ADVERTISEMENT

Karnataka Budget 2025 | ಗ್ಯಾಲರಿಯಲ್ಲಿ ಘೋಷಣೆ: ಏಳು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2025, 4:21 IST
Last Updated 8 ಮಾರ್ಚ್ 2025, 4:21 IST
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)
ಕರ್ನಾಟಕ ವಿಧಾನಸಭೆ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಶುಕ್ರವಾರ ಬಜೆಟ್‌ ಮಂಡಿಸುತ್ತಿದ್ದ ಸಂದರ್ಭದಲ್ಲಿ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಘೋಷಣೆ ಕೂಗಿದ್ದ ಏಳು ಮಂದಿಯನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಎಚ್‌.ಎಸ್‌.ಆರ್ ಲೇಔಟ್‌ ನಿವಾಸಿ ಎ.ವಿಜಯಕುಮಾರ್, ಸರ್ಜಾಪುರದ ಎಸ್‌.ವಿ.ಸುರೇಶ್, ಚೊಕ್ಕಸಂದ್ರದ ಎನ್‌.ವೇಣುಗೋಪಾಲ್‌, ಆನೇಕಲ್‌ನ ಎಸ್‌.ಎಸ್‌.ವಿಜಯಶೇಖರ್‌, ಸರ್ಜಾಪುರ ಅಂಬೇಡ್ಕರ್‌ ಕಾಲೊನಿಯ ಎಸ್‌.ವಿ.ಶ್ರೀನಿವಾಸ್, ಎಚ್‌.ಎಸ್.ಆರ್.ಲೇಔಟ್‌ ಹೊಸಪಾಳ್ಯ ಮುಖ್ಯರಸ್ತೆಯ ಸತ್ಯೇಂದ್ರಕುಮಾರ್, ಜಾಂಬವನಗರದ ಎಂ.ರಾಜರತ್ನಂ ಬಂಧಿತರು.

ವಿಧಾನಸಭೆಯ ದಂಡನಾಯಕ ಎಚ್.ಎಸ್‌.ಜಯಕೃಷ್ಣ ಅವರು ಏಳು ಮಂದಿಯ ವಿಚಾರಣೆ ನಡೆಸಿ, ವಿಧಾನಸೌಧ ಠಾಣೆ ಪೊಲೀಸರ ವಶಕ್ಕೆ ನೀಡಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಸಾರ್ವಜನಿಕರ ಗ್ಯಾಲರಿ ಹಾಗೂ ಸಭಾಧ್ಯಕ್ಷರ ಗ್ಯಾಲರಿಯಲ್ಲಿ ಏಳು ಮಂದಿ ಬಜೆಟ್‌ ಅಧಿವೇಶನದ ವೀಕ್ಷಣೆ ಮಾಡುತ್ತಿದ್ದರು. ಅಲ್ಲಿಂದ ಹೊರಡುವ ವೇಳೆ ‘ಸದಾಶಿವ ಆಯೋಗದ ವರದಿ ಜಾರಿಗೊಳಿಸಿ, ಒಳ ಮೀಸಲಾತಿ ಜಾರಿ ಮಾಡಿ’ ಎಂಬುದಾಗಿ ಘೋಷಣೆ ಕೂಗಿದ್ದರು. ಅವರನ್ನು ಮಾರ್ಷಲ್‌ಗಳು ವಶಕ್ಕೆ ಪಡೆದುಕೊಂಡರು.

ಸದನದ ನಿಯಮಾವಳಿಗೆಯನ್ನು ಉಲ್ಲಂಘನೆ ಮಾಡುವುದರ ಜತೆಗೆ ಮಾರ್ಷಲ್‌ ಅಧಿಕಾರಿ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರು ನೀಡಲಾಗಿದೆ.

‘ರಾಜರತ್ನಂ ಸೇರಿದಂತೆ ಇಬ್ಬರು ಮಂಜುನಾಥ್‌ ಎಂಬುವವರ ಹೆಸರಿನಲ್ಲಿ ಪಾಸ್‌ ಪಡೆದು ಗ್ಯಾಲರಿಗೆ ಬಂದಿದ್ದರು. ಉಳಿದ ಐವರು ಯಾರ ಹೆಸರಿನಲ್ಲಿ ಪಾಸ್‌ ಪಡೆದು ಒಳಕ್ಕೆ ಬಂದಿದ್ದರು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.