ADVERTISEMENT

ಬಜೆಟ್ ಮೇಲೆ ನಿರೀಕ್ಷೆಗಳ ಭಾರ

ಪಿಟಿಐ
Published 31 ಜನವರಿ 2021, 19:58 IST
Last Updated 31 ಜನವರಿ 2021, 19:58 IST
   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಸಾಲಿನ ಕೇಂದ್ರ ಬಜೆಟ್‌ಅನ್ನು ಸೋಮವಾರ ಮಂಡಿಸಲಿದ್ದಾರೆ. ಸಾಂಕ್ರಾಮಿಕದ ಪರಿಣಾಮವಾಗಿ ಆರ್ಥಿಕವಾಗಿ ಬಸವಳಿದಿರುವ ಜನಸಾಮಾನ್ಯರಿಗೆ ಬಜೆಟ್‌ನಲ್ಲಿನ ಘೋಷಣೆಗಳು ಸಮಾಧಾನ ತರುವ ನಿರೀಕ್ಷೆ ಇದೆ.

ಆರೋಗ್ಯ ಸೇವೆ, ಮೂಲಸೌಕರ್ಯ ಮತ್ತು ರಕ್ಷಣಾ ಕ್ಷೇತ್ರಗಳ ಮೇಲೆ ಮಾಡುವ ವೆಚ್ಚ ಹೆಚ್ಚಿಸುವ ಮೂಲಕ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ನೆರವಾಗಲಿದೆ ಎಂಬ ನಿರೀಕ್ಷೆ ಕೂಡ ಬಜೆಟ್ ಮೇಲಿದೆ.

ಉದ್ಯೋಗ ಸೃಷ್ಟಿ, ಗ್ರಾಮೀಣಾಭಿವೃದ್ಧಿ ಉದ್ದೇಶದ ಯೋಜನೆಗಳ ಮೇಲಿನ ವೆಚ್ಚ ಹೆಚ್ಚಿಸುವುದು, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಹೇರಳ ಹಣ ಮೀಸಲಿಡುವುದು, ಸಾಮಾನ್ಯ ತೆರಿಗೆದಾರರ ಜೇಬಿನಲ್ಲಿ ಹೆಚ್ಚು ಹಣ ಇರುವಂತೆ ಮಾಡುವುದು, ವಿದೇಶಿ ಹೂಡಿಕೆ ಇನ್ನಷ್ಟು ಆಕರ್ಷಿಸಲು ನಿಯಮಗಳನ್ನು ಸಡಿಲಿಸುವುದು ಈ ಬಜೆಟ್‌ನ ಭಾಗವಾಗುವ ಸಾಧ್ಯತೆಗಳು ಇವೆ. ಈ ಬಾರಿಯ ಬಜೆಟ್ ‘ಹಿಂದೆಂದೂ ಕಾಣದಂತೆ ಇರಲಿದೆ’ ಎಂದು ನಿರ್ಮಲಾ ಅವರು ಈ ಹಿಂದೆಯೇ ಹೇಳಿದ್ದಾರೆ.

ADVERTISEMENT

ಆದಾಯ ಮತ್ತು ವೆಚ್ಚಗಳ ಲೆಕ್ಕ ಮಾತ್ರವೇ ಅಲ್ಲದೆ, ಅದಕ್ಕಿಂತ ಹೆಚ್ಚಿನದನ್ನು ಈ ಬಾರಿಯ ಬಜೆಟ್ ಒಳಗೊಳ್ಳಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ. ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿದ್ದ ಪ್ರಮುಖ ಅರ್ಥವ್ಯವಸ್ಥೆಯನ್ನು ಮತ್ತೆ ಹಳಿಗೆ ತರುವ ನೀಲನಕ್ಷೆ ಈ ಬಜೆಟ್‌ನಲ್ಲಿ ಇರಬೇಕು ಎಂದೂ ಅವರು ಹೇಳಿದ್ದಾರೆ.

