ನವದಹಲಿ: ಬಜೆಟ್ ಭಾಷಣದುದ್ದಕ್ಕೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಾಯಿಯಿಂದ ನಿರುದ್ಯೋಗ ಮತ್ತು ಹಣದುಬ್ಬರ ಎಂದ ಪದಗಳನ್ನೇ ಕೇಳಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ತರೂರ್, ‘ಬಿಹಾರ ಮತ್ತು ದೆಹಲಿ ಮತದಾರರನ್ನು ಕೇಂದ್ರೀಕರಿಸಿದ ಬಜೆಟ್ ಇದಾಗಿದ್ದು, ದೂರದೃಷ್ಟಿಯಿಂದ ಕೂಡಿಲ್ಲ ಎಂದು ಹೇಳಿದ್ದಾರೆ.
‘ಬಿಹಾರಕ್ಕೆ ಹೆಚ್ಚಿನ ಯೋಜನೆಗಳನ್ನು ಘೋಷಿಸಿರುವುದರಿಂದ ನಿಮಗೆ(ಬಿಜೆಪಿಗೆ) ಹೆಚ್ಚು ವೋಟ್ ಸಿಗಬಹುದು. ಆದರೆ, ಇಂತಹ ಅಲ್ಪಾವಧಿಯ ಚಿಂತನೆಗಳು ಈಗ ಬೇಕಿಲ್ಲ. ಮುಳುಗುತ್ತಿರುವ ವ್ಯವಸ್ಥೆಯಿಂದ ದೇಶವನ್ನು ಹೊರತರಲು ಹೆಚ್ಚು ದೂರದೃಷ್ಟಿಯುಳ್ಳ ಯೋಜನೆಗಳು ಬೇಕಿವೆ’ ಎಂದು ಹೇಳಿದ್ದಾರೆ.
‘ಒಂದು ದೇಶ, ಒಂದು ಚುನಾವಣೆ’ಗೆ ಬಗ್ಗೆ ಮಾತನಾಡುವ ಪಕ್ಷ, ದೆಹಲಿ ಮತ್ತು ಬಿಹಾರದ ಮತದಾರರನ್ನು ಕೇಂದ್ರೀಕರಿಸಿ ಬಜೆಟ್ ಮಂಡಿಸಿದೆ. ‘ಈ ಸಮಯದಲ್ಲಿ ಚುನಾವಣೆ ಬಂದಿದ್ದರೆ ನಮಗೂ ಹೆಚ್ಚಿನ ಕೊಡುಗೆಗಳು ಸಿಗುತ್ತಿತ್ತು’ ಎಂದು ಆಂಧ್ರಪ್ರದೇಶದ ಜನರು ಯೋಚಿಸುತ್ತಿರಬಹುದು ಎಂದಿದ್ದಾರೆ.
ಹೊಸ ತೆರಿಗೆ ಪದ್ಧತಿ ಅನ್ವಯ 12 ಲಕ್ಷದವೆರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನೀವು ಉದ್ಯೋಗಿಯಾಗಿದ್ದು, 12 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಗಳಿಸುತ್ತಿದ್ದರೆ ಇದರಿಂದ ನಿಮಗೆ ಸಂತೋಷವಾಗುತ್ತದೆ. ನಿಮಗೆ ಉದ್ಯೋಗವಿಲ್ಲದಿದ್ದರೆ, ಉದ್ಯೋಗ ಎಲ್ಲಿಂದ ಬರಲಿದೆ ಎಂಬುವುದನ್ನು ಈ ಬಜೆಟ್ ಸ್ಪಷ್ಟಪಡಿಸಿಲ್ಲ’ ಎಂದಿದ್ದಾರೆ.
‘ಆರ್ಥಿಕತೆ ಎದುರಿಸುತ್ತಿರುವ ಪ್ರಮುಖ ಸವಾಲುಗಳು ಯಾವುವು? ನಮ್ಮ ದೇಶದಲ್ಲಿ ನಿರುದ್ಯೋಗ ಅತಿದೊಡ್ಡ ಸಮಸ್ಯೆಯಾಗಿದೆ. ಉದ್ಯೋಗವಿಲ್ಲದ ಯುವಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿದೆ. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ಸ್ಪಷ್ಟಪಡಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.