ADVERTISEMENT

Karnataka Budget 2025 | ಕೋಲಾರ ಜನರ ಕೂಗು ಕೇಳುವುದೇ?

ರಾಜ್ಯ ಬಜೆಟ್‌ನಲ್ಲಿ ಪದೇಪದೇ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವ ಜಿಲ್ಲೆ; ಈ ಬಾರಿ ನ್ಯಾಯದ ನಿರೀಕ್ಷೆ

ಕೆ.ಓಂಕಾರ ಮೂರ್ತಿ
Published 23 ಫೆಬ್ರುವರಿ 2025, 6:59 IST
Last Updated 23 ಫೆಬ್ರುವರಿ 2025, 6:59 IST
ಕೆ.ಸಿ.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಈ ಬಜೆಟ್‌ನಲ್ಲಾದರೂ ಆದ್ಯತೆ ನೀಡುವರೇ?
ಕೆ.ಸಿ.ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣಕ್ಕೆ ಈ ಬಜೆಟ್‌ನಲ್ಲಾದರೂ ಆದ್ಯತೆ ನೀಡುವರೇ?   
ಮಾರ್ಚ್‌ 7ರಂದು ಬಜೆಟ್‌ ಮಂಡಿಸಲಿರುವ ಸಿದ್ದರಾಮಯ್ಯ | ಎಲ್ಲಾ ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಜಿಲ್ಲೆ | ಅಸಹಾಯಕ ಸ್ಥಿತಿಯಲ್ಲಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರು

ಕೋಲಾರ: ರಾಜ್ಯ ಸರ್ಕಾರದ ಪ್ರತಿ ಬಜೆಟ್‌ಗೂ ಮುನ್ನ ಜಿಲ್ಲೆಯ ಜನರಿಗೆ ಹತ್ತಾರು ನಿರೀಕ್ಷೆ, ಭರವಸೆ; ಬಜೆಟ್‌ ದಿನ ಮಾತ್ರ ಅದೇ ಹಾಡು ಅದೇ ರಾಗ!

ಇದು ಕೋಲಾರ ಜಿಲ್ಲೆಯ ಪರಿಸ್ಥಿತಿ. ಈವರೆಗೆ ಬಂದ ಎಲ್ಲಾ ಸರ್ಕಾರಗಳು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿವೆ ಎಂಬುದಕ್ಕೆ ಬಜೆಟ್‌ಗಳಲ್ಲಿ ಜಿಲ್ಲೆಯ ವಿಚಾರದಲ್ಲಿ  ಆಗಿರುವ ಅನ್ಯಾಯಗಳೇ ಸಾಕ್ಷಿ. ನಿರೀಕ್ಷೆ ಇಟ್ಟುಕೊಂಡು ಕಾದಿರುವ ಜನರಲ್ಲಿ ತಮ್ಮ ಜಿಲ್ಲೆಗೆ ಈವರೆಗೆ ಏನೂ ಸಿಕ್ಕಿಲ್ಲ ಎಂಬ ನಿರಾಸೆ, ಆಕ್ರೋಶ ಮಡುಗಟ್ಟಿದೆ. ಪ್ರತಿ ಬಾರಿಯೂ ಅನ್ಯಾಯವಾಗುತ್ತಿದೆ. ಏಕಿಷ್ಟು ಅನ್ಯಾಯ ಎಂದು ಪ್ರಶ್ನೆ ಮಾಡುತ್ತಲೇ ಇದ್ದಾರೆ, ಇತ್ತ ನಿರ್ಲಕ್ಷ್ಯ ಮುಂದುವರಿಯುತ್ತಲೇ ಇದೆ.