‘ಜಾಗತಿಕವಾಗಿ ಎಲ್ಲೆಡೆ ಸರ್ಕಾರಗಳು ಬಹುದೊಡ್ಡ ಸವಾಲನ್ನು ಎದುರಿಸುತ್ತಿವೆ. ತಮ್ಮ ಅರ್ಥ ವ್ಯವಸ್ಥೆಗಳು ಪುನಃ ಚೇತರಿಕೆ ಕಾಣುವಂತೆ ಮಾಡಲು ಅವು ತೀರಾ ಅಸಾಂಪ್ರದಾಯಿಕ ಮಾರ್ಗಗಳನ್ನು ಅನುಸರಿಸುತ್ತಿವೆ. ಅಭೂತಪೂರ್ವ ಸಂದರ್ಭಗಳಲ್ಲಿ ಅಭೂತಪೂರ್ವವಾದ ಕ್ರಮಗಳೇ ಬೇಕಾಗುತ್ತವೆ’ ಎಂದು ಡನ್‌ ಆ್ಯಂಡ್‌ ಬ್ರಾಡ್‌ಸ್ಟ್ರೀಟ್‌ ಸಂಸ್ಥೆಯ ಜಾಗತಿಕ ಮುಖ್ಯ ಅರ್ಥಶಾಸ್ತ್ರಜ್ಞ ಅರುಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಹಣಕಾಸು ವರ್ಷದಲ್ಲಿ ಒಟ್ಟು ₹ 60 ಸಾವಿರ ಕೋಟಿ ಆದಾಯ ಕೊರತೆ ಉಂಟಾಗಲಿದೆ ಎಂದು ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆ ಅಂದಾಜಿಸಿದೆ. ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯ, ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸುವುದು, ಬ್ಯಾಂಕಿಂಗ್ ವಲಯದಲ್ಲಿನ ಸುಧಾರಣೆ, 15ನೆಯ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಬಜೆಟ್ ಗಮನ ನೀಡಬೇಕಾಗುತ್ತದೆ ಎಂದು ಬ್ರಿಕ್‌ವರ್ಕ್‌ ರೇಟಿಂಗ್ಸ್‌ ಸಂಸ್ಥೆ ಹೇಳಿದೆ.

ಖಾಸಗಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದಕ್ಕೆ ಕೂಡ ಈ ಬಾರಿಯ ಬಜೆಟ್‌ ಗಮನ ನೀಡಬಹುದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೇತನ ಪಡೆಯುವವರಿಗೆ ಏನು?

ವೇತನ ಪಡೆಯುವವರಿಗೆ ಆದಾಯ ತೆರಿಗೆಯಲ್ಲಿ ದೊಡ್ಡ ಮಟ್ಟದ ಕಡಿತದ ಘೋಷಣೆ ಇರಲಾರದು. ಆದರೆ, ಸ್ಟ್ಯಾಂಡರ್ಡ್‌ ಡಿಡಕ್ಷನ್ ಮಿತಿಯನ್ನು ಇನ್ನಷ್ಟು ಹೆಚ್ಚಿಸಬಹುದು ಎನ್ನಲಾಗಿದೆ. ಕೋವಿಡ್–19 ಕಾರಣದಿಂದಾಗಿ ಈಗಲೂ ತೊಂದರೆಯಲ್ಲಿರುವ ಕೆಲವು ಉದ್ಯಮ ವಲಯಗಳಿಗೆ ಬಜೆಟ್‌ನಲ್ಲಿ ಸಮಾಧಾನದ ಟಾನಿಕ್ ಸಿಗಬಹುದು.

ಸೇವಾ ವಲಯಕ್ಕೆ ಕೆಲವು ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಬಹುದು ಎನ್ನಲಾಗಿದೆ. ಆತ್ಮನಿರ್ಭರ ಭಾರತ ಕಾರ್ಯಕ್ರಮಕ್ಕೆ ಆದ್ಯತೆ ಸಿಗಲಿದೆ, ಈ ಕಾರ್ಯಕ್ರಮದ ಅಡಿಯಲ್ಲಿಯೂ ಕೆಲವು ತೆರಿಗೆ ವಿನಾಯಿತಿಗಳನ್ನು ನೀಡಬಹುದು. ಭಾರಿ ಶ್ರೀಮಂತರ ಮೇಲೆ ಹೊಸದಾಗಿ ಕೆಲವು ತೆರಿಗೆಗಳು ಹಾಗೂ ಸೆಸ್‌ಗಳನ್ನು ವಿಧಿಸುವ ಸಾಧ್ಯತೆ ಇದೆ.

ಬಜೆಟ್: ಕೆಲವು ನಿರೀಕ್ಷೆಗಳು

* ಎನ್‌ಪಿಎ ಸಮಸ್ಯೆ ನಿಭಾಯಿಸಲು ಬ್ಯಾಡ್‌ ಬ್ಯಾಂಕ್‌ ಸ್ಥಾಪನೆ

* ತಯಾರಿಕಾ ವಲಯಕ್ಕೆ ಉತ್ತೇಜನ ನೀಡಲು ಘೋಷಣೆಗಳು

* ತೆರಿಗೆ ಉಳಿತಾಯ ಕೊಡುಗೆಗಳ ಮೂಲಕ ಜನ ಖರೀದಿಸುವುದನ್ನು ಹೆಚ್ಚಿಸಲು ಕ್ರಮ

* ಉದ್ಯೋಗ ಸೃಷ್ಟಿಸುವ ಮೂಲಸೌಕರ್ಯ ಯೋಜನೆಗಳ ಮೇಲೆ ಗಮನ

* ನರೇಗಾ ಯೋಜನೆಗೆ ಹೆಚ್ಚಿನ ಅನುದಾನ

* ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೆರವು

* ಎಂಎಸ್‌ಎಂಇ ಉದ್ಯಮ ವಲಯಕ್ಕೆ ಸಹಾಯಹಸ್ತ

* ಸಾಲ ಸುಲಭವಾಗಿ ಸಿಗುವಂತೆ ಮಾಡುವುದು

* ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.