ADVERTISEMENT

₹ 20 ಸಾವಿರ ಕೋಟಿ ಸಂಗ್ರಹಿಸಲಿರುವ ಅದಾನಿ ಸಮೂಹ

ಎಇಎಲ್‌ನಿಂದ ಹೊಸ ಷೇರು ಮಾರಾಟದ ಮೂಲಕ ಬಂಡವಾಳ ಸಂಗ್ರಹ

ಪಿಟಿಐ
Published 25 ನವೆಂಬರ್ 2022, 16:18 IST
Last Updated 25 ನವೆಂಬರ್ 2022, 16:18 IST
ಗೌತಮ್‌ ಅದಾನಿ
ಗೌತಮ್‌ ಅದಾನಿ   

ನವದೆಹಲಿ: ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಬಂಡವಾಳ ಮಾರುಕಟ್ಟೆಯಿಂದ ಹೊಸದಾಗಿ ₹ 20 ಸಾವಿರ ಕೋಟಿ ಸಂಗ್ರಹಿಸಲಿದೆ. ಬಂದರುಗಳಿಂದ ಆರಂಭಿಸಿದ ವಿದ್ಯುತ್ ಉತ್ಪಾದನೆವರೆಗೆ ವಿಸ್ತರಿಸಿಕೊಂಡಿರುವ ಉದ್ಯಮ ಸಮೂಹವು ತನ್ನ ಚಟುವಟಿಕೆಗಳನ್ನು ಇನ್ನಷ್ಟು ಹಿಗ್ಗಿಸಲು ಈ ಬಂಡವಾಳ ಸಂಗ್ರಹಕ್ಕೆ ಮುಂದಾಗಿದೆ.

ಅದಾನಿ ಸಮೂಹದ ಪ್ರಮುಖ ಕಂಪನಿಯಾಗಿರುವ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್ (ಎಇಎಲ್‌) ಹೊಸದಾಗಿ ಷೇರುಗಳನ್ನು ಮಾರಾಟ ಮಾಡುವ ಮೂಲಕ ಬಂಡವಾಳ ಸಂಗ್ರಹಿಸಲಿದೆ. ಈ ವಿಚಾರವನ್ನು ಅದು ಷೇರುಪೇಟೆಗೆ ತಿಳಿಸಿದೆ.

ಹೀಗೆ ಬಂಡವಾಳ ಸಂಗ್ರಹಿಸುವುದರಿಂದ ಕಂಪನಿಗೆ ತನ್ನ ಷೇರುದಾರರ ನೆಲೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಗಲಿದೆ, ಹೂಡಿಕೆದಾರರ ನಡುವೆ ವಿಶ್ವಾಸಾರ್ಹತೆ ಮತ್ತು ಸ್ವೀಕಾರಾರ್ಹತೆಯನ್ನು ಇನ್ನಷ್ಟು ಗಟ್ಟಿಮಾಡಿಕೊಳ್ಳಲು ಆಗಲಿದೆ. ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಈಗ ಪ್ರವರ್ತಕರು ಶೇಕಡ 72.63ರಷ್ಟು ಷೇರುಗಳನ್ನು ಹೊಂದಿದ್ದಾರೆ. ಇನ್ನುಳಿದ ಶೇ 27.37ರಷ್ಟು ಷೇರುಗಳಲ್ಲಿ ಸರಿಸುಮಾರು ಶೇ 20ರಷ್ಟು ಷೇರುಗಳು ವಿಮಾ ಕಂಪನಿಗಳು ಹಾಗೂ ವಿದೇಶಿ ಹೂಡಿಕೆದಾರರ ಬಳಿ ಇವೆ.

ADVERTISEMENT

ಈ ಕಂಪನಿಯ ಷೇರುಗಳು ಒಂದು ವರ್ಷದ ಅವಧಿಯಲ್ಲಿ ಎರಡು ಪಟ್ಟಿಗೂ ಹೆಚ್ಚು ಮೌಲ್ಯವೃದ್ಧಿಸಿಕೊಂಡಿವೆ. ಈಗ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 4.46 ಲಕ್ಷ ಕೋಟಿ ಆಗಿದೆ. ಹೊಸದಾಗಿ ಬಂಡವಾಳ ಸಂಗ್ರಹಿಸುವ ಪ್ರಕ್ರಿಯೆಗೆ ಕಂಪನಿಯ ಷೇರುದಾರರ ಸಮ್ಮತಿ ಬೇಕಾಗಿದೆ.

ಅದಾನಿ ಸಮೂಹವು ಈಗ ಬಂದರು, ವಿಮಾನ ನಿಲ್ದಾಣ ನಿರ್ವಹಣೆ, ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ, ವಿದ್ಯುತ್ ವಿತರಣೆ, ರಿಯಲ್ ಎಸ್ಟೇಟ್, ಎಫ್‌ಎಂಸಿಜಿ, ಸಿಮೆಂಟ್, ಹಣಕಾಸು ಸೇವಾ ಉದ್ಯಮಗಳಲ್ಲಿ ತೊಡಗಿಸಿಕೊಂಡಿದೆ. ಸಮೂಹವು ಈಚೆಗೆ ಮಾಧ್ಯಮ ವಹಿವಾಟಿಗೂ ಕಾಲಿರಿಸಿದೆ.

‘ಅದಾನಿ ಎಂಟರ್‌ಪ್ರೈಸಸ್‌ ಕಂಪನಿಗೆ ಹಲವು ಹೊಸ ಯೋಜನೆಗಳಿಗೆ, ಸ್ವಾಧೀನ ಪ್ರಕ್ರಿಯೆಗಳಿಗೆ ಹಣ ಬೇಕಾಗಿದೆ’ ಎಂದು ಮೂಲವೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.