ADVERTISEMENT

₹ 2 ಸಾವಿರ ಮುಖಬೆಲೆ ನೋಟು ಮುದ್ರಣ ಕಡಿತ

ಪಿಟಿಐ
Published 3 ಜನವರಿ 2019, 19:18 IST
Last Updated 3 ಜನವರಿ 2019, 19:18 IST
   

ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳ ರದ್ದತಿ ನಂತರ ಚಲಾವಣೆಗೆ ತರಲಾಗಿರುವ ₹ 2,000 ಮುಖಬೆಲೆಯ ನೋಟುಗಳ ಮುದ್ರಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಕನಿಷ್ಠ ಮಟ್ಟಕ್ಕೆ ಇಳಿಸಿದೆ.

ನೋಟು ರದ್ದತಿಯಿಂದ ಉದ್ಭವಿಸಿದ್ದ ನಗದು ಕೊರತೆ ತುಂಬಲು ಆರ್‌ಬಿಐ, ಹೊಸದಾಗಿ ₹ 2,000 ಮತ್ತು ಹೊಸ ವಿನ್ಯಾಸದ ₹ 500 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.

₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಾಗಲೇ ಕ್ರಮೇಣ ಇವುಗಳ ಮುದ್ರಣ ಪ್ರಮಾಣ ತಗ್ಗಿಸುವ ತೀರ್ಮಾನಕ್ಕೆ ಬರಲಾಗಿತ್ತು. ಈಗ ಇವುಗಳ ಮುದ್ರಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವ ನಿರ್ಧಾರಕ್ಕೆ ಬರಲಾಗಿದೆ.

ADVERTISEMENT

ಹಣದ ಚಲಾವಣೆ ಪ್ರಮಾಣ ಆಧರಿಸಿ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಕಾಲಕಾಲಕ್ಕೆ ನೋಟುಗಳ ಮುದ್ರಣ ಪ್ರಮಾಣವನ್ನು ನಿಗದಿಪಡಿಸುತ್ತ ಬಂದಿವೆ. ಇದರಲ್ಲಿ ಹೊಸತೇನೂ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ಬಿಐ ಅಂಕಿಅಂಶಗಳ ಪ್ರಕಾರ, 2017ರ ಮಾರ್ಚ್‌ ಅಂತ್ಯದ ವೇಳೆಗೆ ದೇಶದಲ್ಲಿ ₹ 2,000 ಬೆಲೆಯ 328 ಕೋಟಿ ನೋಟುಗಳು ಚಲಾವಣೆಯಲ್ಲಿ ಇದ್ದವು. 2018ರ ಮಾರ್ಚ್‌ 31ರ ವೇಳೆಗೆ ಇವುಗಳ ಸಂಖ್ಯೆ 336 ಕೋಟಿಗೆ ತಲುಪಿತ್ತು. ಈ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ಎಲ್ಲ ಬಗೆಯ ನೋಟುಗಳ ಒಟ್ಟಾರೆ ಮೊತ್ತವು ₹ 18 ಲಕ್ಷ ಕೋಟಿಗಳಷ್ಟಿತ್ತು. ಇದರಲ್ಲಿ ₹ 2,000 ನೋಟುಗಳ ಪ್ರಮಾಣಶೇ 37.3ರಷ್ಟಿತ್ತು. 2017ರ ಮಾರ್ಚ್‌ನಲ್ಲಿ ಈ ಪ್ರಮಾಣ ಶೇ 50.2ರಷ್ಟಿತ್ತು.

2016ರ ನವೆಂಬರ್‌ನಲ್ಲಿ ರದ್ದುಪಡಿಸಿದ ₹ 1,000 ಮತ್ತು₹ 500 ಮುಖಬೆಲೆಯ ನೋಟುಗಳ ಸಂಖ್ಯೆಯು ಆ ಸಂದರ್ಭದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಶೇ 86ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.