ADVERTISEMENT

Budget 2023-24 | ಷೇರು ವಿಕ್ರಯ: ಉಲ್ಲೇಖವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2023, 19:30 IST
Last Updated 1 ಫೆಬ್ರುವರಿ 2023, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

2023–24ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣ ಅಥವಾ ಷೇರು ಮಾರಾಟ ಮಾಡುವ ಬಗ್ಗೆ ಬಜೆಟ್‌ನಲ್ಲಿ ಪ್ರತ್ಯೇಕ ಉಲ್ಲೇಖ ಮಾಡಿಲ್ಲ.

ಈ ಹಿಂದೆ ಬಜೆಟ್‌ನ ಬಂಡವಾಳ ವೆಚ್ಚದಲ್ಲಿ ಇತರೆ ವೆಚ್ಚಗಳ ಅಡಿಯಲ್ಲಿ ಷೇರು ವಿಕ್ರಯವನ್ನು ಪ್ರತ್ಯೇಕವಾಗಿ ತೋರಿಸಲಾಗುತ್ತಿತ್ತು. 2023–24ನೇ ಬಜೆಟ್‌ ದಾಖಲೆಗಳ ಪ್ರಕಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ಇತರೆ ಬಂಡವಾಳ ವೆಚ್ಚಗಳ ಪರಿಷ್ಕೃತ ಅಂದಾಜನ್ನು ₹ 60 ಸಾವಿರ ಕೋಟಿಗೆ ನಿಗದಿಪಡಿಸಲಾಗಿದೆ. 2022–23ರ ಬಜೆಟ್ ಅಂದಾಜಿನಲ್ಲಿ ₹ 65 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು.

ಏಪ್ರಿಲ್‌ 1ರಿಂದ ಆರಂಭ ಆಗಲಿರುವ ಹಣಕಾಸು ವರ್ಷಕ್ಕೆ ಇತರೆ ಬಂಡವಾಳ ವೆಚ್ಚಗಳಿಗೆ ₹ 61 ಸಾವಿರ ಕೋಟಿ ನಿಗದಿ ಮಾಡಲಾಗಿದೆ.

ADVERTISEMENT

ಮುಂದಿನ ಹಣಕಾಸು ವರ್ಷದಲ್ಲಿ ಶಿಪ್ಪಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ, ಎನ್‌ಎಂಡಿಸಿ ಸ್ಟೀಲ್‌ ಲಿಮಿಟೆಡ್‌, ಬಿಇಎಂಎಲ್‌, ಎಚ್‌ಎಲ್‌ಎಲ್‌ ಲೈಫ್‌ಕೇರ್‌, ಕಂಟೈನರ್‌ ಕಾರ್ಪೊರೇಷನ್‌ ಆಫ್ ಇಂಡಿಯಾ ಮತ್ತು ವೈಜಾಗ್‌ ಸ್ಟೀಲ್‌ ಕಂಪನಿಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಯೋಜನೆ ರೂಪಿಸಿದೆ.

ಕೇಂದ್ರ ಸರ್ಕಾರವು ಸತತ ನಾಲ್ಕನೇ ವರ್ಷದಲ್ಲಿಯೂ ಷೇರುವಿಕ್ರಯದ ಗುರಿ ತಲುಪುವಲ್ಲಿ ವಿಫಲವಾಗಿದೆ.

2022-23ನೇ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದ ಮೂಲಕ ₹ 65 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆಯ (ಡಿಐಪಿಎಎಂ) ಜಾಲತಾಣದಲ್ಲಿ ಇರುವ ಮಾಹಿತಿಯ ಪ್ರಕಾರ, ಕೇಂದ್ರೋದ್ಯಮಗಳಲ್ಲಿನ (ಸಿಪಿಎಸ್‌ಇ) ಷೇರುಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಈವರೆಗೆ ₹ 31,100 ಕೋಟಿ ಬಂಡವಾಳವನ್ನು ಮಾತ್ರವೇ ಸಂಗ್ರಹಿಸಿದೆ.

₹ 48 ಸಾವಿರ ಕೋಟಿ ಲಾಭಾಂಶ: ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಸರ್ಕಾರಿ ವಲಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ 2023–24ನೇ ಹಣಕಾಸು ವರ್ಷದಲ್ಲಿ ಲಾಭಾಂಶದ ರೂಪದಲ್ಲಿ ₹ 48 ಸಾವಿರ ಕೋಟಿ ಪಡೆಯುವ ನಿರೀಕ್ಷೆಯನ್ನು ಕೇಂದ್ರ ಹೊಂದಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 17ರಷ್ಟು ಹೆಚ್ಚಾಗಲಿದೆ.

2022–23ನೇ ಹಣಕಾಸು ವರ್ಷದಲ್ಲಿ ಲಾಭಾಂಶದ ರೂಪದಲ್ಲಿ ₹40,953 ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಇಟ್ಟುಕೊಂಡಿದೆ. ಇದು ಬಜೆಟ್‌ನಲ್ಲಿ ಅಂದಾಜು ಮಾಡಿದ್ದ ₹ 73,948 ಕೋಟಿಗಿಂತ ಕಡಿಮೆ.