ಕಾಂಗ್ರೆಸ್‌ ಸರ್ಕಾರದ ಕಳೆದ ಎರಡೂ ಬಜೆಟ್‌ಗಳಲ್ಲಿ ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುತ್ತಲೇ ಬರಲಾಗುತ್ತಿದೆ. ಸಚಿವ ಸಂಪುಟದಲ್ಲಂತೂ ಜಿಲ್ಲೆಗೆ ಸಚಿವ ಸ್ಥಾನದ ಅವಕಾಶ ಸಿಕ್ಕಿಲ್ಲ. ಇನ್ನು ನಾಲ್ವರು ಕಾಂಗ್ರೆಸ್‌ ಶಾಸಕರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಭರವಸೆ ನೀಡುವುದೊಂದು ಬಿಟ್ಟರೆ ಅವರ ಕೈಯಲ್ಲಿ ಬೇರೊಂದು ಕೆಲಸವಾಗುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಗಾಂಧಿ ಜಯಂತಿ ದಿನ ಮಾತ್ರ ಕೋಲಾರ ನೆನಪಾಗುತ್ತದೆ.

ADVERTISEMENT

ಈಗ ಮತ್ತೊಂದು ಬಜೆಟ್‌ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧವಾಗುತ್ತಿದ್ದಾರೆ. ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಮೇಲೆ ಮಂಡಿಸುತ್ತಿರುವ ಮೂರನೇ ಬಜೆಟ್‌ ಇದಾಗಲಿದೆ. ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೋಲಾರ ಅಭಿವೃದ್ಧಿಗೆ ಈ ಬಾರಿ ಏನಾದರೂ ಯೋಜನೆ ಸಿಗುವುದೇ, ಏನಾದರೂ ಉಡುಗೊರೆ ಕೊಡುವರೇ ಎಂಬ ಆಸೆಯ ಕಂಗಳಿಂದ ಜನರು ಕಾಯುತ್ತಿದ್ದಾರೆ. ಬ‌ಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಈಚೆಗಷ್ಟೇ ಕೋಲಾರ ಶಾಸಕ ಕೊತ್ತೂರು ಮಂಜುನಾಥ್‌ ಅವರನ್ನೊಳಗೊಂಡ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಕೆಲವೊಂದು ಯೋಜನೆಗಳಿಗೆ ಮನವಿ ಮಾಡಿದೆ. ರಿಂಗ್‌ ರಸ್ತೆ, ವೈದ್ಯಕೀಯ ಕಾಲೇಜು ಘೋಷಣೆ ಮಾಡುವಂತೆ ಕೋರಿದೆ.

ಜಿಲ್ಲೆಯಲ್ಲಿ ಸರಿಯಾದ ಆಸ್ಪತ್ರೆ ವ್ಯವಸ್ಥೆಯೂ ಇಲ್ಲ. ಜಿಲ್ಲೆಯವರೇ ಈ ಹಿಂದೆ ವೈದ್ಯಕೀಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗಿಲ್ಲ. ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕೂಗು ನಿಂತಿಲ್ಲ. ಕೋಲಾರದಿಂದ ಬೇರ್ಪಟ್ಟು ಹೊಸದಾಗಿ ಸ್ಥಾಪನೆಯಾದ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಲಭಿಸಿದೆ.

ವಿಧಾನಸಭೆ ಚುನಾವಣೆ ವೇಳೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಆಸೆ ಹೊತ್ತು ಬಂದಿದ್ದ ಸಿದ್ದರಾಮಯ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಲವಾರು ಭರವಸೆ ನೀಡಿದ್ದರು. ಅವರು ಸ್ಪರ್ಧೆ ಮಾಡದೇ ಇದ್ದರೂ ಜನರು ಬಹಳ ಭರವಸೆ ಇಟ್ಟುಕೊಂಡಿದ್ದರು. ಆದರೆ, ಯರಗೋಳ್‌ ಜಲಾಶಯ ಉದ್ಘಾಟನೆ ಹೊರತುಪಡಿಸಿ ಈವರೆಗೆ ಯಾವುದೇ ಭರವಸೆ ಈಡೇರಿಲ್ಲ. 

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಉದ್ದೇಶವಿದ್ದದ್ದೇ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗೆ ನೀರು ಪೂರೈಕೆ ಮಾಡಲು. ಆದರೆ, ಈ ಎರಡು ಜಿಲ್ಲೆ ಬಿಟ್ಟು ಆ ಯೋಜನೆ ಎಲ್ಲೆಲ್ಲಿಗೋ ಹೋಗಿದೆ. ಎರಡೂ ಜಿಲ್ಲೆಯ ಶಾಸಕರು, ಸಚಿವರು ಚಕಾರ ಎತ್ತುತ್ತಿಲ್ಲ. ಈ ಬಾರಿ ಬಜೆಟ್‌ನಲ್ಲಾದರೂ ಜಿಲ್ಲೆಗೆ ನೀರು ಹರಿಸಲು ಅನುದಾನ ಬಿಡುಗಡೆ ಮಾಡಬೇಕಿದೆ.

