ADVERTISEMENT

ಬಂಡವಾಳ ಮಾರುಕಟ್ಟೆ: ನಿಶ್ಚಿಂತೆಯ ನಿವೃತ್ತಿಗೆ ಹಣ ಉಳಿಸಿ

ಅವಿನಾಶ್ ಕೆ.ಟಿ
Published 29 ಮಾರ್ಚ್ 2021, 1:43 IST
Last Updated 29 ಮಾರ್ಚ್ 2021, 1:43 IST
ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.   

ಮನೆ ಕಟ್ಟಬೇಕು, ಮಕ್ಕಳ ಓದಿಗೆ ಹಣ ಕೂಡಿಡಬೇಕು, ಮದುವೆ ಖರ್ಚಿಗೆ ಈಗಲೇ ತಯಾರಿ ಮಾಡಿಕೊಳ್ಳಬೇಕು, ಮಗಳಿಗೊಂದು ಹೊಸ ಕಾರು ತಗೋಬೇಕು... ಹೀಗೆ ಜೀವನಪೂರ್ತಿ ಪ್ರೀತಿ ಪಾತ್ರರ ಏಳ್ಗೆಗೆ ಯೋಜನೆ ರೂಪಿಸುವ ಮನೆಯ ಹಿರಿಯರು ತಮ್ಮ ನಿವೃತ್ತಿ ಬದುಕಿಗಾಗಿ ಹಣ ಉಳಿಸುವುದನ್ನು ಕಡೆಗಣಿಸುತ್ತಾರೆ. ನಿವೃತ್ತಿ ಯೋಜನೆ ಯಾವಾಗ ಆರಂಭಿಸಬೇಕು, ನಿವೃತ್ತಿಗೆ ಎಷ್ಟು ಹಣ ಬೇಕು ಎನ್ನುವುದರ ಅಂದಾಜು ಕೂಡ ಅವರಿಗಿರುವುದಿಲ್ಲ. ನೆಮ್ಮದಿಯ ನಿವೃತ್ತಿಗಾಗಿ ಪ್ರತಿಯೊಬ್ಬರೂ ಹೇಗೆ ತಯಾರಾಗಬೇಕು ಎನ್ನುವ ಮಾಹಿತಿ ಇಲ್ಲಿದೆ.

ಇರುವೆ–ಮಿಡತೆಯ ಕಥೆ ಮತ್ತು ಹಣಕಾಸು ಪಾಠ: ಇರುವೆ ಮತ್ತು ಮಿಡತೆಯ ಕಥೆಯನ್ನು ನೀವು ಕೇಳಿರಬಹುದು. ಈ ದೃಷ್ಟಾಂತದಲ್ಲಿ ಹಣಕಾಸು ನಿರ್ವಹಣೆಯ ಪಾಠವೊಂದಿದೆ. ವಸಂತ ಕಾಲದಲ್ಲಿ ಸ್ವಲ್ಪವೂ ಸಮಯ ವ್ಯರ್ಥ ಮಾಡದೆ ಇರುವೆಯು ಹಗಲಿರುಳು ಬೆವರು ಸುರಿಸಿ ಚಳಿಗಾಲಕ್ಕೆಂದು ಆಹಾರವನ್ನು ಸಂಗ್ರಹಿಸುತ್ತಿದ್ದರೆ ಇತ್ತ ಮಿಡತೆಯು ನಾಳೆಯ ಚಿಂತೆ ಕಿಂಚಿತ್ತೂ ಇಲ್ಲದೆ ಸಮಯ ವ್ಯರ್ಥ ಮಾಡುತ್ತಿರುತ್ತದೆ. ಅಷ್ಟರಲ್ಲಿ ಚಳಿಗಾಲ ಶುರುವಾಗುತ್ತದೆ. ಮಿಡತೆ ನೋಡುತ್ತದೆ, ಅದರ ಕಣಜ ಖಾಲಿ! ‌

