ADVERTISEMENT

ಕ್ರಿಪ್ಟೊಕರೆನ್ಸಿ ಬಗ್ಗೆ ಆರ್‌ಬಿಐ ಕಳವಳ

ಪಿಟಿಐ
Published 24 ಫೆಬ್ರುವರಿ 2021, 13:34 IST
Last Updated 24 ಫೆಬ್ರುವರಿ 2021, 13:34 IST

ನವದೆಹಲಿ: ಕ್ರಿಪ್ಟೊಕರೆನ್ಸಿಗಳು ಹಣಕಾಸಿನ ಸ್ಥಿರತೆ ಮೇಲೆ ಬೀರಬಹುದಾದ ಪ್ರಭಾವದ ವಿಚಾರವಾಗಿ ಕಳವಳಗೊಂಡಿರುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಹೇಳಿದೆ. ಈ ವಿಚಾರವನ್ನು ತಾನು ಕೇಂದ್ರ ಸರ್ಕಾರಕ್ಕೆ ತಿಳಿಸಿರುವುದಾಗಿಯೂ ಅದು ಹೇಳಿದೆ.

‘ಕ್ರಿಪ್ಟೊಕರೆನ್ಸಿಗಳ ವಿಚಾರದಲ್ಲಿ ನಮಗೆ ಕೆಲವು ಪ್ರಮುಖ ಕಳವಳಗಳು ಇವೆ. ನಾವು ಹೇಳಿರುವುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಸರ್ಕಾರವು ಈ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುತ್ತದೆ ಎಂದು ಭಾವಿಸಿದ್ದೇನೆ. ಅಗತ್ಯ ಎದುರಾದರೆ ಈ ಬಗ್ಗೆ ಸಂಸತ್ತು ಕೂಡ ಪರಿಶೀಲಿಸಿ, ತೀರ್ಮಾನಿಸಲಿದೆ’ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸಿಎನ್‌ಬಿಸಿ–ಟಿವಿ18ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಬ್ಲಾಕ್‌ಚೈನ್‌ ತಂತ್ರಜ್ಞಾನದ ಪ್ರಯೋಜನವನ್ನು ತಾವು ಪಡೆಯಬೇಕು. ಆದರೆ, ಹಣಕಾಸಿನ ಸ್ಥಿರತೆಯ ದೃಷ್ಟಿಕೋನದಿಂದ ಕ್ರಿಪ್ಟೊಕರೆನ್ಸಿಗಳ ವಿಚಾರವಾಗಿ ನಮ್ಮಲ್ಲಿ ಕಳವಳ ಮೂಡಿದೆ’ ಎಂದು ದಾಸ್ ಹೇಳಿದ್ದಾರೆ. ಡಿಜಿಟಲ್‌ ಕರೆನ್ಸಿಗಳನ್ನು ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡಲು, ಹಣದ ಅಕ್ರಮ ವರ್ಗಾವಣೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರ್‌ಬಿಐ ಈ ಹಿಂದೆ ಆತಂಕ ವ್ಯಕ್ತಪಡಿಸಿತ್ತು.

ADVERTISEMENT

ಭಾರತದ್ದೇ ಆದ ಅಧಿಕೃತ ಡಿಜಿಟಲ್‌ ಕರೆನ್ಸಿಯ ಚಲಾವಣೆಗೆ ಅಗತ್ಯವಿರುವ ಕಾನೂನಿನ ಚೌಕಟ್ಟು ರೂಪಿಸಲು ಹಾಗೂ ವ್ಯಕ್ತಿಗಳು ಮತ್ತು ಕಂಪನಿಗಳು ಕ್ರಿಪ್ಟೊಕರೆನ್ಸಿಗಳಲ್ಲಿ ವಹಿವಾಟು ನಡೆಸುವುದನ್ನು ನಿರ್ಬಂಧಿಸಲು ಪ್ರತ್ಯೇಕ ಮಸೂದೆಯೊಂದನ್ನು ಮಂಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಬ್ಯಾಂಕ್‌ಗಳು ಮತ್ತು ಮತ್ತು ಇತರ ಸಂಸ್ಥೆಗಳು ಕ್ರಿಪ್ಟೊಕರೆನ್ಸಿ ಮೂಲಕ ನಡೆಸುವ ವಹಿವಾಟುಗಳಿಗೆ ಬೆಂಬಲ ನೀಡುವುದನ್ನು ಆರ್‌ಬಿಐ 2018ರಲ್ಲಿ ನಿಷೇಧಿಸಿತ್ತು. ಆದರೆ, ಈ ನಿಷೇಧವನ್ನು ಸುಪ್ರೀಂ ಕೋರ್ಟ್‌ ತೆರವುಗೊಳಿಸಿದೆ. ತನ್ನದೇ ಆದ ಡಿಜಿಟಲ್ ಕರೆನ್ಸಿ ಆರಂಭಿಸುವ ಕೆಲಸದಲ್ಲಿ ಆರ್‌ಬಿಐ ತೊಡಗಿದೆ ಎಂದು ದಾಸ್ ಹೇಳಿದ್ದಾರೆ.

ಸಣ್ಣ ಹೂಡಿಕೆದಾರರಿಗೆ ಸರ್ಕಾರಿ ಬಾಂಡ್‌ಗಳಲ್ಲಿ ನೇರವಾಗಿ ಹೂಡಿಕೆ ಮಾಡಲು ಅವಕಾಶ ಕೊಡುವ ಕಾರ್ಯ ಪ್ರಗತಿಯಲ್ಲಿದೆ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೆಲವೇ ವಾರಗಳಲ್ಲಿ ಹೊರಡಿಸಲಾಗುವುದು ಎಂದೂ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.