ಬೆಂಗಳೂರು: ದೇಶದ ಎರಡನೇ ಅತಿದೊಡ್ಡ ಐ.ಟಿ ಸೇವಾ ಕಂಪನಿಯಾದ ಇನ್ಫೊಸಿಸ್‌ಗೆ ₹32,403 ಕೋಟಿ ಸಮಗ್ರ ಜಿಎಸ್‌ಟಿ ವಂಚನೆ ಎಸಗಿರುವ ಆರೋಪದ ಮೇರೆಗೆ ಬೆಂಗಳೂರಿನ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯವು (ಡಿಜಿಜಿಐ), ಪ್ರೀ ಷೋಕಾಸ್ ನೋಟಿಸ್ ನೀಡಿದೆ.
‘2017ರ ಜುಲೈನಿಂದ 2021–2022ರ ವರೆಗೆ ವಿದೇಶಗಳಲ್ಲಿ ಇರುವ ತನ್ನ ಶಾಖೆಗಳ ಸೇವೆಗಳಿಗೆ ಸಮಗ್ರ ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ನೋಟಿಸ್ ಸ್ವೀಕರಿಸಲಾಗಿದೆ’ ಎಂದು ಇನ್ಫೊಸಿಸ್, ಬುಧವಾರ ಷೇರುಪೇಟೆಗೆ ತಿಳಿಸಿದೆ.
ಇನ್ಫೊಸಿಸ್ ಕಂಪನಿಯು ಮಾಹಿತಿ ತಂತ್ರಜ್ಞಾನ ಸೇರಿ ಇತರೆ ಸೇವೆ ಒದಗಿಸಲು ವಿದೇಶಗಳಲ್ಲಿ ಹಲವು ಸೇವಾದಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅವರಿಗೆ ಅನುಕೂಲ ಕಲ್ಪಿಸಲು ಸಾಗರೋತ್ತರ ಶಾಖೆಗಳನ್ನು ತೆರೆದಿದೆ.
ಸಮಗ್ರ ಸರಕು ಮತ್ತು ಸೇವಾ ಕಾಯ್ದೆಯಡಿ ಇವರನ್ನು ‘ವಿಶಿಷ್ಟ ವ್ಯಕ್ತಿಗಳು’ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ, ಇವರಿಂದ ಪಡೆಯುವ ಸೇವೆಗೆ ಸಮಗ್ರ ಜಿಎಸ್‌ಟಿ ಅನ್ವಯವಾಗಲಿದೆ ಎಂದು ಮಹಾನಿರ್ದೇಶನಾಲಯವು ತಿಳಿಸಿದೆ.
ಕಂಪನಿಯು ಸಾಗರೋತ್ತರ ಶಾಖೆಯ ಕಚೇರಿಗಳಿಂದ ಸರಬರಾಜು ಸ್ವೀಕೃತಿಗಳನ್ನು ಪಡೆದಿದೆ. ಆದರೆ, ಇದಕ್ಕೆ ಬದಲಾಗಿ ಶಾಖೆಗಳ ಕಚೇರಿಯ ವೆಚ್ಚವನ್ನು ತೋರಿಸಿದೆ. ಆದರೆ, ಸೇವೆ ಸ್ವೀಕರಿಸಿದ ಸರಬರಾಜಿನ ಮೇಲೆ ರಿವರ್ಸ್ ಚಾರ್ಜ್ ಕಾರ್ಯ ವಿಧಾನದ ಅನ್ವಯ ಕಂಪನಿಯು ಸಮಗ್ರ ಜಿಎಸ್‌ಟಿ ಪಾವತಿಸಬೇಕಿದೆ ಎಂದು ತಿಳಿಸಿದೆ.
ಈ ತೆರಿಗೆ ವಂಚನೆ ಬಗ್ಗೆ ಡಿಜಿಜಿಐ ಅಧಿಕಾರಿಗಳು ಇನ್ಫೊಸಿಸ್ ಕಂಪನಿಗೆ ಭೇಟಿ ನೀಡಿ ಪರಿಶೀಲಿಸುವ ಸಾಧ್ಯತೆಯಿದೆ.
‘ಕಾನೂನಿನ ಮೇಲೆ ನಮಗೆ ನಂಬಿಕೆಯಿದೆ. ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದಿಂದ ಸ್ವೀಕರಿಸಿರುವ ಪ್ರೀ ಷೋಕಾಸ್ ನೋಟಿಸ್‌ಗೆ ಸಮಂಜಸ ಉತ್ತರ ನೀಡಲಾಗುವುದು’ ಎಂದು ಇನ್ಫೊಸಿಸ್ ತಿಳಿಸಿದೆ. ‘ಸಾಗರೋತ್ತರ ಕಚೇರಿಗಳ ವೆಚ್ಚಕ್ಕೆ ಸರಕು ಮತ್ತು ಸೇವಾ ತೆರಿಗೆ ಅನ್ವಯವಾಗುವುದಿಲ್ಲ’ ಎಂದು ಹೇಳಿದೆ.
ಭಾರತದಲ್ಲಿ ಇರುವ ಯಾವುದೇ ಕಂಪನಿಗೆ ಸಾಗರೋತ್ತರ ಶಾಖೆಗಳಿಂದ ಒದಗಿಸುವ ಸೇವೆಗೆ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಈ ಬಗ್ಗೆ ಜಿಎಸ್‌ಟಿ ಮಂಡಳಿಯ ಶಿಫಾರಸು ಅನ್ವಯ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿಯು ಸುತ್ತೋಲೆ ಹೊರಡಿಸಿದೆ’ ಎಂದು ತಿಳಿಸಿದೆ.
ಐ.ಟಿ ರಫ್ತು ಸೇವೆಗಳಿಗೆ ಪಾವತಿಸುವ ಜಿಎಸ್‌ಟಿಗೆ ಸಂಬಂಧಿಸಿದಂತೆ ಕ್ರೆಡಿಟ್ ಅಥವಾ ಮರುಪಾವತಿ ಸೌಲಭ್ಯ ಪಡೆಯುವ ಅವಕಾಶವಿದೆ. ಕಂಪನಿಯು ಯಾವುದೇ ಜಿಎಸ್‌ಟಿ ಬಾಕಿ ಉಳಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯದ ತೆರಿಗೆ ನಿಯಮಾವಳಿಗಳನ್ನು ಪಾಲಿಸುತ್ತಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.