ADVERTISEMENT

ಸಾಂಸ್ಕೃತಿಕ ಸಂಘಕ್ಕೆ ‘ಮುಂಬರುವ ವರ್ಷಗಳಲ್ಲಿ ₹500 ಕೋಟಿ’!

ಹೆಚ್ಚಳವಾಗದ ಕೆಕೆಆರ್‌ಡಿಬಿ ಅನುದಾನ; ನೀರಾವರಿ–ಶಿಕ್ಷಣ ಕಡೆಗಣನೆ

ಗಣೇಶ-ಚಂದನಶಿವ
Published 5 ಮಾರ್ಚ್ 2020, 19:45 IST
Last Updated 5 ಮಾರ್ಚ್ 2020, 19:45 IST
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನವನ್ನು ₹1500 ಕೋಟಿಯಿಂದ ₹ 2 ಸಾವಿರ ಕೋಟಿಗೆ ಹೆಚ್ಚಿಸಬೇಕು ಎಂಬ ಬೇಡಿಕೆಗೆ ರಾಜ್ಯ ಬಜೆಟ್‌ನಲ್ಲಿ ಸ್ಪಂದನೆ ಸಿಕ್ಕಿಲ್ಲ.‘ಕಲ್ಯಾಣ ಕರ್ನಾಟಕ ಮಾನವ ಸಂಪ‍ನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ಕ್ಕೆ ₹ 500 ಕೋಟಿ ನೀಡಲಾಗುವುದು ಎಂದು ಹೇಳಿದ್ದರೂ ಸಹ ‘ಮುಂಬರುವ ವರ್ಷಗಳಲ್ಲಿ’ ಎಂದು ಉಲ್ಲೇಖಿಸಿ ಗೊಂದಲ ಹುಟ್ಟುಹಾಕಲಾಗಿದೆ.

ಕಲ್ಯಾಣ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ‘ಕಲ್ಯಾಣ ಕರ್ನಾಟಕ ಮಾನವ ಸಂಪ‍ನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘ’ವನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ‘ಈ ಸಂಘದ ಮಾನವ ಸಂಪನ್ಮೂಲ ಅಭಿವೃದ್ಧಿ ಚಟುವಟಿಕೆಗಳನ್ನು ಮುಂಬರುವ ವರ್ಷಗಳಲ್ಲಿ ₹ 500 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುವುದು’ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ₹500 ಕೋಟಿ ಅನುದಾನ ಇದೇ ಬಜೆಟ್‌ನಲ್ಲಿ ಮೀಸಲಿಡುತ್ತಾರೋ ಅಥವಾ ಅಲ್ಪಸ್ವಲ್ಪ ಹಣ ಕೊಡುತ್ತಾರೋ ಎಂಬ ಜಿಜ್ಞಾಸೆಗೂ ಇದು ಕಾರಣವಾಗಿದೆ.

ಇನ್ನುಗುಲಬರ್ಗಾ ವಿಶ್ವವಿದ್ಯಾಲಯ ವಿಭಜಿಸಿ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಿರುವ ಅನುದಾನದ ಬಗ್ಗೆ ಪ್ರಸ್ತಾಪಿಸಿಲ್ಲ.ರಾಯಚೂರಿನಲ್ಲಿ ಐಐಐಟಿ ಕಟ್ಟಡ ನಿರ್ಮಾಣಕ್ಕೆ ಅಂದಾಜು ₹ 165 ಕೋಟಿ ಅಗತ್ಯವಿದ್ದು, ಅದರಲ್ಲಿ ಶೇ 50ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಿದೆ. ಇದರ ಬಗ್ಗೆಯೂ ಉಲ್ಲೇಖವಿಲ್ಲ.