ಟೊಮೆಟೊ ಮಾರುಕಟ್ಟೆ ಜಾಗಕ್ಕಾಗಿ ಪರದಾಟ ಮುಂದುವರಿದಿದ್ದು, ರೈತರು ಹಾಗೂ ವರ್ತಕರ ಕೂಗು ಯಾರಿಗೂ ಕೇಳುತ್ತಿಲ್ಲ. ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸರಿಯಾದ ಜಾಗ ಗುರುತಿಸಲು ಈವರೆಗೆ ಸಾಧ್ಯವಾಗಿಲ್ಲ. ಟೊಮೆಟೊ ಹಾಗೂ ಮಾವಿನ ಬೆಳೆಯಲ್ಲಿ ಇಡೀ ರಾಜ್ಯದಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗೆ ಸಂಸ್ಕರಣಾ ಘಟಕ, ಶಿಥಲೀಕರಣ ಘಟಕ ಬೇಕೆಂಬ ರೈತರ ಬೇಡಿಕೆ ಹಲವು ವರ್ಷಗಳದ್ದು. ಆದರೆ, ಈ ಕೂಗು ಸರ್ಕಾರದ ಯಾರಿಗೂ ಕೇಳುತ್ತಿಲ್ಲ.

ಹೀಗಾಗಿ, ಸಹಜವಾಗಿ ಜಿಲ್ಲೆಯ ಜನರಲ್ಲಿ ಅಸಮಾಧಾನ ಮೂಡಿದೆ. ಯೋಜನೆಗ‌ಳ ಘೋಷಣೆಗೆ ಪಟ್ಟು ಹಿಡಿದಿದ್ದಾರೆ. ದುರದೃಷ್ಟಕರವೆಂದರೆ ಬಜೆಟ್‌ ಸಂಬಂಧ ಜಿಲ್ಲೆಯ ಬೇಡಿಕೆಗಳೇನು ಎಂಬುದರ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಚರ್ಚಿಸಿಲ್ಲ. ರೈತರು, ಸಂಘಟನೆಗಳ ಮುಖಂಡರ ಅಭಿಪ್ರಾಯವನ್ನೂ ಕೇಳಿಲ್ಲ.

ಕೋಲಾರದಲ್ಲಿ ಟೊಮೆಟೊ ಮಾರುಕಟ್ಟೆಗೆ ಜಾಗ ಬೇಕಿದ್ದು ಬಜೆಟ್‌ನಲ್ಲಿ ಪ್ರಸ್ತಾಪ ಆಗುವುದೇ? 

ಕೋಲಾರ ಜಿಲ್ಲೆಯ ಜನರ ಬೇಡಿಕೆಗಳೇನು?