ಮಿಡತೆ ಇರುವೆಯ ಬಳಿಗೆ ಹೋಗಿ ಆಹಾರ ಬೇಡುತ್ತದೆ. ‘ಇಡೀ ವಸಂತ ಕಾಲ ಏನು ಮಾಡಿದೆ ಗೆಳೆಯಾ’ ಎಂದು ಇರುವೆ ಕೇಳುತ್ತದೆ. ‘ಮನಸಾರೆ ಹಾಡಿದೆ, ಕುಣಿದೆ, ಸಂತೋಷಪಟ್ಟೆ’ ಎಂದು ಮಿಡತೆ ಹೇಳುತ್ತದೆ. ‘ಹೋಗ್ಹೋಗು, ಅದನ್ನೇ ಮುಂದುವರಿಸು’ ಎಂದು ಇರುವೆ ಪ್ರತಿಕ್ರಿಯಿಸುತ್ತದೆ. ಕಷ್ಟಪಟ್ಟು ಉಳಿತಾಯ ಮಾಡಿದ ಇರುವೆ ಚಳಿಗಾಲದಲ್ಲಿ ನೆಮ್ಮದಿಯ ಜೀವನ ನಡೆಸುತ್ತದೆ. ಮೋಜು–ಮಸ್ತಿ ಮಾಡಿದ ಮಿಡತೆ ಆಹಾರ ಸಿಗದೆ ಚಳಿಗೆ ಮರಗಟ್ಟಿ ಸಾಯುತ್ತದೆ. ಭವಿಷ್ಯದ ಖರ್ಚುಗಳಿಗೆ ನಾವು ಈಗಲೇ ಉಳಿತಾಯ ಮಾಡಬೇಕು ಎನ್ನುವ ಪಾಠವನ್ನು ಈ ದೃಷ್ಟಾಂತ ಹೇಳುತ್ತದೆ.

ADVERTISEMENT

ನಿವೃತ್ತಿಗೆ ಯಾವಾಗ ಯೋಜನೆ ರೂಪಿಸಬೇಕು?: ಕೆಲಸದಿಂದ ನಿವೃತ್ತಿಯಾಗುವುದು 60 ವರ್ಷ ವಯಸ್ಸಿಗೆ. 40–45 ವರ್ಷದ ವೇಳೆಗೆ ನಿವೃತ್ತಿ ಯೋಜನೆ ರೂಪಿಸಿದರೆ ಸಾಕು ಎಂಬ ಲೆಕ್ಕಾಚಾರ ಬಹುತೇಕರಲ್ಲಿದೆ. ಆದರೆ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ, ನಿವೃತ್ತಿಗಾಗಿ ಉಳಿತಾಯ ಮಾಡಲು ಶುರು ಮಾಡಬೇಕು. ಮೊದಲ ವೇತನ ಸಿಕ್ಕ ದಿನದಿಂದಲೇ ನಿವೃತ್ತಿ ಯೋಜನೆಗೆ ಹೂಡಿಕೆ ಆರಂಭಿಸಿದರೆ ಒಳಿತು. ಬೇಗ ಹೂಡಿಕೆ ಮಾಡಿದರೆ ಬಡ್ಡಿಯ ಮೇಲೆ ಬಡ್ಡಿ ಬೆಳೆದು (ಪವರ್ ಆಫ್ ಕಾಂಪೌಂಡಿಂಗ್) ಅದರ ಲಾಭ ನಿಮಗೆ ದಕ್ಕುತ್ತದೆ.

ನಿಮಗಿದು ಗೊತ್ತಿರಲಿ: ಭಾರತೀಯರ ಸರಾಸರಿ ಜೀವಿತಾವಧಿ ಸುಮಾರು 70 ವರ್ಷಗಳಷ್ಟಿರುವ ಕಾರಣ ನಿವೃತ್ತಿ ಯೋಜನೆ ಅತ್ಯಗತ್ಯ. ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ವ್ಯವಸ್ಥಿತವಾಗಿ ಹೂಡಿಕೆ ಮಾಡಿದರೆ ನೆಮ್ಮದಿಯ ನಿವೃತ್ತಿಯ ಜೀವನ ಸಾಧ್ಯ. ನಿವೃತ್ತಿ ಉದ್ದೇಶಕ್ಕೆ ಮಾಡುವ ಹೂಡಿಕೆಯನ್ನು ಮಕ್ಕಳ ಶಿಕ್ಷಣ, ಮದುವೆಯಂತಹ ಅನ್ಯ ಉದ್ದೇಶಕ್ಕೆ ಬಳಸಬಾರದು. ಹಣದುಬ್ಬರವನ್ನು ಮೀರಿ ನಿಲ್ಲುವ ಹೂಡಿಕೆಗಳಲ್ಲಿ ನಿವೃತ್ತಿಗಾಗಿ ಉಳಿತಾಯ ಮಾಡಬೇಕು.

