ನಿರ್ಮಲಾ ಸೀತಾರಾಮನ್
(ಪಿಟಿಐ ಚಿತ್ರ)
ಮಂಗಳೂರು: ಕೇಂದ್ರದ 2024–25ನೇ ಸಾಲಿನ ಮಧ್ಯಂತರ ಬಜೆಟ್‌ನಲ್ಲಿ ರಾಜ್ಯದ ಕರಾವಳಿ ಭಾಗಕ್ಕೆ ಆದ್ಯತೆ ನೀಡುವ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಬಜೆಟ್‌ನಲ್ಲಿ ಘೋಷಿಸಿರುವ ಕೆಲವು ಯೋಜನೆಗಳ ಬಗ್ಗೆ ಮೆಚ್ಚುಗೆ ಸೂಚಿಸಿರುವ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಸಿಸಿಐ), ‘ನಮ್ಮ ಪ್ರದೇಶದಲ್ಲಿ ಸಕಾರಾತ್ಮಕ ಪರಿಣಾಮ ಬೀರುವಂತಹ ಮಹತ್ತರ ಪ್ರಸ್ತಾವಗಳು ಈ ಬಜೆಟ್‌ನಲ್ಲಿ ಇಲ್ಲ’ ಎಂಬುದನ್ನೂ ಬೊಟ್ಟು ಮಾಡಿದೆ.
ಬಡವರು, ಮಹಿಳೆಯರು, ಯುವಜನರು ಹಾಗೂ ಕೃಷಿಕರಿಗೆ ಆದ್ಯತೆ ನೀಡಲಾಗಿದೆ. ಬಂಡವಾಳ ವೆಚ್ಚಕ್ಕೆ ಒಟ್ಟು ಆಂತರಿಕ ಉತ್ಪನ್ನದ ಶೇ 3.4ರಷ್ಟು ಮೊತ್ತವನ್ನು ಕಾಯ್ದಿರಿಸಲಾಗಿದ್ದು ಹಾಗೂ ವಿತ್ತೀಯ ಕೊರತೆಯನ್ನು ಶೇ 5.1ರಿಂದ ಶೇ 4.9ಕ್ಕೆ ಇಳಿಸುವ ಗುರಿ ಹೊಂದಿರುವುದು ಸ್ವಾಗತಾರ್ಹ ಎಂದು ಕೆಸಿಸಿಐ ಅಧ್ಯಕ್ಷ ಅನಂತೇಶ ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೀಗಡಿ ಕೃಷಿ ಮತ್ತು ಸಂಸ್ಕರಣೆ ಹಾಗೂ ರಫ್ತಿಗೆ ನಬಾರ್ಡ್ ಮೂಲಕ ಆರ್ಥಿಕ ನೆರವು ಒದಗಿಸುವ ಕಾರ್ಯಕ್ರಮ ಇಲ್ಲಿನವರಿಗೂ ಪ್ರಯೋಜನವಾಗಲಿದೆ. ಸೀಗಡಿ ಆಹಾರ ಮತ್ತು ಮೀನು ಆಹಾರಗಳ ಮೇಲೆ ಮೂಲ ಕಸ್ಟಮ್ಸ್ ತೆರಿಗೆ ಕಡಿತದಿಂದ ಈ ಭಾಗದ ಕೆಲವು ಸಮುದ್ರದ ಉತ್ಪನ್ನಗಳನ್ನು ಆಧರಿಸಿದ ಆಹಾರ ಕೈಗಾರಿಕೆಗಳಿಗೆ ನೆರವಾಗಲಿದೆ.