ADVERTISEMENT

ಕೆಎಂಎಫ್‌ ಮಾದರಿಯಲ್ಲಿ ತೊಗರಿ ಅಭಿವೃದ್ಧಿ ಮಂಡಳಿಯನ್ನು ಬಲಪಡಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಡೇರಿಲ್ಲ.ಈ ಭಾಗದ ಕೆರೆ ತುಂಬುವ ಯೋಜನೆಗಳು, ಶುದ್ಧ ಕುಡಿಯುವ ನೀರಿನ ಯೋಜನೆಗಳಿಗೆ ಆದ್ಯತೆ ಸಿಕ್ಕಿಲ್ಲ. ಕಲಬುರ್ಗಿ ಕಿರು ಮೃಗಾಲಯದ ಅಭಿವೃದ್ಧಿಗೆ ಆದ್ಯತೆ ಸಿಕ್ಕಿಲ್ಲ. ಯಾದಗಿರಿ ಜಿಲ್ಲೆಯ ಬೋನಾಳ ಕೆರೆ ಪ್ರದೇಶದಲ್ಲಿ ರಾಜ್ಯದ ದೊಡ್ಡ ಪಕ್ಷಿಧಾಮ ಅಭಿವೃದ್ಧಿ ಪಡಿಸುವ ಯೋಜನೆಗೂ ಅನುದಾನ ಒದಗಿಸಿದ ಬಗ್ಗೆ ಪ್ರಸ್ತಾವ ಇಲ್ಲ.

ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದಕೊರತೆ ನೀಗಿಸಲು ನವಲೆ ಹತ್ತಿರ ಸಮತೋಲನ ಜಲಾಶಯ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಲಾಗುವುದು ಎಂದು ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿಯೂ ಹೇಳಲಾಗಿತ್ತು. ಅದನ್ನೇ ಈ ಬಜೆಟ್‌ನಲ್ಲಿಯೂ ಹೇಳಲಾಗಿದೆ. ಯೋಜನಾ ವರದಿ ತಯಾರಿಕೆಗೆ ಈ ಬಾರಿ ₹ 20 ಕೋಟಿ ಮೀಸಲಿಟ್ಟಿದ್ದಾರೆ.ರಾಯಚೂರು, ಯಾದಗಿರಿ, ಕಲಬುರ್ಗಿಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಗೆ ತಿಂಥಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣಕ್ಕೆ ಯೋಜನಾ ವರದಿ ತಯಾರಿಕೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಯೋಜನೆ ಅನುಷ್ಠಾನಗೊಂಡರೆ ನೀರಿನ ಕೊರತೆ ಸ್ವಲ್ಪ ಮಟ್ಟಿಗೆ ನೀಗಬಹುದಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ, ಯುವತಿಯರಿಗೆ ವಾಹನ ಚಾಲನಾ ತರಬೇತಿ ನೀಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಮೂಲಕ ಬೆಳಗಾವಿ ಮತ್ತು ಕಲಬುರ್ಗಿ ವಿಭಾಗದಲ್ಲಿ ವ್ಯವಸ್ಥೆ ಮಾಡುವುದು. ದೃಷ್ಟಿದೋಷವುಳ್ಳ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ಕಲಬುರ್ಗಿಯಲ್ಲಿ ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪಿಸುವುದು ಈ ವರ್ಗದವರಿಗೆ ಅನುಕೂಲಕರ.

ರಾಯಚೂರು, ಬಳ್ಳಾರಿ ಹಾಗೂ ಯರಮರಸ್‌ ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಈ ವರ್ಷ ₹ 500 ಕೋಟಿ ಮೀಸಲಿಟ್ಟಿರುವುದು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಹಾಯವಾಗಲಿದೆ.

‘ಬಸವಣ್ಣನಿಗೆ ನ್ಯಾಯ’

ಬೀದರ್‌ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವ ₹ 500 ಕೋಟಿ ಮೊತ್ತದ ಯೋಜನೆಗೆ ಅಸ್ತು ಎಂದಿರುವ ಸಿಎಂ, ಈ ವರ್ಷ ಇದಕ್ಕೆ ₹ 100 ಕೋಟಿ ಮೀಸಲಿಟ್ಟಿದ್ದಾರೆ.

