ADVERTISEMENT

ಹಿರಿಯ ಚೇತನಗಳಿಗೆ ಸಿಹಿ

ಯು.ಪಿ.ಪುರಾಣಿಕ್
Published 2 ಜುಲೈ 2019, 16:43 IST
Last Updated 2 ಜುಲೈ 2019, 16:43 IST
ಹಿರಿಯ ಚೇತನಗಳಿಗೆ ಸಿಹಿ
ಹಿರಿಯ ಚೇತನಗಳಿಗೆ ಸಿಹಿ   

ಬೆಂಗಳೂರು: ಕೇಂದ್ರ ಸರ್ಕಾರವು 2018–19ನೇ ಸಾಲಿನ ಬಜೆಟ್‌ನಲ್ಲಿ ಹಿರಿಯ ನಾಗರಿಕರಿಗೆ ಹಲವಾರು ತೆರಿಗೆ ವಿನಾಯ್ತಿಗಳನ್ನು ಘೋಷಿಸಿದೆ.

* ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಅವಧಿ ಹಾಗೂ ಆರ್‌.ಡಿ. ಠೇವಣಿಗಳ ಮೇಲಿನ ಬಡ್ಡಿ ವರಮಾನ ₹ 50,000 ತನಕ ನೇರ ವಿನಾಯ್ತಿ. ಇದರಿಂದಾಗಿ ಶೇ 5 ತೆರಿಗೆಗೆ ಒಳಗಾಗುವವರು ₹ 2,600, ಶೇ 20 ರಷ್ಟು ತೆರಿಗೆಗೆ ಒಳಗಾಗುವವರು ₹ 10,400 ಹಾಗೂ ಶೇ 30 ತೆರಿಗೆಗೆ ಒಳಗಾಗುವವರು ₹ 15,600 ವಾರ್ಷಿಕವಾಗಿ ಲಾಭ ಪಡೆಯಬಹುದು.

* ಸ್ಟ್ಯಾಂಡರ್ಡ್‌ ಡಿಡಕ್ಷನ್ (ಪಿಂಚಣಿದಾರರಿಗೆ) ₹ 40,000 ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸುವ ಅವಕಾಶ ನೀಡಲಾಗಿದೆ.

ADVERTISEMENT

ಮೇಲೆ ವಿವರಿಸಿರುವಂತೆ ಸೆಕ್ಷನ್‌ 80ಟಿಟಿಬಿ ಹಾಗೂ ಸ್ಟ್ಯಾಂಡರ್ಡ್‌ ಡಿಡಕ್ಷನ್‌ (ಪಿಂಚಣಿದಾರರಿಗೆ) ಇವರೆರಡರಿಂದ ಹಿರಿಯ ನಾಗರಿಕರು ₹ 90,000 ತನಕದ ತಮ್ಮ ಆದಾಯ ತೆರಿಗೆ ಮಿತಿಗಿಂತ ಹೆಚ್ಚಿನ ಮಿತಿಗೆ ಒಳಗಾಗುತ್ತಾರೆ.

* ಸೆಕ್ಷನ್‌ 80ಡಿ ಆಧಾರದ ಮೇಲೆ ಆರೋಗ್ಯ ವಿಮಾ ಕಂತಿನ ಗರಿಷ್ಠ ಮಿತಿ ₹ 30,000 ರಿಂದ ₹50,000 ಕ್ಕೆ ಏರಿಸಲಾಗಿದೆ. ಈ ಮೊತ್ತ ಕೂಡಾ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

* ಸೆಕ್ಷನ್ 80ಡಿಡಿಬಿ (ತೀವ್ರ ಕಾಯಿಲೆ–ಕ್ಯಾನ್ಸರ್, ಮೂತ್ರಪಿಂಡ ವಿಫಲತೆ ಮುಂತಾದವು) ಆಧಾರದ ಮೇಲೆ ಗರಿಷ್ಠ ಮಿತಿಯನ್ನು ₹ 60,000 ರಿಂದ ₹ 1 ಲಕ್ಷಕ್ಕೆ ಏರಿಸಲಾಗಿದೆ.

* ಪ್ರಧಾನಮಂತ್ರಿ ವಯೋವಂದನಾ ಯೋಜನೆಯಲ್ಲಿ ಶೇ 8ರ ಬಡ್ಡಿದರದಲ್ಲಿ ₹ 7.50 ಲಕ್ಷ ಮಿತಿಯನ್ನು ₹ 15 ಲಕ್ಷಕ್ಕೆ ಏರಿಸಲಾಗಿದೆ. ಈ ಯೋಜನೆಯನ್ನು 2020ರ ತನಕ ಮುಂದುವರಿಸಲಾಗಿದೆ.

ಮುಖ್ಯವಾಗಿ ಇನ್ನುಮುಂದೆ ಹಿರಿಯ ನಾಗರಿಕರು ವಾರ್ಷಿಕ ಠೇವಣಿ ಮೇಲಿನ ಬಡ್ಡಿ ಆದಾಯ ₹ 50,000 ತನಕ 15ಎಚ್‌ ನಮೂನೆ ಅರ್ಜಿ ಬ್ಯಾಂಕ್‌ಗೆ ಕೊಡುವ ಅವಶ್ಯವಿಲ್ಲ. ಇದೇ ವೇಳೆ ಈ ಹಿಂದೆ ಮೂಲ ಬಡ್ಡಿಯಲ್ಲಿ ಕಡಿತವಾಗುತ್ತಿರುವ (ಟಿಡಿಎಸ್‌) ₹ 10,000 ರಿಂದ ₹ 50,000 ತನಕ ಹೆಚ್ಚಿಸಲಾಗಿದೆ. (ಸೆಕ್ಷನ್‌ 194ಎ).

ಮೇಲಿನ ವಿನಾಯ್ತಿಗಳನ್ನು ಪರಿಗಣಿಸುವಾಗ ಶೇ 75ಕ್ಕೂ ಹೆಚ್ಚಿನ ಹಿರಿಯ ನಾಗರಿಕರು ಆದಾಯ ತೆರಿಗೆ ಭೀತಿಯಿಂದ ಹೊರಬಂದು, 15ಎಚ್‌ ಅರ್ಜಿ ನಮೂನೆ ಕೊಡದೆ ಜೀವನದ ಸಂಜೆಯಲ್ಲಿ ನೆಮ್ಮದಿಯಾಗಿ ಬಾಳಬಹುದು.

ಹಿರಿಯ ನಾಗರಿಕರಿಗೊಂದು ಕಿವಿಮಾತು. ನೀವು ಕಷ್ಟ ಪಟ್ಟು ದುಡಿದ ಹಣ ಅನಿಶ್ಚಿತ ಹಾಗೂ ಅಭದ್ರವಾದ ಹೂಡಿಕೆಯಲ್ಲಿ ತೊಡಗಿಸದೇ, ಬ್ಯಾಂಕ್‌ ಹಾಗೂ ಅಂಚೆ ಕಚೇರಿಯಲ್ಲಿಯೇ ಇರಿಸಿ. ಇಲ್ಲಿ ಭದ್ರತೆ, ದ್ರವ್ಯತೆ ಹಾಗೂ ನಿಶ್ಚಿತ ವರಮಾನ ಇರುತ್ತದೆ.

(ಬ್ಯಾಂಕಿಂಗ್‌, ಹಣಕಾಸು ತಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.