‘ಉದ್ಯೋಗ ಮತ್ತು ಕೌಶಲಕ್ಕೆ ಸಂಬಂಧಿಸಿದ ಉತ್ತೇಜನಾ ಕ್ರಮಗಳಿಂದಾಗಿ ಉದ್ಯಮಿಗಳು ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದು ಸಾಧ್ಯವಾಗಲಿದೆ. ಹೆಚ್ಚುವರಿ ಐಟಿಐಗಳ ಸ್ಥಾಪನೆ, ಮಹಿಳಾ ಸಬಲೀಕರಣಕ್ಕೆ ₹ 3 ಲಕ್ಷ ಕಾಯ್ದಿರಿಸಿರುವುದೂ, ಎಮೆಸ್‌ಎಂಇಗಳಿಗೆ ಸಾಲ ನೀಡಲು ಹೊಸ ಹಣಕಾಸು ಸಂಸ್ಥೆಗಳಿಂದ ಮೌಲ್ಯಮಾಪನ ಮಾದರಿ ರೂಪಿಸುತ್ತಿರುವುದು, ಮುದ್ರಾ ಯೋಜನೆಯಡಿ ಸಾಲದ ಪ್ರಮಾಣವನ್ನು ₹ 10 ಲಕ್ಷದಿಂದ ₹ 20 ಲಕ್ಷಕ್ಕೆ ಹೆಚ್ಚಿಸಿರುವುದು ಕೈಗಾರಿಕಾ ವಲಯಕ್ಕೆ ನೆರವಾಗಲಿದೆ ಎಂದು ಕೆಸಿಸಿಐ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಕಾರ್ಯಕ್ರಮದಡಿ ದೇಶದಾದ್ಯಂತ 12 ಹೆಚ್ಚುವರಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವಾಗ ನಮ್ಮ ಪ್ರದೇಶವನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದೆ.
ವಿವಾದದಿಂದ ವಿಶ್ವಾಸದತ್ತ ಕಾರ್ಯಕ್ರಮವನ್ನು ಆರಂಭಿಸಿರುವುದು ಆದಾಯ ತೆರಿಗೆ ಮತ್ತು ನಿರ್ದಿಷ್ಟ ಪ್ರಕರಣಗಳನ್ನು ಮರುಪರಿಗಣಿಸುವುದಕ್ಕೆ ಇದ್ದ ಕಾಲಮಿತಿಯನ್ನು 10ವರ್ಷಗಳಿಂದ 5 ವರ್ಷಗಳಿಗೆ ಉಳಿಸಿರುವುದೂ ಒಳ್ಳೆಯ ನಡೆ. ಇದು ಸುಗಮ ವಹಿವಾಟು ನಡೆಸುವುದಕ್ಕೆ ಪೂರಕವಾಗಿದೆ ಎಂದು ಕೆಸಿಸಿಐ ಅಭಿಪ್ರಾಯಪಟ್ಟಿದೆ.
ಬಜೆಟ್ ಪ್ರತಿಕ್ರಿಯೆಗಳು...
‘ನವಯುಗ-ನವಪಥ'ಕ್ಕೆ ಪೂರಕ’
ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಾನು ಹಾಕಿಕೊಂಡಿರುವ ‘ನವಯುಗ-ನವಪಥ’ ಕಾರ್ಯಸೂಚಿಗೆ ಮುನ್ನುಡಿಯಂತಿರುವ ಈ ಬಜೆಟ್ ವಿಕಸಿತ ಭಾರತಕ್ಕೆ ದಾರಿದೀಪವಾಗಲಿದೆ. ಮೋದಿ 3.0 ಸರ್ಕಾರದ ಸಂಕಲ್ಪ ಪತ್ರದ ಎಲ್ಲಾ ಭರವಸೆಗಳನ್ನು ಪೂರ್ಣಗೊಳಿಸಲು ಇಟ್ಟಿರುವ ಮೊದಲ ಹೆಜ್ಜೆ ಇದು. ಕೇಂದ್ರ ಬಜೆಟ್‌ನ ಒಂಬತ್ತು ಆದ್ಯತೆಗಳು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಾನು ಹಾಕಿಕೊಂಡಿರುವ ಕಾರ್ಯಸೂಚಿ ‘ನವಯುಗ-ನವಪಥ'ಕ್ಕೆ ಪೂರಕವಾಗಲಿವೆ.