* ಎತ್ತಿನಹೊಳೆ ನೀರಾವರಿ ಯೋಜನೆ ಮೂಲಕ ಕೋಲಾರಕ್ಕೆ ನೀರು

* ಕೆ.ಸಿ.ವ್ಯಾಲಿ 3ನೇ ಹಂತದ ಶುದ್ಧೀಕರಣ

* ಕೋಲಾರದಲ್ಲಿ ಟೊಮೆಟೊ ಮಾರುಕಟ್ಟೆಗೆ ಜಾಗ

* ಕೈಗಾರಿಕೆಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ

* ಕೋಲಾರ ನಗರದ ಯುಜಿಡಿ ವ್ಯವಸ್ಥೆ ರಸ್ತೆಗಳಿಗೆ ಕಾಯಕಲ್ಪ

* ಬಂಗಾರಪೇಟೆ ಗಡಿ ಭಾಗದಲ್ಲಿ ಆನೆ ಹಾವಳಿಗೆ ಮುಕ್ತಿ

* ಕೋಲಾರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು

* ಕೋಲಾರಕ್ಕೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

* ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು

* ಜಿಲ್ಲೆಯ ಜನರಿಗೆ ಸ್ಥಳೀಯವಾಗಿ ಉದ್ಯೋಗಕ್ಕೆ ಮಾರ್ಗ

* ಕೋಲಾರ ಮಾಲೂರಿಗೆ ರಿಂಗ್‌ ರಸ್ತೆ ನಿರ್ಮಾಣ

* ಶ್ರೀನಿವಾಸಪುರದಲ್ಲಿ ಮಾವು ಸಂಸ್ಕರಣಾ ಘಟಕ

* ಮುಳಬಾಗಿಲಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ

* ಕೆಜಿಎಫ್‌: ಗಣಿ ಕಾರ್ಮಿಕರ ಹಿತ ಕಾಯಬೇಕು

* ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅನುಷ್ಠಾನ

* ಪ್ರವಾಸಿ ತಾಣಗಳ ಅಭಿವೃದ್ಧಿ

* ನಗರ ಪಾಲಿಕೆಗೆಯಾಗಿ ಕೋಲಾರ ನಗರಸಭೆ

* ನಗರಸಭೆಯಾಗಿ ಮಾಲೂರು ಪುರಸಭೆ

* ತಾಲ್ಲೂಕು ಕೇಂದ್ರವಾಗಿ ವೇಮಗಲ್‌

* ಜಿಲ್ಲಾ ಕೇಂದ್ರದಲ್ಲಿ ಈಜುಕೊಳ

ಮತ್ತಷ್ಟು ಕೈಗಾರಿಕೆ ಸ್ಥಾಪನೆ ಸ್ಥಳೀಯ ಕನ್ನಡಿಗರಿಗೆ ಉದ್ಯೋಗಕ್ಕೆ ಒತ್ತು ನೀಡುವರೇ?

ಕೋಲಾರ ಜಿಲ್ಲೆಗೆ 2024ರ ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆ

* ಕೆಜಿಎಫ್‌ನಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಅಭಿವೃದ್ಧಿ (ಪದೇಪದೇ ಪ್ರಸ್ತಾಪವಾಗುವ ಯೋಜನೆ)

* ಗರ್ಭಕಂಠ ಕ್ಯಾನ್ಸರ್‌ ಪತ್ತೆಗೆ ಕೊಲ್ಪೊಸ್ಕೋಪಿ ಉಪಕರಣ ಖರೀದಿಗೆ ಅನುದಾನ

* ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಮುಂದುವರಿಕೆ (10 ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಯೋಜನೆ)

* ಪ್ರಗತಿಯಲ್ಲಿರುವ ₹ 455 ಕೋಟಿ ವೆಚ್ಚದ ಕೆ.ಸಿ.ವ್ಯಾಲಿ 2ನೇ ಹಂತದ ಉದ್ದೇಶಿತ 272 ಕೆರೆ ತುಂಬಿಸುವ ಯೋಜನೆಯನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸುವುದು (ಹಿಂದಿನ ಬಜೆಟ್‌ನಲ್ಲೂ ಘೋಷಣೆ)

* ಕೋಲಾರ ಎಂಪಿಎಂಸಿಯಲ್ಲಿ ಶೂನ್ಯ ತ್ಯಾಜ್ಯ ಮಾರುಕಟ್ಟೆ ಉದ್ದೇಶದಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಬಯೊ ಸಿಎನ್‌ಜಿ ಘಟಕ ಸ್ಥಾಪನೆ

* ಕೋಲಾರದ ಆದಿಮ ಸಾಂಸ್ಕೃತಿಕ ಕೇಂದ್ರದ ಅಭಿವೃದ್ಧಿಗೆ ಅಗತ್ಯ ನೆರವು

ಜಿಲ್ಲೆಗೆ 2023ರ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಯೋಜನೆ

* ಕೈಗಾರಿಕಾ ಸಂಪರ್ಕಕ್ಕೆ ದೇವನಹಳ್ಳಿ–ವೇಮಗಲ್‌–ಮಾಲೂರು–ಹೊಸೂರು ಆರು ಪಥ ರಸ್ತೆ ನಿರ್ಮಾಣ ವಿಸ್ತೃತ ಯೋಜನೆ (ಯೋಜನೆಗೆ ಅನುಮೋದನೆ ಸಿಕ್ಕಿದ್ದು ಅನುದಾನ ಬಿಡುಗಡೆ ಆಗಬೇಕಿದೆ)

* ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 3 ಬೇ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣ

* ಕೆಜಿಎಫ್‌ನಲ್ಲಿ ಕೈಗಾರಿಕಾ ಟೌನ್‌ಶಿಪ್‌ ಸ್ಥಾಪನೆ

* ದೇಗುಲ ನಿರ್ಮಾಣಕ್ಕೆ ಶಿಲ್ಪಿಗಳನ್ನು ತಯಾರಿಸಲು ಮಾಲೂರಿನ ಶಿವಾರಪಟ್ಟಣದಲ್ಲಿ ಶಿಲ್ಪಕಲಾ ತರಬೇತಿ ಕೇಂದ್ರ

* ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದುವರಿಸಲು ತೀರ್ಮಾನ

ಅಭಿಪ್ರಾಯ...

ಗ್ಯಾರಂಟಿಗೇ ಇವರ ಬಳಿ ಹಣವಿಲ್ಲ

ಗ್ಯಾರಂಟಿ ಕೊಡಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲವಾಗಿದೆ. ಇನ್ನೇನು ನಿರೀಕ್ಷೆ ಇಟ್ಟುಕೊಳ್ಳುವುದು?ಕೋಲಾರ ಜನರು ಸಿದ್ದರಾಮಯ್ಯ ಅವರ ಮೇಲೆ ತುಂಬಾ ಪ್ರೀತಿ ತೋರಿದರು. ಆದರೆ, ಅವರು ವಾಪಸ್‌ ಏನೂ ಕೊಡಲಿಲ್ಲ. ಹೀಗಾದರೆ ರಾಜಕೀಯ ನಾಯಕರ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ. ಆಡಳಿತ ಹಾಗೂ ವಿರೋಧ ಪಕ್ಷದ ಜನಪ್ರತಿನಿಧಿಗಳು ಸೇರಿದಂತೆ ಯಾರೂ ಧ್ವನಿ ಎತ್ತುತ್ತಿಲ್ಲ. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕಿದೆ, ಎತ್ತಿನಹೊಳೆ ಯೋಜನೆ ನೀರು ತರಬೇಕು, ಕೋಲಾರಕ್ಕೆ ರಿಂಗ್‌ ರಸ್ತೆ ಮಾಡಬೇಕು

-ಕುರುಬರಪೇಟೆ ವೆಂಕಟೇಶ್‌, ಕೋಲಾರ

ಕೃಷ್ಣಾ ನದಿ ನೀರು ತರಲು ಒತ್ತು ನೀಡಿ

ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಮಾವು, ಟೊಮೆಟೊ ಹಾಗೂ ಆಲೂಗಡೆಗೆ ಸಂಸ್ಕರಣಾ ಘಟಕದ ಸ್ಥಾಪಿಸಬೇಕು. ಎತ್ತಿನಹೊಳೆ ಯೋಜನೆಯಿಂದ ಜಿಲ್ಲೆಗೆ ನೀರು ಖಂಡಿತ ಬರುವುದಿಲ್ಲ. ಹೀಗಾಗಿ, ಕೃಷ್ಣಾ ನದಿಯಿಂದ ನಮಗೆ ಸಿಗಬೇಕಿರುವ ನೀರಿನ ಪಾಲು ಕೊಡಬೇಕು. ಕುಡಿಯುವ ನೀರಿನ ಸಮಸ್ಯೆ ನೀಗಲಿದೆ

-ಅಬ್ಬಣಿ ಶಿವಪ್ಪ, ರೈತ ಮುಖಂಡ, ಕೋಲಾರ

ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಿ

ಜಿಲ್ಲೆಯ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ನೀರಿನ ಮೂಲವಾದ ಕೆರೆಗಳು ಅಭಿವೃದ್ಧಿಯಾದರೆ ಗ್ರಾಮಗಳು ಅಭಿವೃದ್ಧಿ ಆಗುತ್ತದೆ. ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ನೀರು ಬರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಯಾಗುತ್ತಿವೆ. ಹೀಗಾಗಿ, ರಕ್ಷಣೆಗೆ ಸರ್ಕಾರ ಆದ್ಯತೆ ನೀಡಬೇಕು. ಆರೋಗ್ಯ, ಶಿಕ್ಷಣಕ್ಕೆ ಒತ್ತು ನೀಡಬೇಕು