ಮೇಲಿನ ಪಟ್ಟಿಯಲ್ಲಿ ಹೇಳಿದಂತೆ ವ್ಯಕ್ತಿಯ ಈಗಿನ ವಯಸ್ಸು 28 ವರ್ಷ. ಮಾಸಿಕವಾಗಿ ಸದ್ಯ ₹ 30 ಸಾವಿರ ಖರ್ಚು ಮಾಡುತ್ತಿದ್ದಾರೆ ಮತ್ತು ಅವರು 50ನೇ ವಯಸ್ಸಿಗೆ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ. ನಿವೃತ್ತಿಗೆ ಇನ್ನು 22 ವರ್ಷ ಬಾಕಿ ಉಳಿದಿದೆ. ಈ ವ್ಯಕ್ತಿ ಅಂದಾಜು 75 ವರ್ಷ ಬದುಕುತ್ತಾರೆ ಎಂದು ತಿಳಿಯೋಣ. ನಿವೃತ್ತಿಯ ನಂತರದಲ್ಲೂ ಅವರ ಖರ್ಚುಗಳು ಈಗಿರುವಷ್ಟೇ, ಅಂದರೆ ಶೇ 100ರಷ್ಟು, ಇರುತ್ತವೆ ಎಂದು ಲೆಕ್ಕಚಾರ ಮಾಡೋಣ.

ಇದೇ ಅಂದಾಜಿನಲ್ಲಿ ಹೋದರೆ ನಿವೃತ್ತಿಯ ನಂತರದಲ್ಲಿ ಇವರ ತಿಂಗಳ ಖರ್ಚಿಗೆ ₹ 1,32,912 ಬೇಕಾಗುತ್ತದೆ. ಅದರಂತೆ ನಿವೃತ್ತಿ ನಂತರದ 25 ವರ್ಷಗಳ ಜೀವಿತಾವಧಿಗೆ ₹ 3,14,10,218 ಬೇಕಾಗುತ್ತದೆ. ಈ ಲೆಕ್ಕಾಚಾರ ಹೇಗೆ ಬಂತು ಎಂದು ನೀವು ಕೇಳಬಹುದು. ಶೇ 7ರ ಹಣದುಬ್ಬರವನ್ನು ಇದಕ್ಕೆ ಸೇರಿಸಲಾಗಿದೆ. ಹಣದ ಸದ್ಯದ ಮೌಲ್ಯ ಮತ್ತು ಭವಿಷ್ಯದ ಮೌಲ್ಯವನ್ನು ಗಣನೆಗೆ ತೆಗೆದುಕೊಂಡಾಗ ಮೇಲಿನ ಅಂದಾಜು ಬರುತ್ತದೆ.

ಷೇರುಪೇಟೆಯಲ್ಲಿ ಅನಿಶ್ಚಿತತೆಯ ಓಟ

ಷೇರುಪೇಟೆ ಒತ್ತಡಕ್ಕೆ ಸಿಲುಕಿದ್ದು ಸತತ ಎರಡನೆಯ ವಾರ ಸೂಚ್ಯಂಕಗಳು ಕುಸಿತ ಕಂಡಿವೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ಹಿಂಜರಿಕೆ, ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳದಿಂದ ಆರ್ಥಿಕ ಚೇತರಿಕೆಯಲ್ಲಿ ವಿಳಂಬ ಸಾಧ್ಯತೆ ಸೇರಿ ಹಲವು ಕಾರಣಗಳಿಂದಾಗಿ ಸೂಚ್ಯಂಕಗಳು ಕುಸಿದಿವೆ. 49,008 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 1.70ರಷ್ಟು ಕುಸಿದಿದ್ದರೆ, ನಿಫ್ಟಿ 14,507 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿ ಶೇ 1.6ರಷ್ಟು ಇಳಿಕೆ ದಾಖಲಿಸಿದೆ.