ನವೋದ್ಯಮ ಮತ್ತು ನಾವಿನ್ಯತೆ ಪರಿಸರ ವ್ಯವಸ್ಥೆಯತ್ತ ಗಮನ ಕೇಂದ್ರೀಕರಿಸುವುದು, ಎಂಎಸ್‌ಎಂಇ ಮತ್ತು ಉತ್ಪಾದನ ವಲಯಕ್ಕೆ ಬೆಂಬಲಿಸುವ ಮೂಲಕ ಹೆಚ್ಚುವರಿ ಉದ್ಯೋಗ ಸೃಷ್ಟಿಗೆ ನೆರವಾಗುವುದು, ನಗರಗಳನ್ನು ಬೆಳವಣಿಗೆಯ ಕೇಂದ್ರಗಳನ್ನಾಗಿಸುವ ಕಾರ್ಯಕ್ರಮಗಳ ಮೂಲಕ ಈ ಬಜೆಟ್ ಹೊಸ ದಾರಿಯನ್ನು ತೆರೆದಿದೆ. ಯುವಕರಿಗೆ ಮತ್ತು ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಶೈಕ್ಷಣಿಕ ಸಾಲಗಳು, ಸೀಗಡಿ ಕೃಷಿ ಮತ್ತು ಸಂಸ್ಕರಣೆಗೆ ಬೆಂಬಲ, ತರಕಾರಿ ಉತ್ಪಾದನಾ ಕ್ಲಸ್ಟರ್, ಮುದ್ರಾ ಸಾಲ ಮಿತಿಯನ್ನು ₹ 20 ಲಕ್ಷಕ್ಕೆ ಹೆಚ್ಚಿಸಿರುವುದು, ಕೈಗಾರಿಕಾ ಪಾರ್ಕ್ ಅಭಿವೃದ್ಧಿಯ ಪ್ರಯತ್ನಗಳು ನಮ್ಮ ಜಿಲ್ಲೆಗೂ ಪ್ರಯೋಜನಕಾರಿ
-ಕ್ಯಾ.ಬ್ರಿಜೇಶ್ ಚೌಟ, ಸಂಸದ, ದಕ್ಷಿಣ ಕನ್ನಡ
‘ರಾಷ್ಟ್ರದ ಭವಿಷ್ಯಕ್ಕೆ ಉತ್ತಮ ಅಡಿಪಾಯ’
ಪ್ರಗತಿದಾಯಕ ಬಜೆಟ್ ರಾಷ್ಟ್ರದ ಭವಿಷ್ಯಕ್ಕೆ ಉತ್ತಮ ಅಡಿಪಾಯವಾಗಲಿದೆ. ಒಂಬತ್ತು ಆದ್ಯತಾ ಕ್ಷೇತ್ರಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದ ವಿಕಸಿತ ಭಾರತದ ನಿರ್ಮಾಣಕ್ಕೆ ಶಕ್ತಿ ತುಂಬಲಾಗಿದೆ. 400 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸಮೀಕ್ಷೆ, ಕ್ಯಾನ್ಸರ್ ಔಷಧದಳ ದರ ಇಳಿಕೆ, ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತ ಸಾಲ ನೀಡುವ ಘೋಷಣೆಗಳನ್ನು ಒಳಗೊಂಡ ಈ ಬಜೆಟ್ ಸರ್ವಸ್ಪರ್ಶಿಯಾಗಿದೆ. ತೆರಿಗೆದಾರನಿಗೆ ಯಾವುದೇ ರೀತಿಯಲ್ಲೂ ಹೊರೆಯಾಗದಂತೆ ಎಚ್ಚರವಹಿಸಿರುವುದು ಪ್ರಶಂಸನೀಯ.
-ಡಿ.ವೇದವ್ಯಾಸ ಕಾಮತ್, ಶಾಸಕ
‘ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ’
ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಚೊಂಬು ನೀಡಿದೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವ ಪ್ರಸ್ತಾವ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ. ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್ ಹೊಂದಿಲ್ಲ.
-ಮಂಜುನಾಥ ಭಂಡಾರಿ, ವಿಧಾನ ಪರಿಷತ್ ಸದಸ್ಯ
‘ತಾರತಮ್ಯದಿಂದ ಕೂಡಿದ ಬಜೆಟ್’
ಪ್ರಜಾಪ್ರಭುತ್ವ ವಿರೋಧಿ ಹಾಗೂ ತಾರತಮ್ಯದಿಂದ ಕೂಡಿದ ಬಜೆಟ್ ಇದಾಗಿದೆ. ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಆಡಳಿತವಿರುವ ರಾಜ್ಯಗಳಿಗೆ ಮಾತ್ರ ನೆರವು ನೀಡಲಾಗಿದೆ. ಇಂಡಿಯಾ ಒಕ್ಕೂಟದ ಪ್ರಭಾವವಿರುವ ರಾಜ್ಯಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿಲ್ಲ. ಎನ್‌ಡಿಎ ರಾಜಕೀಯ ಸಲುವಾಗಿ ಬಜೆಟ್ ಮಂಡಿಸಿದೆ. ಒಟ್ಟಾರೆ ರಾಜಕೀಯ ಕಸರತ್ತಿನ ಬಜೆಟ್.
