ADVERTISEMENT

ಎ.ಐ: ಹೊಸ ವಿಮಾನಗಳ ಸಂಚಾರ

ಪಿಟಿಐ
Published 22 ಮೇ 2019, 18:30 IST
Last Updated 22 ಮೇ 2019, 18:30 IST
ಏರ್‌ ಇಂಡಿಯಾ
ಏರ್‌ ಇಂಡಿಯಾ   

ನವದೆಹಲಿ: ಮುಂದಿನ ತಿಂಗಳಿನಿಂದ ದೇಶದ ಒಳಗೆ ಮತ್ತು ಹೊರಗೆ ಹೊಸ ವಿಮಾನಗಳ ಸಂಚಾರ ಆರಂಭಿಸುವುದಾಗಿ ಏರ್ ಇಂಡಿಯಾ ಬುಧವಾರ ಘೋಷಿಸಿದೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಒತ್ತಡ ಹೆಚ್ಚಿದ್ದು, ಪ್ರಯಾಣಿಕರ ಬೇಡಿಕೆ ಮೇರೆಗೆ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಹೊಸ ವಿಮಾನಗಳ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಹೇಳಿದೆ.

ಜೂನ್ 1ರಿಂದ ಮುಂಬೈ-ದುಬೈ-ಮುಂಬೈ ಮಾರ್ಗದಲ್ಲಿ ವಾರಕ್ಕೆ ಹೆಚ್ಚುವರಿ 3,500 ಆಸನ ವ್ಯವಸ್ಥೆ ಕಲ್ಪಿಸಲಾಗುವುದು. ಜೂನ್ 2ರಿಂದ ದೆಹಲಿ-ದುಬೈ-ದೆಹಲಿ ಮಾರ್ಗದಲ್ಲಿ ವಾರಕ್ಕೆ ಇಷ್ಟೇ ಆಸನಗಳ ಸೌಲಭ್ಯ ಇರುವ ವಿಮಾನಗಳು ಸಂಚರಿಸಲಿವೆ.

ADVERTISEMENT

ದೆಹಲಿ ಮತ್ತು ಮುಂಬೈನಿಂದ ದುಬೈಗೆ ಪ್ರೋತ್ಸಾಹಕ ದರದ ರೂಪದಲ್ಲಿ ಒಂದು ಮಾರ್ಗಕ್ಕೆ (ಒನ್ ವೇ) ಇಕಾನಮಿ ದರ್ಜೆಗೆ ಎಲ್ಲ ತೆರಿಗೆ ಸಹಿತ ₹7,777 ದರ ನಿಗದಿ ಮಾಡಲಾಗಿದೆ. ಜುಲೈ 31ರೊಳಗೆ ಪ್ರಯಾಣ ಮಾಡಬೇಕು.

ದೇಶೀಯವಾಗಿ ಭೋಪಾಲ್-ಪುಣೆ-ಭೋಪಾಲ್ ಮಾರ್ಗದಲ್ಲಿ ಮತ್ತು ವಾರಾಣಸಿ-ಚೆನ್ನೈ-ವಾರಾಣಸಿ ಮಾರ್ಗದಲ್ಲಿ ಜೂನ್ 5 ರಿಂದ ಹೊಸ ವಿಮಾನಗಳು ಸಂಚರಿಸಲಿವೆ.

ದೆಹಲಿ- ಭೋಪಾಲ್ ಮಾರ್ಗದಲ್ಲಿ ವಾರಕ್ಕೆ ಸದ್ಯ 14 ವಿಮಾನಗಳು ಸಂಚರಿಸುತ್ತಿದ್ದು, ಈ ಸಂಖ್ಯೆಯನ್ನು 20ಕ್ಕೆ ಏರಿಸಲಾಗಿದೆ. ಅದೇ ರೀತಿ, ದೆಹಲಿ-ರಾಯಪುರ-ದೆಹಲಿ ಮಾರ್ಗದಲ್ಲಿ ಸದ್ಯ ವಾರಕ್ಕೆ 7 ವಿಮಾನಗಳು ಸಂಚರಿಸುತ್ತಿದ್ದು, ಈ ಸಂಖ್ಯೆಯನ್ನು 14 ಕ್ಕೆ ಏರಿಸಲಾಗಿದೆ.

ದೆಹಲಿ-ಬೆಂಗಳೂರು-ದೆಹಲಿ, ದೆಹಲಿ-ಅಮೃತಸರ, ದೆಹಲಿ-ಅಹಮದಾಬಾದ್-ಚೆನ್ನೈ ಮತ್ತು ಚೆನ್ನೈ ಹಾಗೂ ಕೋಲ್ಕತ್ತ, ದೆಹಲಿ-ವಡೋದರ, ದೆಹಲಿ-ವಿಶಾಖಪಟ್ಟಣದ ನಡುವೆ ಸಂಚರಿಸುವ ವಿಮಾನಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.