ವಲಯವಾರು ಪ್ರಗತಿ ನೋಡಿದಾಗ, ನಿಫ್ಟಿ ಫಾರ್ಮಾ ಮತ್ತು ಲೋಹ ವಲಯ ಹೊರತುಪಡಿಸಿ ಉಳಿದ ವಲಯಗಳು ಕುಸಿತ
ದಾಖಲಿಸಿವೆ. ಮಾಧ್ಯಮ ವಲಯ ಶೇ 6.6ರಷ್ಟು, ವಾಹನ ವಲಯ ಶೇ 4ರಷ್ಟು, ನಿಫ್ಚಿ ಎನರ್ಜಿ ಶೇ 4ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.3ರಷ್ಟು, ನಿಫ್ಟಿ ಬ್ಯಾಂಕ್ ಶೇ 2.5ರಷ್ಟು ತಗ್ಗಿವೆ. ಫಾರ್ಮಾ ವಲಯ ಶೇ 2ರಷ್ಟು ಗಳಿಕೆ ಕಂಡಿದೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಟಾಟಾ ಸ್ಟೀಲ್ ಶೇ 4.5ರಷ್ಟು, ಶ್ರೀ ಸಿಮೆಂಟ್ಸ್ ಶೇ 4ರಷ್ಟು, ಏಷ್ಯನ್ ಪೇಂಟ್ಸ್ ಶೇ 4ರಷ್ಟು ಮತ್ತು ಸಿಪ್ಲಾ ಶೇ 3.5 ರಷ್ಟು ಗಳಿಸಿಕೊಂಡಿವೆ. ಐಒಸಿ ಶೇ 8ರಷ್ಟು, ಒಎನ್‌ಜಿಸಿ ಶೇ 8ರಷ್ಟು, ಯುಪಿಎಲ್ ಶೇ 7ರಷ್ಟು ಮತ್ತು ಪವರ್ ಗ್ರಿಡ್ ಶೇ 6.5ರಷ್ಟು ತಗ್ಗಿವೆ.

ಮುನ್ನೋಟ: ಈ ವರ್ಷದ ಜನವರಿಯಲ್ಲಿ 13,600 ಅಂಶಗಳಲ್ಲಿ ಇದ್ದ ನಿಫ್ಟಿ ಬಜೆಟ್ ಬಳಿಕ 15,431 ಅಂಶಗಳಿಗೆ ಏರಿಕೆಯಾಗಿ ಶೇ 13ರಷ್ಟು ಜಿಗಿತ ಕಂಡಿತ್ತು. ಆದರೆ ಈಗ ಶೇ 6ರಷ್ಟು ಕುಸಿತ ಕಂಡಿದೆ. ಮಾರುಕಟ್ಟೆಯ ಏರಿಳಿತ ಸದ್ಯ ಎಣಿಕೆಗೆ ಸಿಗದ ಸ್ಥಿತಿಯಲ್ಲಿದೆ. ಡಾಲರ್ ಮೌಲ್ಯ ಹೆಚ್ಚಾದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಮಾರುಕಟ್ಟೆಗೆ ಹೊಡೆತ ಬೀಳಲಿದೆ. ಇದರ ಜತೆಗೆ ಬಾಂಡ್ ಬೆಲೆ ಏರಿಳಿತವೂ ಸೂಚ್ಯಂಕಗಳ ಗತಿ ನಿರ್ಧರಿಸಲಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಹೂಡಿಕೆದಾರರನ್ನು ಅತಂತ್ರ ಸ್ಥಿತಿಯಲ್ಲಿಟ್ಟಿವೆ.

ಏಪ್ರಿಲ್ 1 ರಿಂದ ಹಣಕಾಸು ವರ್ಷ ಆರಂಭಗೊಳುವುದರಿಂದ ಅದಕ್ಕೆ ಮಾರುಕಟ್ಟೆ ಹೇಗೆ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ಅರಿಯಲು ಹೂಡಿಕೆದಾರರು ಕಾತರರಾಗಿದ್ದಾರೆ. ಮಾರ್ಚ್ 29ರಂದು ಹೋಳಿ ಮತ್ತು ಏಪ್ರಿಲ್ 2ರಂದು ಗುಡ್ ಫ್ರೈಡೇ ಪ್ರಯುಕ್ತ ಮಾರುಕಟ್ಟೆಗೆ ರಜೆ ಇರಲಿದೆ.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.