-ಕೆ.ಹರೀಶ್ ಕುಮಾರ್, ಅಧ್ಯಕ್ಷರು, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ
‘ಬಿಜೆಪಿಯನ್ನು 30 ವರ್ಷ ಗೆಲ್ಲಿಸಿದ ಜಿಲ್ಲೆಗೆ ಏನೂ ಇಲ್ಲ’
ಇದು ದೇಶದ ಬಜೆಟ್ ಎಂದು ಅನಿಸುತ್ತಿಲ್ಲ. ಮೋದಿ ಸರ್ಕಾರ ತನ್ನ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಬಿಹಾರ, ಆಂಧ್ರಪ್ರದೇಶಕ್ಕೆ ಬಜೆಟ್‌ನಲ್ಲಿ ಸಿಂಹಪಾಲು ಕೊಟ್ಟಿದೆ. ರಾಜ್ಯವನ್ನು ಯಾರೂ ಕಡೆಗಣಿಸಿರಲಿಲ್ಲ.
ನನೆಗುದಿಗೆ ಬಿದ್ದಿರುವ ರಾಜ್ಯದ ಹಲವು ನೀರಾವರಿ ಯೋಜನೆ ಮತ್ತು ರೈಲ್ವೆ ಯೋಜನೆಗಳ ಪೈಕಿ ಯಾವುದೇ ಯೋಜನೆಗಳಿಗೂ ನಯಾಪೈಸೆ ಅನುದಾನ ಕೊಟ್ಟಿಲ್ಲ. ರಾಜ್ಯಕ್ಕೆ ಒಂದೇ ಒಂದು ಹೊಸ ಯೋಜನೆ ಘೋಷಿಸಿಲ್ಲ. ಬಿಜೆಪಿಯನ್ನು ಸತತ ಮೂರು ದಶಕಗಳಿಂದ ಗೆಲ್ಲಿಸುತ್ತಿರುವ ಕರಾವಳಿಗೂ ಈ ಬಜೆಟ್‌ನಲ್ಲಿ ದ್ರೋಹ ಆಗಿದೆ. ಮಂಗಳೂರನ್ನು ಪ್ರತ್ಯೇಕ ರೈಲ್ವೆ ವಿಭಾಗ ಮಾಡುತ್ತಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಮಂಗಳೂರಿನ ರೈಲ್ವೇ ಜಾಲವನ್ನು ನೈಋತ್ಯ ರೈಲ್ವೆಗೆ ಸೇರಿಸಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ. ನಿಸ್ಸಂಶಯವಾಗಿ ಈ ಬಜೆಟ್ ಕರ್ನಾಟಕಕ್ಕೆ ಮಹಾ ದ್ರೋಹ ಎಸಗಿದ ಬಜೆಟ್ ಎಂದು ಇತಿಹಾಸದಲ್ಲಿ ದಾಖಲಾಗಲಿದೆ.
-ಬಿ.ರಮಾನಾಥ ರೈ, ಕೆಪಿಸಿಸಿ ಉಪಾಧ್ಯಕ್ಷ
‘ಕರ್ನಾಟಕಕ್ಕೆ ಮಲತಾಯಿ ಧೋರಣೆ’
ಸರ್ಕಾರವನ್ನು ರಕ್ಷಿಸಲು ಹಾಗೂ ಮಿತ್ರ ಪಕ್ಷಗಳನ್ನು ಓಲೈಸಲು ನಿರ್ಮಲಾ ಸೀತಾರಾಮನ್ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಕರ್ನಾಟಕಕ್ಕೆ ಎಂದಿನಂತೆ ಕೇಂದ್ರ ಬಿಜೆಪಿ ಸರ್ಕಾರ ಮಲತಾಯಿ ಧೋರಣೆ ಮುಂದುವರಿದಿದೆ. ವಿಶೇಷವಾಗಿ ಕಾಂಗ್ರೆಸ್ ಆಡಳಿತದಲ್ಲಿರುವ ರಾಜ್ಯಗಳಿಗೆ ಅನ್ಯಾಯವಾಗಿದೆ. ರೈತ ವರ್ಗ, ಬಡ ವರ್ಗಕ್ಕೆ ಯಾವುದೂ ಪ್ರಯೋಜನ ಆಗಿಲ್ಲ, ರೈತರಿಗೆ ಕನಿಷ್ಟ ಬೆಂಬಲ ಬೆಲೆ ಕೊಟ್ಟಿಲ್ಲ. ಮೀನುಗಾರರಿಗೂ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನೀಡಿಲ್ಲ
-ಪದ್ಮರಾಜ್ ಆರ್. ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.