ADVERTISEMENT

ಅದಾನಿ ಸಮೂಹದ ಷೇರಿನ ಮೌಲ್ಯ ಶೇ 14ರಷ್ಟು ಇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 16:03 IST
Last Updated 23 ಜನವರಿ 2026, 16:03 IST
ಅದಾನಿ
ಅದಾನಿ   

ನವದೆಹಲಿ (ಪಿಟಿಐ): ಸೌರ ವಿದ್ಯುತ್‌ ಗುತ್ತಿಗೆಯ ಲಂಚ ಪ್ರಕರಣದಲ್ಲಿ ಅದಾನಿ ಸಮೂಹದ ಗೌತಮ್ ಅದಾನಿ ವಿರುದ್ಧ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್ ಕಮಿಷನ್ ಕ್ರಮಕ್ಕೆ ಮುಂದಾಗಿರುವುದರಿಂದ ಶುಕ್ರವಾರದ ವಹಿವಾಟಿನಲ್ಲಿ ಅದಾನಿ ಸಮೂಹದ ಕಂಪನಿಗಳ ಷೇರಿನ ಮೌಲ್ಯ ಶೇ 14ರವರೆಗೆ ಇಳಿಕೆ ಕಂಡಿವೆ.

ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ ಷೇರಿನ ಮೌಲ್ಯ ಶೇ 14.63ರಷ್ಟು ಇಳಿಕೆ ಆಗಿದೆ. ಅದಾನಿ ಗ್ರೀನ್‌ ಎನರ್ಜಿ ಸಲ್ಯೂಷನ್ಸ್ ಶೇ 11.97, ಅದಾನಿ ಎಂಟರ್‌ಪ್ರೈಸಸ್‌ ಶೇ 10.76, ಅದಾನಿ ಪೋರ್ಟ್ಸ್ ಶೇ 7.52, ಅದಾನಿ ಟೋಟಲ್ ಗ್ಯಾಸ್ ಶೇ 5.71, ಅದಾನಿ ಪವರ್ ಶೇ 5.50, ಅಂಬುಜಾ ಸಿಮೆಂಟ್ಸ್ ಶೇ 5.01 ಮತ್ತು ಎಸಿಸಿ ಕಂಪನಿಯ ಷೇರಿನ ಮೌಲ್ಯ ಶೇ 3.2ರಷ್ಟು ಕಡಿಮೆ ಆಗಿದೆ.

ಅದಾನಿ ಸಮೂಹವು ಸೌರ ವಿದ್ಯುತ್‌ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ 265 ದಶಲಕ್ಷ ಡಾಲರ್ (₹2,434 ಕೋಟಿ) ಲಂಚ ನೀಡಿದೆ ಎನ್ನುವ ಆರೋಪದಡಿ ಅಮೆರಿಕದ ಸೆಕ್ಯುರಿಟೀಸ್‌ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಮತ್ತು ಅವರ ಅಣ್ಣನ ಮಗ ಸಾಗರ್ ಅದಾನಿಗೆ ಸಮನ್ಸ್ ಜಾರಿ ಮಾಡಲು ನ್ಯಾಯಾಲಯದ ಅನುಮತಿ ಕೋರಿದೆ. ಹೀಗಾಗಿ ಷೇರಿನ ಮೌಲ್ಯ ಇಳಿಕೆ ಆಗಿದೆ. 

ADVERTISEMENT

ವರದಿಗಳ ಪ್ರಕಾರ, ಸಮನ್ಸ್ ತಲುಪಿಸುವಲ್ಲಿ ಭಾರತೀಯ ಅಧಿಕಾರಿಗಳಿಂದ ಸಹಕಾರ ಸಿಗುತ್ತಿಲ್ಲ ಎಂದು ಅಮೆರಿಕದ ಎಸ್‌ಇಸಿ, ನ್ಯೂಯಾರ್ಕ್‌ನ ನ್ಯಾಯಾಲಯಕ್ಕೆ ತಿಳಿಸಿದೆ. ಗೌತಮ್ ಅದಾನಿ ಮತ್ತು ಸಾಗರ್ ಅದಾನಿಗೆ ಇ–ಮೇಲ್ ಮೂಲಕ ನೋಟಿಸ್‌ಗಳನ್ನು ಕಳುಹಿಸಲು ಅನುಮತಿ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.