ADVERTISEMENT

ದೇಶದಲ್ಲಿ ಶೇ 55ರಷ್ಟು ಟ್ರಕ್‌ ಚಾಲಕರಿಗೆ ದೃಷ್ಟಿದೋಷ: ವರದಿ

ಐಐಟಿ–ದೆಹಲಿಯಿಂದ ಟ್ರಕ್‌ ಚಾಲಕರ ಆರೋಗ್ಯ ವರದಿ ಪ್ರಕಟ

ಪಿಟಿಐ
Published 28 ಜನವರಿ 2025, 15:21 IST
Last Updated 28 ಜನವರಿ 2025, 15:21 IST
   

ನವದೆಹಲಿ: ದೇಶದ ಒಟ್ಟು ಟ್ರಕ್‌ ಚಾಲಕರ ಪೈಕಿ ಶೇ 55.1ರಷ್ಟು ಚಾಲಕರು ದೃಷ್ಟಿದೋಷದಿಂದ ಬಳಲುತ್ತಿದ್ದಾರೆ. ಶೇ 53.3ರಷ್ಟು ಮಂದಿಗೆ ದೂರ ದೃಷ್ಟಿದೋಷ ಕಾಡುತ್ತಿದ್ದರೆ, ಶೇ 46.7ರಷ್ಟು ಚಾಲಕರಿಗೆ ಹತ್ತಿರ ದೃಷ್ಟಿದೋಷ ಸಮಸ್ಯೆಯಿದೆ ಎಂದು ಐಐಟಿ–ದೆಹಲಿ ಸಿದ್ಧಪಡಿಸಿರುವ ವರದಿ ಹೇಳಿದೆ.

ಚಾಲಕರಲ್ಲಿ ಸ್ಥೂಲಕಾಯದ ಸಮಸ್ಯೆಯೂ ಹೆಚ್ಚಿದೆ. ಶೇ 44.3ರಷ್ಟು ಚಾಲಕರ ಬಿಎಂಐ (ಬಾಡಿ ಮಾಸ್‌ ಇಂಡೆಕ್ಸ್‌) 30ಕ್ಕಿಂತ ಹೆಚ್ಚಿದೆ. ಶೇ 57.4ರಷ್ಟು ಮಂದಿ ಅಧಿಕ ರಕ್ತದೊತ್ತಡದ ಸಮಸ್ಯೆಗೆ ತುತ್ತಾಗಿದ್ದಾರೆ. ಶೇ 18.4ರಷ್ಟು ಚಾಲಕರ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶವಿದೆ ಅಥವಾ ಪ್ರಿ–ಡಯಾಬಿಟಿಕ್‌ ಹಂತದಲ್ಲಿದ್ದಾರೆ ಎಂದು ವಿವರಿಸಿದೆ.

ಕರ್ನಾಟಕ, ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ತಮಿಳುನಾಡಿನ 50 ಸಾವಿರಕ್ಕೂ ಹೆಚ್ಚು ಟ್ರಕ್‌ ಚಾಲಕರನ್ನು ಪರೀಕ್ಷೆಗೆ ಒಳಪಡಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಐಐಟಿ–ದೆಹಲಿ ಜೊತೆಗೆ ಫೋರ್‌ಸೈಟ್‌ ಫೌಂಡೇಷನ್‌ ಕೂಡ ಇದಕ್ಕೆ ಕೈಜೋಡಿಸಿದೆ.

ADVERTISEMENT

ವರದಿ ಪ್ರಕಾರ ಶೇ 33.9ರಷ್ಟು ಚಾಲಕರು ಸಾಮಾನ್ಯ ಒತ್ತಡದಿಂದ ಬಳಲುತ್ತಿದ್ದರೆ, ಶೇ 2.9ರಷ್ಟು ಚಾಲಕರು ಅಧಿಕ ಒತ್ತಡಕ್ಕೆ ಸಿಲುಕಿದ್ದಾರೆ. ಇವರ ಮಾನಸಿಕ ಆರೋಗ್ಯ ಸುಧಾರಣೆಗೆ ಅಗತ್ಯ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ಸಾಗಣೆ ವೆಚ್ಚ ಎಷ್ಟು?:

‘ದೇಶದ ರಸ್ತೆಗಳಲ್ಲಿ ಶೇ 70ರಷ್ಟು ಸಂಚಾರ ದಟ್ಟಣೆಯಿದೆ. ಜೊತೆಗೆ, ಸರಕು ಸಾಗಣೆ ವೆಚ್ಚವು ಶೇ 14ರಿಂದ ಶೇ 16ರಷ್ಟು ಹೆಚ್ಚಿದೆ’ ಎಂದು ಮಂಗಳವಾರ ವರದಿ ಬಿಡುಗಡೆ ಮಾಡಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಹೇಳಿದರು.

ಸಾರಿಗೆ ವಲಯವು ಚಾಲಕರ ಸಮಸ್ಯೆಯನ್ನೂ ಎದುರಿಸುತ್ತಿದೆ. ಪ್ರತಿ 100 ಟ್ರಕ್‌ಗಳಿಗೆ 75 ಚಾಲಕರಷ್ಟೇ ಇದ್ದಾರೆ ಎಂದರು.

ರಾಷ್ಟ್ರದ ಸರಕು ಸಾಗಣೆಯಲ್ಲಿ ಟ್ರಕ್‌ಗಳ ಸೇವೆ ಅನನ್ಯವಾದುದು. ಎಲ್ಲಾ ಪ್ರದೇಶಗಳಿಗೂ ಸಂಪರ್ಕ ಬೆಸೆಯುತ್ತವೆ. ಟ್ರಕ್‌ ಚಾಲಕರಿಗೆ ಅಗತ್ಯ ತರಬೇತಿ ನೀಡಲು ಸರ್ಕಾರ ಬದ್ಧವಾಗಿದೆ. ಅವರ ಜೀವನಮಟ್ಟ ಸುಧಾರಣೆಗೆ ಸಂಬಂಧಿಸಿದಂತೆ ಆ್ಯಪ್‌ ಅಭಿವೃದ್ಧಿಪಡಿಸ‌ಲಾಗುವುದು ಎಂದರು.

ಟ್ರಕ್‌ ಚಾಲಕರು ದೀರ್ಘಾವಧಿವರೆಗೆ ದುಡಿಯುತ್ತಾರೆ. ಕೆಲಸದಲ್ಲಿ ಪಾಳಿ ವ್ಯವಸ್ಥೆ ಇರುವುದಿಲ್ಲ. ಕುಟುಂಬಗಳಿಂದ ದೂರ ಇರುತ್ತಾರೆ. ಇದರಿಂದ ಹಲವು ಅನಾರೋಗ್ಯ ಸಮಸ್ಯೆಗೆ ಸಿಲುಕುತ್ತಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.