೊರೆತಿಲ್ಲ. ಶಿಥಿಲಗೊಂಡಿರುವ ಪಾರಂಪರಿಕ ಕಟ್ಟಡಗಳ ಪುನರುಜ್ಜೀವನಕ್ಕೆ ಅನುದಾನ ಒದಗಿಸಬೇಕು, ದಸರಾ ಪ್ರಾಧಿಕಾರ ರಚಿಸಬೇಕು, ಪ್ರವಾಸೋದ್ಯಮ ವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳಿಗೆ ಸ್ಪಂದಿಸಿಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.