2022ರ ಮೇನಲ್ಲಿ ನಡೆದ ಆರ್‌ಬಿಐ ಆಡಳಿತ ಮಂಡಳಿ ಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ₹ 30,307 ಕೋಟಿ ಲಾಭಾಂಶ ನೀಡಲು ಒಪ್ಪಿಗೆ ನೀಡಿದೆ. ಬಜೆಟ್‌ ದಾಖಲೆಗಳ ಪ್ರಕಾರ, ಸರ್ಕಾರಿ ಕಂಪನಿಗಳು ಮತ್ತು ಇತರೆ ಹೂಡಿಕೆಗಳ ಮೂಲಕ ಸರ್ಕಾರಕ್ಕೆ ₹ 43 ಸಾವಿರ ಕೋಟಿ ಲಾಭಾಂಶ ಬಂದಿದೆ.

ಸಾಲ ಮಿತಿ ಹೆಚ್ಚಳ: ಏಪ್ರಿಲ್‌ 1ರಿಂದ ಆರಂಭ ಆಗಲಿರುವ 2023–24ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ದಾಖಲೆಯ ₹ 15.4 ಲಕ್ಷ ಕೋಟಿ ಸಾಲ ಪಡೆಯಲು ಮುಂದಾಗಿದೆ. ಇದು 2023ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷಕ್ಕೆ ನಿಗದಿಪಡಿಸಿರುವ ₹ 14.21 ಲಕ್ಷ ಕೋಟಿಗೂ ಹೆಚ್ಚಿನದ್ದಾಗಿದೆ.

ಸಾಲಪತ್ರಗಳನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಿಂದ ₹ 11.8 ಲಕ್ಷ ಕೋಟಿ ಸಂಗ್ರಹಿಸಲಾಗುವುದು. ಉಳಿದ ಮೊತ್ತವು ಸಣ್ಣ ಉಳಿತಾಯ ಮತ್ತು ಇತರೆ ಮೂಲಗಳಿಂದ ಬರಲಿದೆ. ಸರಾಸರಿ ಸಾಲ ಸಂಗ್ರಹವು
₹ 15.4 ಲಕ್ಷ ಕೋಟಿ ಆಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

2022–23ನೇ ಹಣಕಾಸು ವರ್ಷದಲ್ಲಿ ಜನವರಿ 27ರವರೆಗೆ ಕೇಂದ್ರವು ₹ 12.93 ಲಕ್ಷ ಕೋಟಿ ಸಾಲ ಸಂಗ್ರಹ ಮಾಡಿದೆ. ಇದು ಬಜೆಟ್‌ ಅಂದಾಜಿನ ಶೇ 91ರಷ್ಟು ಆಗಿದೆ.

ಸಬ್ಸಿಡಿ ಮೊತ್ತ ಇಳಿಕೆ: ಆಹಾರ, ರಸಗೊಬ್ಬರ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿ ಮೊತ್ತವನ್ನು2023–24ನೇ ಹಣಕಾಸು ವರ್ಷಕ್ಕೆ ₹ 3.75 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. 2022–23ಕ್ಕೆ ನಿಗದಿಪಡಿಸಿರುವ ಪರಿಷ್ಕೃತ ಮೊತ್ತ ₹ 5.21 ಲಕ್ಷ ಕೋಟಿಗೆ ಹೋಲಿಸಿದರೆ ಸಬ್ಸಿಡಿ ಶೇ 28ರಷ್ಟು ಕಡಿಮೆ ಆಗಿದೆ.

ಇದರಿಂದಾಗಿ ಒಟ್ಟು ಸಬ್ಸಿಡಿಯಲ್ಲಿ ರಸಗೊಬ್ಬರ ಸಬ್ಸಿಡಿ ₹ 2.25 ಲಕ್ಷ ಕೋಟಿಯಿಂದ ₹ 1.75 ಲಕ್ಷ ಕೋಟಿಗೆ ಇಳಿಕೆ ಆಗಲಿದೆ. ಪೆಟ್ರೋಲಿಯಂ ಸಬ್ಸಿಡಿ ₹ 9,179 ಕೋಟಿಯಿಂದ ₹ 2,257 ಕೋಟಿಗೆ ತಗ್ಗಲಿದೆ. ಆಹಾರ ಸಬ್ಸಿಡಿ ₹ 2.87 ಲಕ್ಷ ಕೋಟಿಯಿಂದ ₹ 1.97 ಲಕ್ಷ ಕೋಟಿಗೆ ಇಳಿಕೆ ಆಗುವ ಅಂದಾಜು ಮಾಡಲಾಗಿದೆ.

2022–23ರಲ್ಲಿ ಆಹಾರ ಸಬ್ಸಿಡಿ ಮೊತ್ತವು ₹ 2.88 ಲಕ್ಷ ಕೋಟಿಯಿಂದ ₹ 2.87 ಲಕ್ಷ ಕೋಟಿಗೆ ಇಳಿಕೆ ಆಗಲಿದೆ. ಆದರೆ, ರಸಗೊಬ್ಬರ ಸಬ್ಸಿಡಿ ₹ 1.53 ಲಕ್ಷ ಕೋಟಿಯಿಂದ ₹ 2.25 ಲಕ್ಷ ಕೋಟಿಗೆ ಹೆಚ್ಚಾಗಲಿದೆ. ಪೆಟ್ರೋಲಿಯಂ ಸಬ್ಸಿಡಿ ಸಹ ₹ 3,422 ಕೋಟಿಯಿಂದ ₹ 9,179 ಕೋಟಿಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.