ಈ ಭಾಗದಿಂದ ಪ್ರವಾಸಿಗರು ತೆರಳುವ ಮಹಾರಾಷ್ಟ್ರದ ತುಳಜಾಪುರ, ಪಂಢರಪುರ, ಆಂಧ್ರದ ಶ್ರೀಶೈಲಗಳಲ್ಲಿ ಭಕ್ತಿ ನಿವಾಸ ನಿರ್ಮಿಸುವುದು ಹಾಗೂ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ₹ 20 ಕೋಟಿ ಮೀಸಲಿಟ್ಟಿರುವುದು ಆಯಾ ಸಮುದಾಯಗಳಿಗೆ ಖುಷಿ ತಂದಿದೆ.

ಪ್ರತ್ಯೇಕ ಸಚಿವಾಲಯವೂ ಇಲ್ಲ

371 (ಜೆ) ಪರಿಣಾಮಕಾರಿ ಅನುಷ್ಠಾನ ಹಾಗೂ ಮೀಸಲಾತಿ ಗೊಂದಲ ನಿವಾರಣೆಗಾಗಿಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದರು. ಆದರೆ, ಬಜೆಟ್‌ನಲ್ಲಿ ಆ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.

ನ್ಯಾಯಕೊಡುವ ಕೆಲಸ ಮಾಡುವೆ

ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದಂತೆ ಕಲ್ಯಾಣ ಕರ್ನಾಟಕ ಮಾನವ ಸಂಪ‍ನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಅನುದಾನ ಘೋಷಿಸಿದ್ದಾರೆ. ನನ್ನ ಮೇಲೆ ವಿಶ್ವಾಸವಿಟ್ಟು ಈ ಸಂಘದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಬೇಗ ನಮ್ಮ ಸಂಘ ಕಾರ್ಯಾರಂಭ ಮಾಡಲಿದೆ. ಈ ಭಾಗಕ್ಕೆ ನ್ಯಾಯಕೊಡುವ ಕೆಲಸವನ್ನು ನಾನು ಮಾಡುತ್ತೇನೆ.

–ಬಸವರಾಜ ಪಾಟೀಲ ಸೇಡಂ, ಸಂಘದ ಅಧ್ಯಕ್ಷ

ಕಲ್ಯಾಣ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ

ಕಲ್ಯಾಣ ಕರ್ನಾಟಕಕ್ಕೆ ಯಾವ ಕೊಡುಗೆ ಇಲ್ಲ. ಬಸವರಾಜ ಪಾಟೀಲ ಸೇಡಂ ಅವರನ್ನು ಅಧ್ಯಕ್ಷರನ್ನಾಗಿಸಿರುವ ಸಂಘಕ್ಕೆ ‘ಮುಂಬರುವ ವರ್ಷಗಳಲ್ಲಿ ₹500 ಕೋಟಿ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಈ ಸಂಘದ ಉದ್ದೇಶ ಏನು? ಕಾನೂನು ಪ್ರಕಾರ ಸಂಘದ ಚಟುವಟಿಕೆಗಳ ಅನುಷ್ಠಾನ ಸಾಧ್ಯವೇ ಎಂಬ ಪ್ರಶ್ನೆಗಳೂ ಇವೆ. ತೊಗರಿ ಖರೀದಿ ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ. ₹30 ಲಕ್ಷದಲ್ಲಿ ಕಲಬುರ್ಗಿಯಲ್ಲಿಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪಿಸುವುದಾಗಿ ಹೇಳಿದ್ದಾರೆ. ಅಷ್ಟು ಹಣದಲ್ಲಿ ಸಮುದಾಯ ಭವನ ನಿರ್ಮಾಣವೂ ಅಸಾಧ್ಯ.

–ಪ್ರಿಯಾಂಕ್‌ ಖರ್ಗೆ, ಚಿತ್ತಾಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.