-ರಾಧಾಮಣಿ ಎಂ.ವಿ., ಕೋಲಾರ

ವಿದ್ಯುತ್‌ ದರ ಹೆಚ್ಚಳ ಮಾಡಬಾರದು

ಕೈಗಾರಿಕೆ ಬೆಳೆಯಬೇಕೆಂದರೆ ರಸ್ತೆ, ನೀರು, ವಿದ್ಯುತ್‌ ಸುಗಮವಾಗಿರಬೇಕು. ಈಗ ಬೇಸಿಗೆ ಬಂದಿದ್ದು, ವಿದ್ಯುತ್‌ ಸಮಸ್ಯೆ ಶುರುವಾಗಿದೆ. ವಿದ್ಯುತ್‌ ದರ ಹೆಚ್ಚಿದ್ದು, ಮತ್ತೆ ಹೆಚ್ಚಳ ಮಾಡದಂತೆ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಕಾರ್ಖಾನೆಗಳು, ಕಂಪನಿಗಳು ರಾಜ್ಯಬಿಟ್ಟು ಬೇರೆಡೆ ಹೋಗುತ್ತವೆ. ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು. ಪೆಟ್ರೋಲ್‌, ಡೀಸೆಲ್‌ ದರ ಕಡಿಮೆ ಮಾಡಬೇಕು

-ಸುರೇಶ್‌ ಬಿ., ಅಧ್ಯಕ್ಷ, ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ, ಕೋಲಾರ

ಸಿ.ಎಂಗೆ ಮನವಿ ಮಾಡಿದ್ದೇನೆ

ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಬೇಕು, ಸರ್ಕಾರಿ ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಎಂಜಿನಿಯರಿಂಗ್ ಕಾಲೇಜು, ಕೋಲಾರ ನಗರಕ್ಕೆ ಹೊರ ವರ್ತುಲ ರಸ್ತೆ ನಿರ್ಮಾಣ, ಎಪಿಎಂಸಿ ಮಾರುಕಟ್ಟಿಗೆ 100 ಎಕರೆ ಜಮೀನು ಅನ್ನು ಈ ಬಾರಿ ಬಜೆಟ್‌ನಲ್ಲಿ ಮಂಜೂರು ಮಾಡುವಂತೆ ಮುಖ್ಯಮಂತ್ರಿಗೆ ಕೋರಿದ್ದೇನೆ. ಕೋಲಾರ ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದ್ದೇನೆ. ಬೇಡಿಕೆ ಈಡೇರುವ ಭರವಸೆ ಇದೆ

-ಕೊತ್ತೂರು ಮಂಜುನಾಥ್‌, ಕೋಲಾರ ಶಾಸಕ

ಶಿಥಲೀಕರಣ ಘಟಕ ಸ್ಥಾಪಿಸಲಿ

ರೈತರು ಬೆಳೆಯುವ ತರಕಾರಿಗಳಿಗೆ ಉತ್ತಮ ಬೆಲೆ ಸಿಕ್ಕಿದಾಗ ಮಾರುವಂತಾಗಲು ಶಿಥಲೀಕರಣ ಘಟಕ (ಕೋಲ್ಡ್‌ ಸ್ಟೋರೇಜ್‌0 ಸ್ಥಾಪಿಸಬೇಕು. ಸರ್ಕಾರಿ ವೈದ್ಯಕೀಯ ಕಾಲೇಜು ಹಾಗೂ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವಿದೆ. ಕೈಗಾರಿಕೆ ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಕೊಡಬೇಕು. ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಕೆರೆ ತುಂಬಿಸಬೇಕು, ಅಂತರಗಂಗೆ ಪ್ರವಾಸಿ ತಾಣ ಅಭಿವೃದ್ಧಿ ಮಾಡಬೇಕು

-ದೇವ ಎಸ್‌.ಆರ್‌., ಕೋಲಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.