ADVERTISEMENT

63 ಐಪಿಒ: ದಾಖಲೆಯ ₹1.18 ಲಕ್ಷ ಕೋಟಿ ಸಂಗ್ರಹ

ಪಿಟಿಐ
Published 23 ಡಿಸೆಂಬರ್ 2021, 12:27 IST
Last Updated 23 ಡಿಸೆಂಬರ್ 2021, 12:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಸಕ್ತ ವರ್ಷದಲ್ಲಿ ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮಾರುಕಟ್ಟೆ ಚಟುವಟಿಕೆಯು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಈವರೆಗೆ 63 ಕಂಪನಿಗಳು ಐಪಿಒ ಮೂಲಕ ಒಟ್ಟಾರೆ ₹ 1.18 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿವೆ ಎಂದು ಪ್ರೈಮ್‌ ಡೇಟಾಬೇಸ್‌ ಸಮೂಹ ಹೇಳಿದೆ. ಈ ಸಮೂಹವು ಐಪಿಒಗೆ ಸಂಬಂಧಿಸಿದ ದತ್ತಾಂಶ ನಿರ್ವಹಣೆ ಮಾಡುತ್ತದೆ.

2020ರಲ್ಲಿ 15 ಕಂಪನಿಗಳು ₹ 26,613 ಕೋಟಿ ಬಂಡವಾಳ ಸಂಗ್ರಹಿಸಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ನಾಲ್ಕೂವರೆ ಪಟ್ಟು ಹೆಚ್ಚು ಬಂಡವಾಳ ಸಂಗ್ರಹ ಆಗಿದೆ. 2017ರಲ್ಲಿ ಸಂಗ್ರಹ ಆಗಿದ್ದ ₹ 68,827 ಕೋಟಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿದೆ ಎಂದು ಅದು ತಿಳಿಸಿದೆ.

ಸಣ್ಣ ಹೂಡಿಕೆದಾರರ ಜೊತೆಗೆ ಹೊಸ ಪೀಳಿಗೆಯ ತಂತ್ರಜ್ಞಾನ ನವೋದ್ಯಮಗಳಿಂದಾಗಿ ಈ ಬಾರಿ ಐಪಿಒ ಮಾರುಕಟ್ಟೆಯಲ್ಲಿ ದಾಖಲೆ ಮಟ್ಟದ ವಹಿವಾಟು ನಡೆಯುವಂತಾಗಿದೆ ಎಂದು ಪ್ರೈಮ್‌ ಡೇಟಾಬೇಸ್‌ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಪ್ರಣವ್‌ ಹಲ್ದಿಯಾ ಹೇಳಿದ್ದಾರೆ.

ADVERTISEMENT

ಸಣ್ಣ ಹೂಡಿಕೆದಾರರ ಭಾಗವಹಿಸುವಿಕೆಯು ಈ ವರ್ಷ ಗರಿಷ್ಠ ಮಟ್ಟದಲ್ಲಿದೆ. 2021ರಲ್ಲಿ ಈವರೆಗೆ 14.36 ಲಕ್ಷ ರಿಟೇಲ್‌ ಅರ್ಜಿಗಳು ಸಲ್ಲಿಕೆ ಆಗಿವೆ. 2020ರಲ್ಲಿ 12.77 ಲಕ್ಷ ಹಾಗೂ 2019ರಲ್ಲಿ 4.05 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು. ಗ್ಲೆನ್‌ಮಾರ್ಕ್‌ ಲೈಫ್‌ ಸೈನ್ಸಸ್‌ಗೆ ಗರಿಷ್ಠ 33.95 ಲಕ್ಷ ರಿಟೇಲ್‌ ಅರ್ಜಿಗಳು ಸಲ್ಲಿಕೆ ಆಗಿದ್ದವು. ದೇವಯಾನಿ ಇಂಟರ್‌ನ್ಯಾಷನಲ್‌ಗೆ 32.67 ಲಕ್ಷ ಹಾಗೂ ಲೇಟೆಂಟ್‌ ವೀವ್‌ಗೆ 31.87 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿದ್ದವು ಎಂದು ಮಾಹಿತಿ ನೀಡಿದೆ.

ಐಪಿಒದಲ್ಲಿ ಸಂಗ್ರಹ ಆಗಿರುವ ಒಟ್ಟಾರೆ ಮೊತ್ತದಲ್ಲಿ ರಿಟೇಲ್‌ ಹೂಡಿಕೆದಾರರಿಗೆ ಒಟ್ಟಾರೆ ₹ 24,292 ಕೋಟಿ ಮೊತ್ತದ ಷೇರು ಹಂಚಿಕೆ ಆಗಿದೆ. 2020ರಲ್ಲಿ ಹಂಚಿಕೆ ಆಗಿದ್ದ ಮೊತ್ತಕ್ಕಿಂತ ಇದು ಶೇ 30ರಷ್ಟು ಕಡಿಮೆ.

58 ಕಂಪನಿಗಳಲ್ಲಿ 34 ಕಂಪನಿಗಳ ಐಪಿಒ ಶೇ 10ಕ್ಕಿಂತಲೂ ಹೆಚ್ಚಿನ ಗಳಿಕೆ ತಂದುಕೊಟ್ಟಿವೆ (ಷೇರುಪೇಟೆ ಪ್ರವೇಶಿಸಿದ ದಿನ ವಹಿವಾಟಿನ ಅಂತ್ಯದ ವೇಳೆಗೆ ಇದ್ದ ಕಂಪನಿಯ ಷೇರು ಮೌಲ್ಯ ಆಧರಿಸಿ) ಎಂದು ಹಲ್ದಿಯಾ ಹೇಳಿದ್ದಾರೆ.

ಪ್ರಮುಖ ಐಪಿಒ (ಕೋಟಿಗಳಲ್ಲಿ)

ಪೇಟಿಎಂ;₹ 18,300

ಜೊಮ್ಯಾಟೊ;₹ 9,300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.